ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬರ ಪರಿಹಾರ | ಕೋಲಾರ, ದೊಡ್ಡಬಳ್ಳಾಪುರದಲ್ಲಿ ಪ್ರತಿಭಟನೆ: ಆರ್‌. ಅಶೋಕ

Published 28 ಜನವರಿ 2024, 15:50 IST
Last Updated 28 ಜನವರಿ 2024, 15:50 IST
ಅಕ್ಷರ ಗಾತ್ರ

ಬೆಂಗಳೂರು: ‘ರೈತರಿಗೆ ಪರಿಹಾರ ಕೊಡಿ, ಇಲ್ಲ ಕುರ್ಚಿ ಬಿಡಿ’ ಎಂಬ ಘೋಷಣೆಯೊಂದಿಗೆ ಕೋಲಾರದಲ್ಲಿ ಸೋಮವಾರ (ಜ. 29) ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ವಿದ್ಯುತ್‌ ಕಡಿತ, ಕಾಮಗಾರಿ ಸ್ಥಗಿತ ವಿರುದ್ಧ ಮರುದಿನ (ಜ. 30) ದೊಡ್ಡಬಳ್ಳಾಪುರದಲ್ಲಿ ಪ್ರತಿಭಟನೆ ನಡೆಯಲಿದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ತಿಳಿಸಿದರು.

ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ವೀರಾವೇಶದ ಭಾಷಣ ಮಾಡಿ ಅಧಿವೇಶನಕ್ಕೂ ಮುನ್ನ ರೈತರಿಗೆ ₹2 ಸಾವಿರ ಬರ ಪರಿಹಾರ ಘೋಷಿಸಿದ್ದರು. ಜನರಿಗೆ ಟೋಪಿ ಹಾಕುವುದು ಹೇಗೆಂಬುದನ್ನು ಅವರು ಕಲಿತಿದ್ದಾರೆ. ಅವರನ್ನು ಟೋಪಿ ಸಿದ್ದರಾಮಯ್ಯ ಎಂದು ಕರೆಯಬಹುದು’ ಎಂದರು.

‘ಮುಲ್ಲಾಗಳಿಗೆ ₹10 ಸಾವಿರ ಕೋಟಿ ನೀಡುತ್ತೇನೆಂದು ಹೇಳಿ ₹1 ಸಾವಿರ ಕೋಟಿ ಬಿಡುಗಡೆ ಮಾಡಿಬಿಟ್ಟರು. ಆದರೆ, ರೈತರಿಗೆ ₹105 ಕೋಟಿಯೂ ಬಿಡುಗಡೆ ಮಾಡಿಲ್ಲ. ಆದ್ದರಿಂದ ಕೋಲಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು’ ಎಂದರು.

‘ಕಾಫಿ ಬೆಳೆಗಾರರಿಗೆ ಲೀಸ್‌ಗೆ ಜಮೀನು ನೀಡಿದ್ದು, ಜಿಲ್ಲಾಧಿಕಾರಿಗಳು ರೈತರಿಗೆ ನೆರವಾಗುತ್ತಿಲ್ಲ. ಇದರ ವಿರುದ್ಧ ಕಾಫಿ ಬೆಳೆಗಾರರು ಪ್ರತಿಭಟನೆ ನಡೆಸಲಿದ್ದಾರೆ. ಎಲ್ಲ ಪ್ರತಿಭಟನೆಗಳಲ್ಲಿ ನಾನು ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಭಾಗವಹಿಸುತ್ತೇವೆ’ ಎಂದರು.

‘ಏಳು ಗಂಟೆ ವಿದ್ಯುತ್‌ ಎಂದು ಹೇಳಿ ಮೂರು ಗಂಟೆ ನೀಡುತ್ತಿದ್ದಾರೆ. ಹಿಂದಿನ ಬಿಜೆಪಿ ಅವಧಿಯಲ್ಲಿ ಸರ್‌ಪ್ಲೆಸ್‌ ನೀರು, ವಿದ್ಯುತ್‌ ನೀಡುತ್ತಿದ್ದರೆ, ಕಾಂಗ್ರೆಸ್‌ ಸರ್ಕಾರದಲ್ಲಿ ಹೋಪ್‌ಲೆಸ್‌, ಹೆಲ್ಪ್‌ಲೆಸ್‌ ಆಗಿದೆ. ಈಗ ಸರ್ಕಾರದಲ್ಲಿ ಹೆಣ ಹೊರುವುದಕ್ಕೂ ಹಣ ಇಲ್ಲ. ಎಲ್ಲರಿಗೂ ಸಂಪುಟ ದರ್ಜೆಯ ಸ್ಥಾನ ನೀಡಿ, ವೈದ್ಯಕೀಯ ಸಲಹೆಗಾರರು, ಆರ್ಥಿಕ ಸಲಹೆಗಾರರನ್ನು ನೇಮಿಸಿ ಉಡಾಫೆಯಾಗಿ ಹಣ ಖರ್ಚು ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ವಿತ್ತೀಯ ಶಿಸ್ತನ್ನು ರಾಜ್ಯವನ್ನು ಆಳಿದ ಯಾವ ಸರ್ಕಾರವೂ ದಾಟಿಲ್ಲ. ಸುಮಾರು 20-25 ವರ್ಷಗಳಿಂದ ಈ ವಿಚಾರದಲ್ಲಿ ಸರ್ಕಾರಗಳು ಮಾದರಿಯಾಗಿದ್ದವು. ಇವೆಲ್ಲವೂ ಈಗ ಕಿತ್ತುಕೊಂಡು ಹೋಗಿದೆ. ವೈದ್ಯರು, ಅಂಗನವಾಡಿ ನೌಕರರಿಗೆ ನೀಡಲು ಹಣವಿಲ್ಲ, ಕಾಮಗಾರಿಗಳು ಸ್ಥಗಿತವಾಗಿದೆ. ಸರ್ಕಾರ ದಿವಾಳಿಯಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಜಾತಿ ಗಣತಿ ವರದಿ ಅವೈಜ್ಞಾನಿಕವಾಗಿದ್ದು ಅದನ್ನು ಸ್ವೀಕರಿಸಬಾರದು ಎಂದು ಮುಖ್ಯಮಂತ್ರಿಗೆ ಸಲ್ಲಿಸಿದ ಮನವಿಗೆ ಕಾಂಗ್ರೆಸ್‌ ಸಚಿವರೇ ಸಹಿ ಹಾಕಿದ್ದಾರೆ. ಸಿದ್ದರಾಮಯ್ಯನವರು ಆಗಲೇ ರಾಜೀನಾಮೆ ನೀಡಬೇಕಿತ್ತು. ಇನ್ನು ಆ ವರದಿ ಜಾರಿ ಮಾಡಿದರೆ ಅದು ಯಾವ ನ್ಯಾಯ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT