ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾವೈಕ್ಯ ದಿನ’ ಘೋಷಣೆಗೆ ದಿಂಗಾಲೇಶ್ವರ ಸ್ವಾಮೀಜಿ ತಕರಾರು

‘ಭಾವೈಕ್ಯ ದಿನ’ ಘೋಷಣೆಗೆ ತಕರಾರು
Last Updated 18 ಏಪ್ರಿಲ್ 2022, 21:03 IST
ಅಕ್ಷರ ಗಾತ್ರ

ಅಕ್ಕಿಆಲೂರ (ಹಾವೇರಿ ಜಿಲ್ಲೆ): ‘ಗದುಗಿನ ತೋಂಟದ ಸಿದ್ಧಲಿಂಗ ಸ್ವಾಮೀಜಿ ಹೆಸರಿನ ಮೇಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ‘ಭಾವೈಕ್ಯ ದಿನ’ ಘೋಷಿಸುವ ಮೂಲಕ ಆರ್‌ಎಸ್‌ಎಸ್‌ ಹಾಗೂ ವಿಎಚ್‌ಪಿ ನಿಯಮಗಳನ್ನು ವಿರೋಧಿಸುವ ಹುನ್ನಾರದಲ್ಲಿದ್ದಂತೆ ಕಂಡುಬರುತ್ತಿದೆ’ ಎಂದು ಶಿರಹಟ್ಟಿಯ ಮಹಾಸಂಸ್ಥಾನ ಮಠದ ದಿಂಗಾಲೇಶ್ವರ ಸ್ವಾಮೀಜಿ ಟೀಕಿಸಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಅವರು ಮಠಗಳ ವಿಷಯದಲ್ಲಿಯೂ ಒಡೆದು–ಆಳುವ ರಾಜಕೀಯ ಮಾಡುತ್ತಿರುವುದು ಸ್ಪಷ್ಟವಾಗಿದೆ. ಅವರ ನಡೆಯೇ ವಿಚಿತ್ರವಾಗಿದೆ’ ಎಂದರು.

‘ಭಾವೈಕ್ಯ ಮತ್ತು ತೋಂಟದ ಸಿದ್ಧಲಿಂಗ ಸ್ವಾಮೀಜಿಗೂ ಯಾವ ಸಂಬಂಧವಿಲ್ಲ. ಬದುಕಿನುದ್ದಕ್ಕೂ ಬ್ರಾಹ್ಮಣ ಸಮಾಜವನ್ನು ಬೈಯುತ್ತಾ, ಲಿಂಗಾಯತರು, ಬ್ರಾಹ್ಮಣರು, ದಲಿತರು, ಮುಸ್ಲಿಮರಲ್ಲಿ ಭೇದಭಾವ ಉಂಟು ಮಾಡುತ್ತಿದ್ದರು. ಸಮಾಜ ಸಮಾಜಗಳ ಮಧ್ಯೆ ಗೊಂದಲ ಸೃಷ್ಟಿಸುತ್ತಿದ್ದರು. ವೀರಶೈವವೇ ಬೇರೆ ಲಿಂಗಾಯತವೇ ಬೇರೆ ಎಂದು ಹೇಳಿ ಬೆಂಕಿ ಹಚ್ಚುವ ಕೆಲಸ ಮಾಡಿ ಇಡೀ ಅಖಂಡ ಸಮಾಜ ಒಡೆಯುವ ಪ್ರಯತ್ನಕ್ಕೆ ಕಾರಣರಾಗಿದ್ದರು’ ಎಂದು ಟೀಕಿಸಿದರು.

‘ತೋಂಟದ ಸಿದ್ದಲಿಂಗ ಸ್ವಾಮೀಜಿ ಹೆಸರಿನಲ್ಲಿ ನೂರು ನಿರ್ಣಯ ಕೈಗೊಂಡರೂ ಅಭ್ಯಂತರವಿಲ್ಲ. ಲೋಕಸಭೆ, ವಿಧಾನಸಭೆಯಲ್ಲಿ ಅವರ ಮೂರ್ತಿ ಪ್ರತಿಷ್ಠಾಪಿಸಿದರೂ ತಕರಾರಿಲ್ಲ, ಅವರ ಹೆಸರ ಮೇಲೆ ಪ್ರಶಸ್ತಿ ಘೋಷಿಸಿದರೂ ವಿರೋಧಿಸಲ್ಲ. ಆದರೆ ಭಾವೈಕ್ಯ ದಿನ ಘೋಷಣೆ ಒಪ್ಪುವುದಿಲ್ಲ. ಸ್ವಾಮೀಜಿ ನಡೆದು ಬಂದ ದಾರಿಗೂ ಮುಖ್ಯಮಂತ್ರಿಗಳ ನಿರ್ಣಯಕ್ಕೂ ವ್ಯತ್ಯಾಸವಿದೆ’ ಎಂದರು.

‘ಶಿರಹಟ್ಟಿಯ ಜಗದ್ಗುರು ಫಕೀರೇಶ್ವರ ಮಠದ ‘ಫಕೀರೇಶ್ವರರ ಜನ್ಮದಿನ’ ಅಥವಾ ಜಾತ್ರೆಯ ದಿನವಾದ ಅಗಿ ಹುಣ್ಣಿಮೆಯನ್ನು ಭಾವೈಕ್ಯ ದಿನ ಎಂದು ಘೋಷಿಸಬೇಕು. ಮುಖ್ಯಮಂತ್ರಿಗಳು ಭಾವೈಕ್ಯ ದಿನ ಕುರಿತ ಈಗಿನ ಘೋಷಣೆಯನ್ನು ಹಿಂಪಡೆದು ಬೇರೊಂದು ನಿರ್ಣಯ ಮಾಡಬೇಕು’ ಎಂದು ಸ್ವಾಮೀಜಿ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT