ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇ.ಡಿ. ಸಮನ್ಸ್: ರಾಜಭವನ ಮುತ್ತಿಗೆಗೆ ಕೈ ಪಡೆ ಯತ್ನ

ಅರ್ಧದಲ್ಲೇ ತಡೆದ ಪೊಲೀಸರು, ಸಿದ್ದರಾಮಯ್ಯ ಸೇರಿದಂತೆ ಸಾವಿರಾರು ಮಂದಿ ವಶಕ್ಕೆ
Published : 16 ಜೂನ್ 2022, 20:30 IST
ಫಾಲೋ ಮಾಡಿ
Comments

ಬೆಂಗಳೂರು: ಕೇಂದ್ರದ ಬಿಜೆಪಿ ಸರ್ಕಾರವು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳನ್ನು ಬಳಸಿಕೊಂಡು ತಮ್ಮ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರಿಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಕಾರ್ಯಕರ್ತರು ರಾಜಭವನಕ್ಕೆ ಮುತ್ತಿಗೆ ಹಾಕಲು ಗುರುವಾರ ಯತ್ನಿಸಿದರು. ಸಾವಿರಾರು ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು ಪ್ರತಿಭಟನಕಾರರ ಯತ್ನವನ್ನು ತಡೆದರು.

ಎಐಸಿಸಿ ನಿರ್ದೇಶನದಂತೆ ರಾಜಭವನ ಮುತ್ತಿಗೆಗೆ ಬುಧವಾರ ಕರೆ ನೀಡಲಾಗಿತ್ತು. ಗುರುವಾರ ಬೆಳಿಗ್ಗೆಯೇ ಸಾವಿರಾರು ಮಂದಿ ಕಾಂಗ್ರೆಸ್‌ ಕಾರ್ಯಕರ್ತರು ಕ್ವೀನ್ಸ್‌ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ ಎದುರು ಸೇರಿದ್ದರು. ಅಲ್ಲಿಯೇ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ನಂತರ ಸಿದ್ದರಾಮಯ್ಯ, ಶಿವಕುಮಾರ್‌, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ನೇತೃತ್ವದಲ್ಲಿ ರಾಜಭವನದತ್ತ ಹೆಜ್ಜೆ ಹಾಕಿದರು. ಹಿರಿಯ ಮುಖಂಡ ಎಂ.ವೀರಪ್ಪ ಮೊಯಿಲಿ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್‌, ಆರ್‌. ಧ್ರುವನಾರಾಯಣ ಸೇರಿದಂತೆ ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಮೆರವಣಿಗೆಯಲ್ಲಿ ಹೊರಟರು.

ಪೊಲೀಸರ ತಡೆ: ಕ್ವೀನ್ಸ್‌ ರಸ್ತೆಯ ಮಾರ್ಗವಾಗಿ ಹೊರಟ ಪ್ರತಿಭಟನಕಾರರು ಎಸ್‌.ಜಿ. ಬಾಳೇಕುಂದ್ರಿ ವೃತ್ತ ತಲುಪುತ್ತಿದ್ದಂತೆ ಪೊಲೀಸರು ಎಲ್ಲ ದಿಕ್ಕುಗಳಿಂದಲೂ ತಡೆಯೊಡ್ಡಿದರು. ಮುಂದಕ್ಕೆ ಸಾಗಲು ಅವಕಾಶ ನೀಡುವಂತೆ ಕಾಂಗ್ರೆಸ್‌ ನಾಯಕರು ಮತ್ತು ಕಾರ್ಯಕರ್ತರು ಪಟ್ಟು ಹಿಡಿದರು. ಕೆಲಕಾಲ ತಳ್ಳಾಟ, ನೂಕಾಟ ನಡೆಯಿತು.

ರಾಜಭವನಕ್ಕೆ ತೆರಳಲು ಅವಕಾಶ ನೀಡುವಂತೆ ಆಗ್ರಹಿಸಿ ಸಿದ್ದರಾಮಯ್ಯ ಅಲ್ಲಿಯೇ ಧರಣಿ ಕೂರಲು ಮುಂದಾದರು. ಇತರ ನಾಯಕರೂ ಅವರನ್ನು ಬೆಂಬಲಿಸಿದರು. ಕಾಂಗ್ರೆಸ್‌ ಕಾರ್ಯಕರ್ತರು ಏರು ಧ್ವನಿಯಲ್ಲಿ ಕೇಂದ್ರದ ಬಿಜೆಪಿ ಸರ್ಕಾರಗಳ ವಿರುದ್ಧ ಘೋಷಣೆ ಕೂಗಲಾರಂಭಿಸಿದರು. ಸಿದ್ದರಾಮಯ್ಯ, ಶಿವಕುಮಾರ್‌, ಹರಿಪ್ರಸಾದ್‌ ಸೇರಿದಂತೆ ಕಾಂಗ್ರೆಸ್‌ ನಾಯಕರನ್ನು ಮೊದಲು ವಶಕ್ಕೆ ಪಡೆದ ಪೊಲೀಸರು, ಬಸ್‌ನಲ್ಲಿ ಕರೆದೊಯ್ದರು.

ನಂತರ ಸಾವಿರಾರು ಮಂದಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಹಲವು ಬಸ್‌ಗಳಲ್ಲಿ ಕರೆದೊಯ್ಯಲಾಯಿತು. ಕೆಲವು ಸಮಯದ ಬಳಿಕ ಎಲ್ಲರನ್ನೂ ಪೊಲೀಸರು ಬಿಡುಗಡೆ ಮಾಡಿದರು. ನಂತರ ಸಲೀಂ ಅಹ್ಮದ್‌ ನೇತೃತ್ವದ ನಿಯೋಗ ರಾಜಭವನಕ್ಕೆ ತೆರಳಿ ರಾಜ್ಯಪಾಲರ ಕಾರ್ಯದರ್ಶಿ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಿತು.

‘ಬಿಜೆಪಿಯೇತರ ಪಕ್ಷಗಳು ಕೈಜೋಡಿಸಲಿ’

ಬೆಂಗಳೂರು: ಕೇಂದ್ರದ ಬಿಜೆಪಿ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷಗಳ ನಾಯಕರಿಗೆ ಕಿರುಕುಳ ನೀಡುತ್ತಿದ್ದು, ಅದರ ವಿರುದ್ಧದ ಹೋರಾಟಕ್ಕೆ ಬಿಜೆಪಿಯೇತರ ಎಲ್ಲ ಪಕ್ಷಗಳೂ ಕೈಜೋಡಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರ ಸಂವಿಧಾನ, ಕಾನೂನು ಎಲ್ಲವನ್ನೂ ಗಾಳಿಗೆ ತೂರಿ, ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ, ಡಿಎಂಕೆ ಪಕ್ಷದ ಸ್ಟಾಲಿನ್‌, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್‌ ಸೇರಿದಂತೆ ವಿಪಕ್ಷಗಳ ನಾಯಕರು ಒಗ್ಗೂಡಬೇಕು’ ಎಂದರು.

ಹೆಚ್ಚಿದ ಸಂಚಾರ ದಟ್ಟಣೆ

ಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ಅವಧಿಯಲ್ಲಿ ಬಾಳೇಕುಂದ್ರಿ ವೃತ್ತ, ವಿಧಾನಸೌಧ, ಚಾಲುಕ್ಯ ವೃತ್ತ, ಎಂ.ಜಿ. ರಸ್ತೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಸೃಷ್ಟಿಯಾಗಿತ್ತು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಸ್ವಸ್ಥ

ಎಸ್‌.ಜಿ. ಬಾಳೇಕುಂದ್ರಿ ವೃತ್ತದಲ್ಲಿ ಪೊಲೀಸರು ಮೆರವಣಿಗೆಗೆ ತಡೆ ಹಾಕಿದ್ದ ಸಂದರ್ಭದಲ್ಲೇ ಮಹಾಲಕ್ಷ್ಮಿ ಬಡಾವಣೆ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ವಿ. ರಾಮಕೃಷ್ಣ ಅಸ್ವಸ್ಥರಾಗಿ ಕುಸಿದುಬಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

***

ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿಸಲು ನಾವು ಹೋರಾಟ ಆರಂಭಿಸಿದ್ದೇವೆ. ಕೇಂದ್ರೀಯ ತನಿಖಾ ಸಂಸ್ಥೆಗಳು ಬಿಜೆಪಿಯ ಕೈಗೊಂಬೆಯಂತೆ ಕೆಲಸ ಮಾಡಬಾರದು.

-ಡಿ.ಕೆ. ಶಿವಕುಮಾರ್‌,ಕೆಪಿಸಿಸಿ ಅಧ್ಯಕ್ಷ

***

ಕಾಂಗ್ರೆಸ್‌ನವರ ಹೋರಾಟದಿಂದ ರಾಜ್ಯದಲ್ಲಿ ಕೋವಿಡ್‌ ಸೋಂಕು ಹೆಚ್ಚಾದರೆ ಆ ಪಕ್ಷದವರೇ ಹೊಣೆ. ಕೋವಿಡ್‌ ನಿಯಂತ್ರಣ ಮಾರ್ಗಸೂಚಿ ಉಲ್ಲಂಘಿಸಿ ಪ್ರತಿಭಟನೆ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸುವ ಕುರಿತು ಮುಖ್ಯಮಂತ್ರಿ ಜತೆ ಚರ್ಚಿಸುತ್ತೇನೆ.


- ಡಾ.ಕೆ. ಸುಧಾಕರ್‌,ಆರೋಗ್ಯ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT