ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ ಶಾಸಕರಿಗೆ ತಲಾ ₹  50 ಲಕ್ಷ ನೀಡಿದ್ದರು: ಶಾಸಕ ಶ್ರೀನಿವಾಸ ಗೌಡ

Last Updated 11 ಜೂನ್ 2022, 19:23 IST
ಅಕ್ಷರ ಗಾತ್ರ

ಬೆಂಗಳೂರು: ‘ಮೇಲ್ಮನೆ ಚುನಾವಣೆ ವೇಳೆ ಇಂಚರ ಗೋವಿಂದರಾಜು ಪರಿಷತ್‌ ಸದಸ್ಯರಾಗಲು ಜೆಡಿಎಸ್‌ ಪಕ್ಷದ ಶಾಸಕರಿಗೆ ತಲಾ ₹ 50 ಲಕ್ಷ ನೀಡಿದ್ದಾರೆ. ನನಗೂ ಕೊಡಲು ಬಂದರು. ಆದರೆ, ನಾನು ತೆಗೆದುಕೊಳ್ಳಲಿಲ್ಲ’ ಎಂದು ಶ್ರೀನಿವಾಸಗೌಡ ಹೇಳಿದ್ದಾರೆ.

ಕೋಲಾರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜೆಡಿಎಸ್ ಪಕ್ಷದ ವರಿಷ್ಠರ ವಿರುದ್ಧ ವಾಗ್ದಾಳಿ ನಡೆಸಿದರು. ಇದೇವೇಳೆ, ಪರಿಷತ್ ಚುನಾವಣೆ ಕುರಿತಾದ ಹಣದ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.

ನಾನು ಕಾಂಗ್ರೆಸ್ ಪಕ್ಷವನ್ನು ಪ್ರೀತಿಸುತ್ತೇನೆ. ಹೀಗಾಗಿ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಿದ್ದೇನೆ ಎಂದು ಶಾಸಕ‌ ಕೆ. ಶ್ರೀನಿವಾಸ ಗೌಡ ಹೇಳಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಕೋಲಾರ ಶಾಸಕ ಶ್ರೀನಿವಾಸ ಗೌಡ ಕಾಂಗ್ರೆಸ್ ಅಭ್ಯರ್ಥಿಗೆ ಮತ‌ ನೀಡಿದ್ದಾರೆ. ಇದು ಅಲ್ಲಿನ ಮತದಾರರಿಗೆ ಮಾಡಿದ ಅವಮಾನ ಎಂದು ಹೇಳಿದ್ದರು. ಜೆಡಿಎಸ್ ಕಾರ್ಯಕರ್ತರು ಇಂದು ಶ್ರೀನಿವಾಸಗೌಡ ಮನೆ ಮೂಮದೆ ಪ್ರತಿಭಟನೆ ಸಹ ನಡೆಸಿದ್ದರು.

'ಏಳು ತಿಂಗಳ ಹಿಂದೆಯೇ ನನ್ನನ್ನು ಉಚ್ಚಾಟನೆ ಮಾಡಿರುವುದಾಗಿ ದೇವೇಗೌಡರ ಮೊಮ್ಮಗ, ಸಂಸದ ಪ್ರಜ್ವಲ್ ರೇವಣ್ಣ ಕೂಡ ಹೇಳಿದ್ದಾರೆ. ಹೀಗಾಗಿ, ನಾನು ಯಾವುದೇ ಪಕ್ಷಕ್ಕೆ ಹೋಗಬಹುದು. ರಾಜ್ಯಸಭೆ ಚುನಾವಣೆಯಲ್ಲಿ ನಾನು ಕಾಂಗ್ರೆಸ್‌ಗೆ ಮತ ನೀಡಿದ್ದು ನಿಜ. ಅದನ್ನು ಪ್ರಶ್ನಿಸಲು ಅವರು ಯಾರು?' ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಶ್ರೀನಿವಾಸ ಗೌಡ ತಿರುಗೇಟು ನೀಡಿದರು.

‘ಕುಮಾರಸ್ವಾಮಿ ಸರ್ವಾಧಿಕಾರಿ ಧೋರಣೆ ಉಳ್ಳವರು. ಅವರ ವರ್ತನೆ ಸರಿ ಇಲ್ಲ. 2018ರಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿದಾಗ ಉದ್ದೇಶಪೂರ್ವಕವಾಗಿ ನನಗೆ ಮಂತ್ರಿ ಸ್ಥಾನ ನೀಡಲಿಲ್ಲ. ರಾಜಕೀಯದಲ್ಲಿ ನಾನು ಕುಮಾರಸ್ವಾಮಿ ಅವರಿಗಿಂತ ಹಿರಿಯ’ ಎಂದರು.

ಶ್ರೀನಿವಾಸಗೌಡರ ಹೆಸರಲ್ಲಿ ‘ಸಮಾರಾಧನೆ’ ಪತ್ರ!
ಕೋಲಾರ:
ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕಿದ್ದಾಗಿ ಹೇಳಿರುವ ಕೋಲಾರ ಜೆಡಿಎಸ್‌ ಶಾಸಕ ಕೆ.ಶ್ರೀನಿವಾಸಗೌಡರ ಹೆಸರಲ್ಲಿ‘ಕೈಲಾಸ ಸಮಾರಾಧನೆ’ ಎಂಬ ಪತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ.

ಫೇಸ್‌ಬುಕ್‌ನಲ್ಲಿ ‘ಕುಮಾರಸ್ವಾಮಿ ಫಾರ್‌ ಸಿಎಂ’ ಖಾತೆಯಲ್ಲಿ ಈ ಪತ್ರ ಹಾಕಿದ್ದು, ‘ಪಕ್ಷಕ್ಕೆ, ಕಾರ್ಯಕರ್ತರಿಗೆ ಮೋಸ ಮಾಡಿ ದುಡ್ಡಿಗಾಗಿ ತಮ್ಮ ಮತ ಮಾರಿಕೊಂಡು, ಮತದಾರರ ಪಾಲಿಗೆ ತೀರಿಕೊಂಡ ಕೋಲಾರದ ಶ್ರೀನಿವಾಸಗೌಡನಿಗೆ ಭಾವಪೂರ್ಣ ಶ್ರದ್ಧಾಂಜಲಿ’ ಎಂದು ಬರೆದಿದ್ದಾರೆ.

ಇವನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT