ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ತಕ್ಷಣ ರಾಜ್ಯಕ್ಕೆ ₹ 5,000 ಕೋಟಿ ಪರಿಹಾರ ಬಿಡುಗಡೆ ಮಾಡಲಿ: ಈಶ್ವರ ಖಂಡ್ರೆ

Last Updated 26 ಆಗಸ್ಟ್ 2020, 8:44 IST
ಅಕ್ಷರ ಗಾತ್ರ

ಬೆಂಗಳೂರು: ‘ಉತ್ತರ ಕರ್ನಾಟಕ ಭಾಗದ ಜನರು ಪ್ರವಾಹದಿಂದ ತತ್ತರಿಸಿ ಹೋಗಿದ್ದಾರೆ. ಕೇಂದ್ರ ಸರ್ಕಾರ ತಕ್ಷಣ ರಾಜ್ಯಕ್ಕೆ ₹ 5,000 ಕೋಟಿ ಪರಿಹಾರ ಬಿಡುಗಡೆ ಮಾಡಬೇಕು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆಗ್ರಹಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಮಳೆ ಹಾನಿಗೆ ಒಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಮುಖ್ಯಮಂತ್ರಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಯಾವುದೇ ನೆರವು ಘೋಷಿಸಿಲ್ಲ. 14 ಸಾವಿರ ಮಂದಿಗೆ ಪರಿಹಾರವೇ ಸಿಕ್ಕಿಲ್ಲ’ ಎಂದರು.

‘ರಾಜ್ಯ ಸರ್ಕಾರದ ಬೊಕ್ಕಸ ಸಂಪೂರ್ಣ ಖಾಲಿಯಾಗಿದೆ. ತಕ್ಷಣ ಕೇಂದ್ರಕ್ಕೆ ನಿಯೋಗ ಕರೆದೊಯ್ಯಬೇಕು. ಕೇಂದ್ರದ ವಿತ್ತ ಸಚಿವರು ನಮ್ಮ ರಾಜ್ಯದ ಪ್ರತಿನಿಧಿಯಾದರೂ ರಾಜ್ಯಕ್ಕೆ ಯಾವುದೇ ನೆರವು ಘೋಷಿಸುತ್ತಿಲ್ಲ’ ಎಂದು ಅವರು ದೂರಿದರು.

‘ರಾಜ್ಯದ 56 ತಾಲ್ಲೂಕು, 1,000ಕ್ಕೂ ಹೆಚ್ಚು ಹಳ್ಳಿಗಳಿಗೆ ನೆರೆ ಬಿಸಿ ತಟ್ಟಿದೆ. 3,000 ಮನೆ ಕುಸಿತ, 80,000 ಹೆಕ್ಟೇರ್ ಬೆಲೆ ನಾಶವಾಗಿದೆ. 3,500 ಕಿಲೋ ಮೀಟರ್ ರಸ್ತೆ ಹಾಳಾಗಿದೆ. 365 ಕಟ್ಟಡ 250 ಸೇತುವೆ ಪ್ರವಾಹದಿಂದ ಕುಸಿದಿದೆ’ ಎಂದೂ ಅವರು ಮಾಹಿತಿ ನೀಡಿದರು.

‘ಕಳೆದ ವರ್ಷ ಬಂದ ನೆರೆಗೂ ಜನ ತತ್ತರಿಸಿ ಹೋಗಿದ್ದರು. ಆ ಸಂದರ್ಭದಲ್ಲಿ ಕೂಡಾ ಜನ ರಕ್ಷಣೆಗೆ ಬರುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ವಿಫಲವಾಯಿತು. ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕೂಡಾ ಜನರ ರಕ್ಷಣೆಗೆ ಬರಲಿಲ್ಲ. ಚುನಾವಣೆ ಸಮಯದಲ್ಲಿ ನಮ್ಮದು ಡಬಲ್ ಎಂಜಿನ್ ಸರ್ಕಾರ ಅಂತ ಹೇಳಿದ್ದರು. ಆದರೆ, ಕೇಂದ್ರ ಸರ್ಕಾರ ಜನರ ಸಂಕಷ್ಟಗಳಿಗೆ ಮಾತ್ರ ಸ್ಪಂದಿಸುತ್ತಿಲ್ಲ’ ಎಂದೂ ಖಂಡ್ರೆ ದೂರಿದರು.

‘ಕಳೆದ ಬಾರಿ ಸೌಜನ್ಯಕ್ಕೂ ರಾಜ್ಯದ ನೆರೆ ಅಧ್ಯಯನಕ್ಕೆ ಮೋದಿ ಬರಲಿಲ್ಲ. ಕಳೆದ ವರ್ಷ ರಾಜ್ಯ ಸರ್ಕಾರ ನೆರೆ ಸಂತ್ರಸ್ತರಿಗೆ ಎಷ್ಟು ಮನೆ ಕಟ್ಟಿ ಕೊಟ್ಟಿದೆ. ಯಾವ ರೀತಿ ಅವರಿಗೆ ಸಹಾಯ ಆಗಿದೆ ಎಂಬ ಬಗ್ಗೆ ಶ್ವೇತಪತ್ರ ಹೊರಡಿಸಲಿ’ ಎಂದೂ ಆಗ್ರಹಿಸಿದರು.

‘ಈ ಬಾರಿ ಪ್ರವಾಹದಿಂದ ₹ 10 ಸಾವಿರ ಕೋಟಿಯ ನಷ್ಟವಾಗಿದೆ. ಆದರೆ, ₹ 450 ಕೋಟಿ ಮಾತ್ರ ಪರಿಹಾರಕ್ಕೆ ಮನವಿ ಮಾಡಿದ್ದಾರೆ. ಪ್ರಧಾನಿಗೆ ಬಿಜೆಪಿ ನಾಯಕರು ಹೆದರುತ್ತಿದ್ದಾರೆ. ಬಿಜೆಪಿಯ 25 ಸಂಸದರು ರಾಜ್ಯದಿಂದ ಗೆದ್ದಿದ್ದಾರೆ. ಇಲ್ಲಿಯವರೆಗೆ ಅವರು ಪ್ರಧಾನಿ ಮೇಲೆ ಒತ್ತಡ ತಂದಿಲ್ಲ. ಅಂಜುಬುರುಕ ಸಂಸದರನ್ನು ರಾಜ್ಯದ ಜನ ಆರಿಸಿದ್ದಾರೆ’ ಎಂದರು.

ಶಾಸಕ ಪ್ರಿಯಾಂಕ್ ಖರ್ಗೆ ಅವರು ಕೂಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT