ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಬದುಕಿನ ಮೇಲೆ ಗದಾಪ್ರಹಾರ: ಡಿ.ಕೆ. ಶಿವಕುಮಾರ್

Last Updated 2 ಏಪ್ರಿಲ್ 2022, 14:50 IST
ಅಕ್ಷರ ಗಾತ್ರ

ಬೆಂಗಳೂರು: ಕಳೆದ ಒಂದು ವಾರದಿಂದ ರೈತರ ಬದುಕಿನ ಮೇಲೆ ಗದಾಪ್ರಹಾರ ನಡೆಯುತ್ತಿದೆ. ಸಮಾಜದಲ್ಲಿ ಅಶಾಂತಿ ಮೂಡಿಸಲು, ರಾಜಕೀಯದ ಗುರಿ ಇಟ್ಟುಕೊಂಡು ಒಂದು ಧರ್ಮದ ಮೇಲೆ ಪ್ರಯೋಗ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.

ನಿನ್ನೆ ಪಶುಸಂಗೋಪನಾ ಇಲಾಖೆಯಿಂದ ಆದೇಶ ಹೊರಡಿಸಿ, ಪೊಲೀಸ್ ಹಾಗೂ ಇತರ ಅಧಿಕಾರಿಗಳು ಸೇರಿ ಕೋಳಿ, ಕುರಿ ವ್ಯಾಪಾರ ನಡೆಸುತ್ತಿರುವವರ ಮೇಲೆ ನಿಯಂತ್ರಣ ಮಾಡಲು ಹೊರಟಿದ್ದಾರೆ. ರಾಜ್ಯದ ವಿವಿಧ ಕಡೆಗಳಿಂದ ರೈತರು ಕರೆ ಮಾಡಿ, 'ಸರ್ಕಾರದ ಈ ಆದೇಶದಿಂದ ನಮ್ಮ ಕುರಿ, ಕೋಳಿಗಳನ್ನು ಕೊಳ್ಳುವವರಿಲ್ಲದಂತಾಗಿದೆ. ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ಒಂದು ಪಕ್ಷದ ಅಧ್ಯಕ್ಷನಾಗಿ ನೀವು ಯಾಕೆ ಸುಮ್ಮನೆ ಕೂತಿದ್ದೀರಿ?' ಎಂದು ಕೇಳುತ್ತಿದ್ದಾರೆ ಎಂದು ಹೇಳಿದರು.

ನಾನು ಕೂಡ ವಿದ್ಯಾರ್ಥಿಯಾಗಿದ್ದ ಸಮಯದಲ್ಲಿ ನಮ್ಮ ಊರಿನಲ್ಲಿ ಹಾಗೂ ಬೆಂಗಳೂರಿನಲ್ಲಿ ಕೋಳಿ ಫಾರಂ ಇಟ್ಟುಕೊಂಡಿದ್ದೆ. ನನಗೆ ಇದರ ವ್ಯಾಪಾರ, ವ್ಯವಹಾರ ಎಲ್ಲವೂ ಗೊತ್ತಿದೆ. ನಮ್ಮ ಮನೆಯಲ್ಲಿ ಕುರಿಗಳನ್ನು ಸಾಕಿದ್ದೆವು. ಕೋಳಿಗಳ ವಧೆಗೆ ಇಂತಿಷ್ಟು ಸಮಯ ಎಂದು ಇರುತ್ತದೆ. ಆ ಸಮಯ ಮೀರಿದರೆ, ಅದು ಸಾಕಣೆ ಮಾಡುವವರಿಗೆ ಹೊರೆಯಾಗಿ ನಷ್ಟ ಅನುಭವಿಸುವಂತಾಗುತ್ತದೆ. ಹೀಗಾಗಿ ನಮ್ಮ ರೈತರು, ವರ್ತಕರು, ಅವರು ಯಾವುದೇ ಸಮುದಾಯದವರಿರಲಿ, ತಮ್ಮ ಬದುಕನ್ನು ಯಾವ ರೀತಿ ನಡೆಸಿಕೊಂಡು ಹೋಗುತ್ತಿದ್ದಾರೋ ಅದರಂತೆ ಸಾಗಲು ಸರ್ಕಾರ ಅವಕಾಶ ನೀಡಬೇಕು ಎಂದು ಹೇಳಿದರು.

ನಮ್ಮ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ. ಇದನ್ನು ಹಾಳು ಮಾಡುವುದು ಬೇಡ. ಈ ಹೊಸತೊಡುಕು ಆಚರಣೆಯನ್ನು ಪ್ರತಿ ವರ್ಷ ಆಚರಿಸಿಕೊಂಡು ಬರುತ್ತಿದ್ದೇವೆ. ಇಷ್ಟು ದಿನಗಳ ಕಾಲ ಮಾಂಸ ವ್ಯಾಪಾರ ಮಾಡುವವರು ಇಂತಿಷ್ಟು ದರ ಎಂದು ಹಾಕುತ್ತಿದ್ದರು. ಈಗ ಅವರ ಸ್ಥಿತಿ ಏನಾಗಿದೆ ಎಂದು ಹೋಗಿ ನೋಡಿ. ಆರ್‌ಎಸ್‌ಎಸ್, ಬಿಜೆಪಿಯವರ ಈ ಆದೇಶಕ್ಕೆ ಯಾರೂ ಅಂಜಿಕೊಳ್ಳಬೇಡಿ. ರೈತರು ಹಾಗೂ ವ್ಯಾಪಾರಿಗಳ ಪರವಾಗಿ ಕಾಂಗ್ರೆಸ್ ಪಕ್ಷ ನಿಲ್ಲಲಿದೆ ಎಂದು ಭರವಸೆ ನೀಡಿದರು.

ನಾನು ಮುಖ್ಯಮಂತ್ರಿಗಳಿಗೆ ಕೈ ಮುಗಿದು ಬೇಡಿಕೊಳ್ಳುತ್ತೇನೆ, ನೀವು ಸಂವಿಧಾನದ ಹೆಸರಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ದು, ಅದಕ್ಕೆ ಗೌರವ ನೀಡಿ. ಎಲ್ಲರನ್ನು ಒಟ್ಟಾಗಿ ಸೌಹಾರ್ದತೆಯಿಂದ ತೆಗೆದುಕೊಂಡು ಹೋಗುತ್ತೇವೆ ಎಂದು ಪ್ರಮಾಣ ಮಾಡಿದ್ದೀರಿ. ಅವರ ಬದುಕು, ಹೊಟ್ಟೆ ಮೇಲೆ ಹೊಡೆಯಬೇಡಿ. ಈಗಾಗಲೇ ಉದ್ಯೋಗ ನಷ್ಟ ಆಗುತ್ತಿದೆ. ವ್ಯಾಪಾರ, ವ್ಯವಹಾರ ನಷ್ಟ ಆಗುತ್ತಿದೆ. ಎಲ್ಲರೂ ಒಟ್ಟಾಗಿ ಬದುಕಲು ಅವಕಾಶ ಮಾಡಿಕೊಡಿ. ಈ ಕೂಡಲೇ ನಿಮ್ಮಪಕ್ಷ ಹಾಗೂ ಸಂಘಟನೆ ಹೆಸರು ಹೇಳಿಕೊಂಡು ಮಾಧ್ಯಮಗಳಲ್ಲಿ ಪ್ರಚಾರ ಮಾಡುತ್ತಿದ್ದಾರೋ ಅದನ್ನು ನಿಲ್ಲಿಸಿ. ಎಲ್ಲರೂ ಶಾಂತಿಯುತವಾಗಿ ಹಬ್ಬ ಆಚರಣೆ ಮಾಡಲು ಅವಕಾಶ ಕಲ್ಪಿಸಿಕೊಡಿ ಎಂದು ಮನವಿ ಮಾಡುತ್ತೇನೆ ಎಂದು ಹೇಳಿದರು.

ಸರ್ಕಾರದ ಏಕಾಏಕಿ ಆದೇಶದ ಉದ್ದೇಶ ಏನು ಎಂಬ ಪ್ರಶ್ನೆಗೆ, 'ಚುನಾವಣೆ ಸಮೀಪಿಸುತ್ತಿದ್ದು, ರಾಜಕೀಯ ಮಾಡುವ ಉದ್ದೇಶ. ಚುನಾವಣೆಯನ್ನು ಸರಿಯಾಗಿ ಮಾಡಲು ಅವರ ಬಳಿ ಯಾವುದೇ ಸಾಧನೆಗಳಿಲ್ಲ. ಹೀಗಾಗಿ ಇಂತಹ ಭಾವನಾತ್ಮಕ ವಿಚಾರವನ್ನು ತರುತ್ತಿದ್ದಾರೆ. ನಾವು ಸಂವಿಧಾನದ ಆಶಯದಂತೆ ಸಮಾಜವನ್ನು ಒಂದು ಮಾಡಲು ಪ್ರಯತ್ನಿಸಿದರೆ, ಅವರು ಸಮಾಜ ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ' ಎಂದು ಉತ್ತರಿಸಿದರು.

ಹಲಾಲ್ ಕಟ್ ಗೆ ಅವಕಾಶ ನೀಡಬಾರದು ಎಂದು ಕೆಲವು ಸಂಘಟನೆಗಳು ಆಗ್ರಹಿಸುತ್ತಿವೆ ಎಂಬ ಪ್ರಶ್ನೆಗೆ, 'ಕೋಳಿ ಮತ್ತು ಕುರಿಗಳಿಗೆ ಪ್ರಜ್ಞೆ ತಪ್ಪಿಸಬೇಕಂತೆ. ಹೇಗೆ ತಪ್ಪಿಸಬೇಕು? ತಲೆಗೆ ಹೊಡೆದರೆ ಅವು ಸಾಯುವುದಿಲ್ಲವೇ? ಅದು ಹಿಂಸೆ ಅಲ್ಲವೇ? ಮಾಂಸ ವ್ಯಾಪಾರದಲ್ಲೂ ಅನೇಕ ಉಪ ವ್ಯಾಪಾರಗಳಿವೆ. ಇವು ಸಾಮಾಜಿಕವಾಗಿ ಬೆಸೆದುಕೊಂಡಿರುವ ವ್ಯಾಪಾರಗಳು. ನಾನು ಈ ವಿಚಾರದಲ್ಲಿ ಧ್ವನಿ ಎತ್ತದಿದ್ದರೆ ನನ್ನ ಸ್ಥಾನ ಹಾಗೂ ಜವಾಬ್ದಾರಿಗೆ ದ್ರೋಹ ಬಗೆದಂತಾಗುತ್ತದೆ. ಮುಖ್ಯಮಂತ್ರಿಗಳು ಸಂಜೆ ಒಳಗಾಗಿ ಉತ್ತರ ನೀಡಬೇಕು ಎಂದು ಆಗ್ರಹಿಸುತ್ತೇನೆ ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT