ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂದಾಯ ದಾಖಲೆ ಡಿಜಿಟಲೀಕರಣ: ವಾರದೊಳಗೆ ಭೂಸುರಕ್ಷಾ ಯೋಜನೆ ಆರಂಭ- ಕೃಷ್ಣ ಬೈರೇಗೌಡ

ಕಂದಾಯ ಇಲಾಖೆಯ ದಾಖಲೆಗಳನ್ನು ಡಿಜಿಟಲೀಕರಣ ಮಾಡಲು ಹಾಗೂ ಸುಳ್ಳು ದಾಖಲೆ ಸೃಷ್ಟಿಸುವುದನ್ನು ತಡೆಯಲು ‘ಭೂಸುರಕ್ಷಾ’ ಯೋಜನೆ
Published 31 ಜನವರಿ 2024, 10:57 IST
Last Updated 31 ಜನವರಿ 2024, 10:57 IST
ಅಕ್ಷರ ಗಾತ್ರ

ಬೆಳಗಾವಿ: ‘ಕಂದಾಯ ಇಲಾಖೆಯ ದಾಖಲೆಗಳನ್ನು ಡಿಜಿಟಲೀಕರಣ ಮಾಡಲು ಹಾಗೂ ಸುಳ್ಳು ದಾಖಲೆ ಸೃಷ್ಟಿಸುವುದನ್ನು ತಡೆಯಲು ‘ಭೂಸುರಕ್ಷಾ’ ಯೋಜನೆಯನ್ನು ಒಂದು ವಾರದೊಳಗೆ ರಾಜ್ಯದಾದ್ಯಂತ ಆರಂಭಿಸಲಾಗುವುದು’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಬುಧವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಂದಾಯ ಇಲಾಖೆಯಲ್ಲಿನ ಹಳೆಯ ದಾಖಲೆಗಳು ಶಿಥಿಲಾವಸ್ಥೆ ತಲುಪಿವೆ. ದಾಖಲೆ ಪಡೆಯಲು ಜನರಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಆ ದಾಖಲೆಗಳನ್ನು ಶಾಶ್ವತವಾಗಿ ಸಂರಕ್ಷಿಸುವುದು ಮತ್ತು ನಕಲಿ ಸೃಷ್ಟಿಗೆ ತಡೆಯೊಡ್ಡುವ ಸಲುವಾಗಿ 31 ಜಿಲ್ಲೆಗಳ ತಲಾ ಒಂದು ತಾಲ್ಲೂಕಿನಲ್ಲಿ ಪ್ರಥಮ ಹಂತವಾಗಿ ಯೋಜನೆಗೆ ಚಾಲನೆ ಕೊಡಲಾಗುತ್ತಿದೆ. ಎಲ್ಲ ದಾಖಲೆಗಳನ್ನು 100 ದಿನಗಳಲ್ಲಿ ಡಿಜಿಟಲೀಕರಣ ಮಾಡಲಾಗುವುದು’ ಎಂದರು.

‘ಭೂಮಾಪನ ಇಲಾಖೆಯಲ್ಲಿನ ಕೆಲಸಗಳಿಗೆ ವೇಗ ನೀಡಲು ಫೆಬ್ರುವರಿಯಲ್ಲಿ 750 ಪರವಾನಗಿ ಭೂಮಾಪಕರನ್ನು (ಲೈಸೆನ್ಸ್‌ ಸರ್ವೇಯರ್ಸ್‌) ತಾಲ್ಲೂಕು ಕೇಂದ್ರಗಳಲ್ಲಿ ನಿಯೋಜಿಸಲಾಗುವುದು. 357 ಸರ್ಕಾರಿ ಸರ್ವೇಯರ್‌ಗಳು ಮತ್ತು ಸಹಾಯಕ ನಿರ್ದೇಶಕರ ನೇಮಕಾತಿಗೆ ಅನುಮೋದನೆ ಸಿಕ್ಕಿದ್ದು, ಕರ್ನಾಟಕ ಲೋಕಸೇವಾ ಆಯೋಗದಿಂದ ನೇಮಕ ಪ್ರಕ್ರಿಯೆ ಕೈಗೊಳ್ಳಲಾಗುವುದು. ಖಾಲಿ ಇರುವ 592 ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಲಾಗುವುದು’ ಎಂದು ತಿಳಿಸಿದರು.

‘₹30 ಕೋಟಿ ವೆಚ್ಚದಲ್ಲಿ ರಾಜ್ಯದಲ್ಲಿ ಸರ್ವೇಯರ್‌ಗಳಿಗೆ ಉಪಕರಣ ಒದಗಿಸಲಾಗುವುದು. ಇದರಿಂದಾಗಿ ನಿಗದಿತ ಸಮಯದಲ್ಲಿ ಸಿಬ್ಬಂದಿ ಹೆಚ್ಚಿನ ಸಮೀಕ್ಷೆ ಕೈಗೊಳ್ಳಬಹುದು’ ಎಂದರು.

‘ನಾನು ಕಂದಾಯ ಸಚಿವನಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ತಹಶೀಲ್ದಾರ್, ಸಹಾಯಕ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳ ನ್ಯಾಯಾಲಯಗಳಲ್ಲಿನ ಹೆಚ್ಚಿನ ಪ್ರಕರಣ ಬಾಕಿ ಇದ್ದವು. ಈಗ ತ್ವರಿತವಾಗಿ ಪ್ರಕರಣ ಇತ್ಯರ್ಥ ಮಾಡಲಾಗುತ್ತಿದೆ. ತಹಶೀಲ್ದಾರ್ ನ್ಯಾಯಾಲಯದಲ್ಲಿ ಬಾಕಿ ಇದ್ದ 2,215 ಪ್ರಕರಣಗಳಲ್ಲಿ ಈಗ 107 ಮಾತ್ರ ಉಳಿದಿವೆ. ಸಹಾಯಕ ಆಯುಕ್ತರ ನ್ಯಾಯಾಲಯಗಳಲ್ಲಿನ 60 ಸಾವಿಕ್ಕೂ ಅಧಿಕ ಪ್ರಕರಣಗಳಲ್ಲಿ 34,377 ಇತ್ಯರ್ಥವಾಗಿವೆ’ ಎಂದರು.

‘ಜಾತಿ ಗಣತಿಗೆ ಸಂಬಂಧಿಸಿ ಸಚಿವ ಸಂಪುಟದಲ್ಲಿ ಒಂದೆರಡು ಬಾರಿ ಅನೌಪಚಾರಿಕ ಮಾತುಕತೆ ಆಗಿದೆ. ಇದರ ನಿರ್ಧಾರವನ್ನು ಯಾವಾಗ ತೆಗೆದುಕೊಳ್ಳಲಾಗುವುದು ಎಂದು ಸರ್ಕಾರವೇ ತಿಳಿಸುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT