ಬೆಂಗಳೂರು: ‘ಕುಮಾರಸ್ವಾಮಿ ಏನೇನೋ ಮಾತನಾಡಿ ತಮ್ಮ ಗೌರವವನ್ನು ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಜನ ಅವರನ್ನು ನೋಡಿ ನಗುತ್ತಿದ್ದಾರೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
‘ಟೆಂಟ್‌ಗಳಲ್ಲಿ ನೀಲಿಚಿತ್ರಗಳನ್ನು ಪ್ರದರ್ಶಿಸುತ್ತಿದ್ದರು’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಮತ್ತೆ ಆರೋಪಿಸಿರುವ ಬಗ್ಗೆ ಸುದ್ದಿಗಾರರು ಕೇಳಿದಾಗ ಪ್ರತಿಕ್ರಿಯಿಸಿದ ಶಿವಕುಮಾರ್, ‘ ಹತಾಶೆಯು ಅವರನ್ನು ಈ ರೀತಿಯಾಗಿ ಮಾತನಾಡಿಸುತ್ತಿದೆ’ ಎಂದರು.
‘ಡಿ.ಕೆ. ಶಿವಕುಮಾರ್ ಹೀಗೆ ಮಾಡಿದ್ದರೇ ಎಂದು ಕನಕಪುರದ ಜನರನ್ನು ಕುಮಾರಸ್ವಾಮಿ ಕೇಳಲಿ. ನಾನು ಈ ರೀತಿಯ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದೆ ಎಂದು ಕ್ಷೇತ್ರದ ಜನರು ಹಾಗೂ ನಿಮ್ಮ (ಜೆಡಿಎಸ್) ಕಾರ್ಯಕರ್ತರು ಹೇಳಿದರೆ, ಈ ಕೂಡಲೇ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಆಗ ನೀವೇನು (ಕುಮಾರಸ್ವಾಮಿ) ಮಾಡುತ್ತೀರಾ’ ಎಂದು ಪ್ರಶ್ನಿಸಿದರು.
‘ಕುಮಾರಸ್ವಾಮಿಯವರು, ಅವರ ತಂದೆ ನನ್ನ ವಿರುದ್ದ ಚುನಾವಣೆಗೆ ನಿಂತಿದ್ದಾಗ ಯಾಕೆ ಈ ವಿಚಾರ ಎತ್ತಲಿಲ್ಲ? ಈಗ ಏಕೆ ಈ ರೀತಿ ಮಾತನಾಡುತ್ತಿದ್ದಾರೆ. ನಾನು ಇಂದಿರಾ ಗಾಂಧಿ ಅವರ ನೆನಪಿನಲ್ಲಿ ಟೆಂಟ್‌ಗಳನ್ನು ತೆರೆದಿದ್ದವನು’ ಎಂದು ತಿರುಗೇಟು ನೀಡಿದರು.
‘ಕುಮಾರಸ್ವಾಮಿ ವಿರುದ್ದ ಕಾಂಗ್ರೆಸ್ ಕಾರ್ಯಕರ್ತರು ಭಿತ್ತಿಪತ್ರಗಳನ್ನು ಹಾಕಿದ್ದಾರೆ’ ಎಂದಾಗ ‘ಯಾರು ಹಾಕಿದ್ದರೂ ತಪ್ಪೇ. ನಾನು ಇಂತಹ ಕೀಳುಮಟ್ಟದ ರಾಜಕಾರಣಕ್ಕೆ ಇಳಿಯುವುದಿಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.