ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಕುಸಿದ ಶಿಕ್ಷಣದ ಬುನಾದಿ: ಬಿ.ವೈ. ವಿಜಯೇಂದ್ರ

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ
Published 18 ಮೇ 2024, 6:04 IST
Last Updated 18 ಮೇ 2024, 6:04 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಾಥಮಿಕ ಶಿಕ್ಷಣವೆಂದರೆ ಕೇವಲ ಅಕ್ಷರ ಕಲಿಕೆಯಲ್ಲ. ನಾಳಿನ ಪ್ರಜೆಗಳ ಭವಿಷ್ಯ ರೂಪಿಸುವ ನೈಜ ಅಡಿಪಾಯ. ಒಂದು ಸರ್ಕಾರ ಶಿಕ್ಷಣವನ್ನು ಆಲಕ್ಷಿಸಿದರೆ ದೇಶದ ಭವಿಷ್ಯವನ್ನು ಗಂಡಾಂತರಕ್ಕೆ ತಳ್ಳುವ ನೀಚ ಪ್ರವೃತ್ತಿಯಾಗುತ್ತದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಹೇಳಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಹೇಳಿಕೆ ನೀಡಿರುವ ಅವರು, ಕಾಂಗ್ರೆಸ್ ಸರ್ಕಾರದ ಶಿಕ್ಷಣ ಇಲಾಖೆಯಲ್ಲಿ ಇಂತಹ ಪ್ರವೃತ್ತಿ ಮೇಳೈಸುತ್ತಿರುವ ಹಿನ್ನೆಲೆಯಲ್ಲಿ ಪ್ರಾಥಮಿಕ ಶಿಕ್ಷಣ ಅರಾಜಕತೆಯತ್ತ ಸಾಗಿದೆ, ಇದನ್ನು ಮುಖ್ಯಮಂತ್ರಿ ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ದಿಕ್ಕಿಲ್ಲದ ಹಡಗಿನಂತೆ ಸಾಗಿದೆ ತಮ್ಮ ಮಕ್ಕಳ ಉಜ್ವಲ ಭವಿಷ್ಯದ ಕನಸು ಕಂಡಿರುವ ಲಕ್ಷಾಂತರ ಪೋಷಕರ ಆತಂಕದ ಪ್ರಶ್ನೆಗಳಿಗೆ ಉತ್ತರಿಸುವವರಿಲ್ಲದೆ ಅವರ ವೇದನೆ ಅರಣ್ಯರೋಧನವಾಗಿದೆ ಎಂದು ಹೇಳಿದ್ದಾರೆ.

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಬದಿಗೆ ಸರಿಸುವ ವಿದ್ವತ್ತು ಪ್ರದರ್ಶಿಸಲು ಹೋಗಿ ನೈಜ ಶಿಕ್ಷಣ ವ್ಯವಸ್ಥೆಯನ್ನು ದಮನ ಮಾಡಲು ಹೊರಟ ಸರ್ಕಾರ 'ಚಾಲನೆಯ ಅನುಭವವಿಲ್ಲದ ಚಾಲಕನೊಬ್ಬ ವಾಹನ ಅಥವಾ ರೈಲು ಮುನ್ನಡೆಸಿದರೆ ಯಾವ ಸ್ಥಿತಿ ಉಂಟಾಗಬಹುದು' ಅಂತದ್ದೇ ಸ್ಥಿತಿ ಇಂದು ರಾಜ್ಯದ ಪ್ರಾಥಮಿಕ ಹಾಗೂ ಶಿಕ್ಷಣ ಇಲಾಖೆಗೆ ಒದಗಿ ಬಂದಿದೆ. 'ಮೇಟಿ ವಿದ್ಯೆಗೆ ರೈತ, ಅಕ್ಷರ ವಿದ್ಯೆಗೆ ವಿನಯವಂತನಿದ್ದರೆ ಕೃಷಿ-ಶಿಕ್ಷಣ ಎರಡೂ ಸಮೃದ್ಧವಾಗುತ್ತದೆ ಎಂದು ಟೀಕಿಸಿದ್ದಾರೆ.

ಮುಖ್ಯಮಂತ್ರಿಗಳು ಈ ನಿಟ್ಟಿನಲ್ಲಿ ವಿವೇಕ ಬಳಸದೆ ವಿದ್ಯಾ ಇಲಾಖೆಯನ್ನು ವಿಧೇಯತೆ ಗೊತ್ತಿಲ್ಲದವರ ಕೈಗೆ ಒಪ್ಪಿಸಿದ್ದ ಕಾರಣಕ್ಕಾಗಿ ಇಂದು ಅವರೇ ಪಶ್ಚಾತಾಪ ಪಡುವಂತಹ ಪರಿಸ್ಥಿತಿ ಉದ್ಭವಿಸಿದೆ. ಈಗಲಾದರೂ ಈ ನಾಡನ್ನು ಹಾಗೂ ದೇಶವನ್ನು ಭವಿಷ್ಯತ್ತಿನಲ್ಲಿ ಕಟ್ಟುವ ಲಕ್ಷಾಂತರ ಮಕ್ಕಳ ಭವಿಷ್ಯವನ್ನು ಅಂಧಕಾರಕ್ಕೆ ತಳ್ಳಲ್ಪಡುತ್ತಿರುವ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯನ್ನು ಸರಿ ದಾರಿಗೆ ತರುವ ಕಟ್ಟುನಿಟ್ಟಿನ ಕ್ರಮ ವಹಿಸಲಿ. ಶಿಕ್ಷಣ ಬದ್ಧತೆ ಇದ್ದವರ ಕೈಗೆ ಇಲಾಖೆಯ ಸಾರಥ್ಯ ವಹಿಸಿಕೊಡಲಿ ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT