ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್‌ ಸಾವಿನ ಸುತ್ತ ಅನುಮಾನದ ಹುತ್ತ

ಎಚ್. ಕಡದಕಟ್ಟೆ ಸಮೀಪದಲ್ಲಿನ ತುಂಗಾ ಮೇಲ್ದಂಡೆ ನಾಲೆಯಲ್ಲಿ ಶವ ಪತ್ತೆ
Last Updated 4 ನವೆಂಬರ್ 2022, 6:14 IST
ಅಕ್ಷರ ಗಾತ್ರ

ಹೊನ್ನಾಳಿ: ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ತಮ್ಮ ಎಂ.ಪಿ. ರಮೇಶ್‌ ಅವರ ಪುತ್ರ ಎಂ.ಆರ್. ಚಂದ್ರಶೇಖರ್ ಅವರ ನಾಪತ್ತೆ ಪ್ರಕರಣ ದುರಂತ ಅಂತ್ಯ ಕಂಡಿದೆ.

ಚಂದ್ರಶೇಖರ್ ಅವರು ಹೊರಟಿದ್ದ ಕಾರು ಹೊನ್ನಾಳಿ–ನ್ಯಾಮತಿ ಮಧ್ಯ ಭಾಗದಲ್ಲಿರುವ ಎಚ್.ಕಡದಕಟ್ಟೆ ಗ್ರಾಮದ ಬಳಿಯ ತುಂಗಾ ಮೇಲ್ದಂಡೆ ಕಾಲುವೆಯಲ್ಲಿ ಪತ್ತೆಯಾಗಿದ್ದು, ಕಾರ್‌ನ ಹಿಂಬದಿಯ ಸೀಟಿನಲ್ಲಿ ಚಂದ್ರಶೇಖರ್ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಕಾರು ಮುಂಭಾಗದಲ್ಲಿ ನಜ್ಜುಗುಜ್ಜಾಗಿದ್ದು, ಅದರ ಬಿಡಿ ಭಾಗಗಳು ನಾಲೆಯ ಮೇಲೆ ಅಲ್ಲಲ್ಲಿ ಚದುರಿ ಬಿದ್ದಿದ್ದವು. ಇದನ್ನು ಕಂಡ ಸಾರ್ವಜನಿಕರು ಶಾಸಕರಿಗೆ ಸುದ್ದಿ ಮುಟ್ಟಿಸಿದ್ದಾರೆ. ಕಾರು ನಾಲೆಗೆ ಬಿದ್ದಿರುವ ಶಂಕೆ ವ್ಯಕ್ತವಾಯಿತು. ಪೊಲೀಸರು ಶೋಧನೆಗೆ ಮುಂದಾದರು. ನಾಲೆಯ ನೀರು ಸ್ವಲ್ಪ ಇಳಿಮುಖ ಕಾಣುತ್ತಿದ್ದಂತೆಯೇ ಬಿಳಿ ಬಣ್ಣದ ಕಾರು ಕಂಡುಬಂತು. ಅಗ್ನಿಶಾಮಕ ದಳದ ಸಿಬ್ಬಂದಿ, ಮುಳುಗು ತಜ್ಞರನ್ನು ಕರೆಸಿ ಎರಡು ಬೃಹತ್ತಾದ ಕ್ರೇನ್‌ಗಳನ್ನು ಬಳಸಿ ಮುಳುಗಿದ್ದ ಕಾರನ್ನು ಮೇಲೆತ್ತಲಾಯಿತು. ಕಾರಿನ ಹಿಂಬದಿಯ ಸೀಟಿನಲ್ಲಿ ಊದಿಕೊಂಡಿದ್ದ, ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹ ಕಂಡುಬಂದಿದೆ. ಸಂಬಂಧಿಕರು, ಸ್ನೇಹಿತರು ಅದು ‘ಚಂದ್ರು’ ಅವರದ್ದೇ ಮೃತದೇಹ ಎಂಬುದನ್ನು ಖಚಿತಪಡಿಸಿದರು.

ಅ. 30ರ ರಾತ್ರಿ ನಾಪತ್ತೆಯಾಗಿದ್ದ ಚಂದ್ರಶೇಖರ್ ಅವರ ಬಗ್ಗೆ ರಾತ್ರಿ 11.50ರ ನಂತರದಲ್ಲಿ ಸುಳಿವಿರಲಿಲ್ಲ. ಅವರು ಶಿವಮೊಗ್ಗದಿಂದ ಹೊರಟು ಸುರಹೊನ್ನೆಗೆ ಬಂದ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆದರೆ, ಹೊನ್ನಾಳಿ ತಲುಪದಿರುವುದು ಆತಂಕವನ್ನುಂಟು ಮಾಡಿತ್ತು. ಈ ನಡುವೆ ಒಂದು ಒಮಿನಿ ಕಾರು ಅವರನ್ನು ಹಿಂಬಾಲಿಸಿಕೊಂಡು ಬರುತ್ತಿತ್ತು ಎನ್ನಲಾಗಿದೆ. ಹೀಗಾಗಿ ಚಂದ್ರು ಅವರ ಸಾವಿನ ಬಗ್ಗೆ ಅನುಮಾನಗಳು ಮೂಡಿವೆ.

ರೇಣುಕಾಚಾರ್ಯರ ಆಕ್ರಂದನ: ಚಂದ್ರಶೇಖರ್ ಅವರ ಶವ ನೋಡಿದ ಕೂಡಲೇ ಶಾಸಕ ರೇಣುಕಾಚಾರ್ಯ ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ‘ನನಗೆ ನನ್ನ ಮಗ ಚಂದ್ರು ಬೇಕು’ ಎಂದು ಬಿಕ್ಕಿ ಬಿಕ್ಕಿ ಅಳುತ್ತಿದ್ದ ದೃಶ್ಯ ಮನ ಕಲಕುವಂತಿತ್ತು. ‘ನಗುಮುಖದಿಂದ ಮನೆಯಿಂದ ಹೊರಹೋಗಿದ್ದ ನನ್ನ ಮಗ ಶವವಾಗಿ ಬಂದಿದ್ದಾನೆ’ ಎಂದು ಎದೆ ಬಡಿದುಕೊಂಡು ಕಣ್ಣೀರು ಸುರಿಸುತ್ತಿದ್ದರು. ತಂದೆ ಎಂ.ಪಿ. ರಮೇಶ್ ಹಾಗೂ ಕುಟುಂಬದವರ ಗೋಳು ಹೇಳತೀರದಾಗಿತ್ತು. ಚಂದ್ರು ಹೇಗೋ ಬದುಕಿ ಬರುತ್ತಾನೆ ಎನ್ನುವ ನಿರೀಕ್ಷೆಯಲ್ಲಿದ್ದ ಕುಟುಂಬದವರ ನಿರೀಕ್ಷೆ ಹುಸಿಯಾಯಿತು. ತುಂಗಾ ಮೇಲ್ದಂಡೆ ಕಾಲುವೆಯಲ್ಲಿ ಶವ ಸಿಕ್ಕಿದೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆಯೇ ಅವಳಿ ತಾಲ್ಲೂಕಿನ ಜನರು ಸಾಗರೋಪಾದಿಯಲ್ಲಿ ಸ್ಥಳದಲ್ಲಿ ಸೇರಿದ್ದರು.

ಎಸ್‌ಪಿ ಭೇಟಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಡಿವೈಎಸ್‌ಪಿ ಸಂತೋಷ್, ವಿಶೇಷ ತನಿಖಾಧಿಕಾರಿ ದೇವರಾಜ್, ಇನ್‌ಸ್ಪೆಕ್ಟರ್ ಸಿದ್ದೇಗೌಡ, ನ್ಯಾಮತಿ ಪಿಎಸ್‍ಐ ರಮೇಶ್, ಅಗ್ನಿಶಾಮಕ ದಳದವರು, ಮುಳುಗು ತಜ್ಞರು ಹಾಜರಿದ್ದರು.

ಶುಕ್ರವಾರ 3 ಗಂಟೆಗೆ ಶವಸಂಸ್ಕಾರ: ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಚಂದ್ರಶೇಖರ್ ಅವರ ಅಂತ್ಯಸಂಸ್ಕಾರ ಮಾಸಡಿ ಗ್ರಾಮದ ತೋಟದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅಂತ್ಯಸಂಸ್ಕಾರ ನಾಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT