ಬೆಂಗಳೂರು: ಅರಣ್ಯಭೂಮಿ ಒತ್ತುವರಿ ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ಇತ್ಯರ್ಥವಾಗಿದ್ದರೂ ತೆರವಾಗಿರದ ಒತ್ತುವರಿಗಳನ್ನು ಮಾತ್ರ ತೆರವು ಮಾಡಲು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ವಿಧಾನ ಸೌಧದಲ್ಲಿ ಮಂಗಳವಾರ ತಮ್ಮನ್ನು ಭೇಟಿಯಾದ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ನೇತೃತ್ವದ ಜನಪ್ರತಿನಿಧಿಗಳು ಮತ್ತು ಕರಾವಳಿ ಜನಪರ ಒಕ್ಕೂಟದ ಪ್ರತಿನಿಧಿಗಳ ನಿಯೋಗಕ್ಕೆ ಸಚಿವರು ಈ ಭರವಸೆ ನೀಡಿದರು.
‘ಒತ್ತುವರಿ ತೆರವುಗೊಳಿಸುವ ಕುರಿತು ಈಗಾಗಲೇ ಸ್ಪಷ್ಟವಾಗಿ ಆದೇಶ ಕೊಟ್ಟಿದ್ದೇನೆ. ಒತ್ತುವರಿ ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥವಾಗಿದ್ದರೂ ತೆರವಾಗದೇ ಇರುವ ಬಗ್ಗೆ ನ್ಯಾಯಾಲಯವು ಸರ್ಕಾರಕ್ಕೆ ನೋಟಿಸ್ ನೀಡುತ್ತಿದೆ. ಆದ್ದರಿಂದ ಇಂತಹ ಒತ್ತುವರಿಗಳನ್ನು ಹಾಗೂ 2015ರ ನಂತರ ಅತಿಕ್ರಮಣವಾಗಿರುವುದನ್ನು ಮಾತ್ರ ತೆರವಿಗೆ ಸೂಚನೆ ನೀಡಲಾಗಿದೆ. ಉಳಿದಂತೆ ಮೂರು ಎಕರೆ ಒಳಗಿನ ಒತ್ತುವರಿ ಹಾಗೂ ಅರ್ಜಿಗಳು ವಿಲೇವಾರಿ ಆಗದೆ ಇರುವ ಒತ್ತುವರಿಗಳನ್ನು ಮುಟ್ಟಬಾರದು’ ಎಂದು ಸೂಚಿಸಿರುವುದಾಗಿ ನಿಯೋಗಕ್ಕೆ ತಿಳಿಸಿದರು.
‘ಒತ್ತುವರಿ ತೆರವುಗೊಳಿಸುವಂತೆ ಸಚಿವರು ನೀಡಿದ ಸೂಚನೆಯಿಂದಾಗಿ ಮಲೆನಾಡಿಗರಲ್ಲಿ ಆತಂಕ ಸೃಷ್ಟಿಯಾಗಿದೆ. ಸಣ್ಣ ಮತ್ತು ಅತಿ ಸಣ್ಣ ರೈತರು ಹಾಗೂ ಮನೆ ಕಟ್ಟಿಕೊಂಡವರೆಲ್ಲ ಭಯಭೀತರಾಗಿದ್ದಾರೆ. ಇಲಾಖೆಯ ಈ ನಿಲುವಿನಿಂದಾಗಿ ಹಳ್ಳಿಗಳಲ್ಲಿ ಸಣ್ಣ ಪುಟ್ಟ ರೈತರ ಮೇಲೆ ಅಧಿಕಾರಿಗಳು ದಬ್ಬಾಳಿಕೆ ನಡೆಸುತ್ತಿದ್ದಾರೆ. ಹಾಗಾಗಿ ನಿಮ್ಮ ಸ್ಪಷ್ಟವಾದ ನಿಲುವು ತಿಳಿಸಬೇಕು. ನ್ಯಾಯಾಲಯದಲ್ಲಿ ಇತ್ಯರ್ಥವಾಗಿರುವ ಕೃಷಿ ಭೂಮಿಯನ್ನು ಮುಂದಿನ ಫಸಲು ಕೊಯ್ಯುವವರೆಗೆ ತೆರವು ಮಾಡಬಾರದು’ ಎಂದು ನಿಯೋಗ ಮನವಿ ಮಾಡಿಕೊಂಡಿತು.
ಇದಕ್ಕೆ ಸ್ಪಂದಿಸಿದ ಸಚಿವರು, ‘ನಿಮ್ಮೆಲ್ಲರ ಕೋರಿಕೆ ಮೇರೆಗೆ ಇನ್ನೊಂದು ಸ್ಪಷ್ಟವಾದ ಸೂಚನೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ನೀಡುತ್ತೇನೆ. ಯಾವುದನ್ನು ತೆರವು ಮಾಡಬೇಕು ಮತ್ತು ಯಾವುದನ್ನು ತೆರವು ಮಾಡಬಾರದು ಹಾಗೂ ಯಾವ ಕಾರಣಕ್ಕಾಗಿ ಒತ್ತುವರಿ ತೆರವು ಮಾಡುತ್ತೇವೆ ಎಂಬ ಸ್ಪಷ್ಟ ಮಾಹಿತಿಯನ್ನು ಅಧಿಕಾರಿಗಳು ಮತ್ತು ಜನಸಾಮಾನ್ಯರಿಗೆ ತಲುಪುವಂತೆ ವ್ಯವಸ್ಥೆ ಮಾಡುತ್ತೇನೆ’ ಎಂಬ ಆಶ್ವಾಸನೆಯನ್ನು ನೀಡಿದರು.
‘ಒತ್ತುವರಿ ಮಾಡಿಕೊಂಡು ಕೃಷಿ ಮಾಡುತ್ತಿದ್ದಲ್ಲಿ, ಫಸಲನ್ನು ಪಡೆಯಲು ಅವಕಾಶ ಮಾಡಿಕೊಡಬೇಕು. ಸದ್ಯ ಜಾಗದ ಗಡಿ ಗುರುತಿಸಿ ಈಗ ಬಂದಿರುವ ಫಸಲನ್ನು ರೈತರು ಕೊಯ್ಲು ಮಾಡುವವರೆಗೂ ಕಾದು, ನಂತರ ಒತ್ತುವರಿ ತೆರವು ಮಾಡಲು ಅಧಿಕಾರಿಗಳಿಗೆ ಸೂಚಿಸುತ್ತೇನೆ’ ಎಂದು ಈಶ್ವರ ಖಂಡ್ರೆ ಅವರು ನಿಯೋಗಕ್ಕೆ ಭರವಸೆ ನೀಡಿದರು.
ನಿಯೋಗದಲ್ಲಿ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ತರೀಕೆರೆ ಶಾಸಕ ಶ್ರೀನಿವಾಸ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್ , ವಿಧಾನಪರಿಷತ್‌ನ ಮಾಜಿ ಸದಸ್ಯ ಗೋಪಾಲಸ್ವಾಮಿ ಹಾಗೂ ಮಲೆನಾಡು ಜನಪರ ಒಕ್ಕೂಟದ ಅನಿಲ್ ಹೊಸಕೊಪ್ಪ, ಸುಖೇಶ್ ದಾಸನಕೊಡಿಗೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.