ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಶಾಸಕ ಶ್ರೀನಿವಾಸಗೌಡರ ಮನೆ ಮುಂದೆ ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ

ಕೋಲಾರ ಕ್ಷೇತ್ರದ ಶಾಸಕರ ವಿರುದ್ಧ ಜೆಡಿಎಸ್‌ ಮುಖಂಡರ ವಾಗ್ದಾಳಿ
Last Updated 10 ಜೂನ್ 2022, 14:03 IST
ಅಕ್ಷರ ಗಾತ್ರ

ಕೋಲಾರ: ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿರುವುದಾಗಿ ಹೇಳಿಕೆ ನೀಡಿರುವ ಕೋಲಾರ ಕ್ಷೇತ್ರದ ಜೆಡಿಎಸ್‌ ಶಾಸಕ ಕೆ.ಶ್ರೀನಿವಾಸಗೌಡ ಅವರ ಇಲ್ಲಿನ ನಿವಾಸದ ಮುಂದೆ ಜೆಡಿಎಸ್ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.

ವಿಧಾನ ಪರಿಷತ್‌ ಸದಸ್ಯ ಇಂಚರ ಗೋವಿಂದರಾಜು ಹಾಗೂ ಮುಖಂಡ ಸಿಎಂಆರ್‌ ಶ್ರೀನಾಥ್‌ ನೇತೃತ್ವದಲ್ಲಿ ಸೇರಿದ ಕಾರ್ಯಕರ್ತರು, ಶ್ರೀನಿವಾಸಗೌಡ ವಿರುದ್ಧ ಧಿಕ್ಕಾರ ಕೂಗಿದರು.

‘ಪಕ್ಷ ವಿರೋಧ ಚಟುವಟಿಕೆ ನಡೆಸುತ್ತಿದ್ದು, ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ. ಮತ ನೀಡಿ ಗೆಲ್ಲಿಸಿದ ಕ್ಷೇತ್ರದ ಜನರಿಗೆ ಮೋಸ ಮಾಡಿದ್ದಾರೆ. ನೈತಿಕ ಹೊಣೆ ಹೊತ್ತು ಈ ಕೂಡಲೇ ಜೆಡಿಎಸ್‌ ಪಕ್ಷಕ್ಕೆ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

ಇಂಚರ ಗೋವಿಂದರಾಜು ಮಾತನಾಡಿ, ‘ಶ್ರೀನಿವಾಸಗೌಡ ಅವರನ್ನು ಕ್ಷೇತ್ರ ಜನರು ಸುಮಾರು 47 ಸಾವಿರ ಮತಗಳಿಂದ ಗೆಲ್ಲಿಸಿದ್ದರು. ಆದರೆ, ಆ ಮತದಾರ ಪ್ರಭುಗಳಿಗೆ ನಂಬಿಕೆ ದ್ರೋಹ ಮಾಡಿದ್ದಾರೆ. ರೈತರಿಗೆ ಮೋಸ ಮಾಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಪಕ್ಷದ ವರಿಷ್ಠರಾದ ದೇವೇಗೌಡ ಹಾಗೂ ಕುಮಾರಸ್ವಾಮಿ ಸೂಚನೆಯಂತೆ ಅವರನ್ನು ಭೇಟಿ ಮಾಡಿ ಮನವೊಲಿಸಿದಾಗ ಜೆಡಿಎಸ್‌ಗೆ ಮಾತ ಹಾಕುವ ಭರವಸೆ ನೀಡಿದ್ದರು. ಈಗ ಯಾವುದೇ ಕಾರಣಕ್ಕೂ ಶಾಸಕರಾಗಿ ಮುಂದುವರಿಯುವ ನೈತಿಕತೆ ಅವರಿಗಿಲ್ಲ, ಕೂಡಲೇ ರಾಜೀನಾಮೆ ಕೊಟ್ಟು ಮತದಾರರಿಗೆ ಗೌರವ ನೀಡಿ’ ಎಂದು ಒತ್ತಾಯಿಸಿದರು.

ಸಿಎಂಆರ್ ಶ್ರೀನಾಥ್ ಮಾತನಾಡಿ, ‘ಇವರ ಇತಿಹಾಸ ಗೊತ್ತಿದ್ದರೂ ಕಳೆದ ಬಾರಿ ಜೆಡಿಎಸ್‌ ಟಿಕೆಟ್ ಕೊಟ್ಟು ಗೆಲ್ಲಿಸಿದ್ದಕ್ಕೆ ಈಗ ಸರಿಯಾದ ಬುದ್ಧಿ ಕಲಿಸಿದ್ದಾರೆ. ಇವರನ್ನು ಗೆಲ್ಲಿಸಿದ್ದೇ ತಪ್ಪಾಯಿತು. ತಮ್ಮ ಸ್ವಾರ್ಥಕ್ಕಾಗಿ ಮಾತೃಪಕ್ಷಕ್ಕೆ ದ್ರೋಹ ಬಗೆದಿದ್ದಾರೆ. ಅವರು ಕ್ಷೇತ್ರದ ಜನರ ಕ್ಷಮೆಯಾಚಿಸಬೇಕು. ಮುಂದಿನ ದಿನಗಳಲ್ಲಿ ಸ್ವಾಭಿಮಾನದ ಕೋಲಾರಕ್ಕಾಗಿ ದೊಡ್ಡಮಟ್ಟದಲ್ಲಿ ಹೋರಾಟ ನಡೆಸುತ್ತೇವೆ’ ಎಂದರು.

ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ನಗರಸಭೆ ಸದಸ್ಯ ರಾಕೇಶ್, ಮುಖಂಡರಾದ ಎಪಿಎಂಸಿ ಪುಟ್ಟುರಾಜು, ಮಂಡಿ ರಮೇಶ್, ಮುನಿರಾಜು ಶ್ರೀನಿವಾಸ್ ಇದ್ದರು. ಶ್ರೀನಿವಾಸಗೌಡರ ನಿವಾಸಕ್ಕೆ ಪೊಲೀಸ್‌ ಭದ್ರತೆ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT