ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂ– ಸ್ಯಾಂಡ್ ಪೂರೈಕೆ ಸ್ಥಗಿತ: ಕೆಎಂಎಂಸಿಆರ್‌ಗೆ ತಿದ್ದುಪಡಿ ತರಲು ಆಗ್ರಹ

ಕೆಎಂಎಂಸಿಆರ್‌ಗೆ ತಿದ್ದುಪಡಿ ತರಲು ಆಗ್ರಹ
Last Updated 24 ಡಿಸೆಂಬರ್ 2022, 22:30 IST
ಅಕ್ಷರ ಗಾತ್ರ

ಬೆಂಗಳೂರು: ಗಣಿ ಗುತ್ತಿಗೆದಾರರಿಂದ ರಾಜಧನ ಸಂಗ್ರಹಿಸುವುದನ್ನು ಸ್ಥಗಿತಗೊಳಿಸಬೇಕು ಹಾಗೂ ಕೆಎಂಎಂಸಿಆರ್‌–1994ಕ್ಕೆ (ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಾವಳಿ) ತಿದ್ದುಪಡಿ ತರಬೇಕು ಎಂದು ಆಗ್ರಹಿಸಿ, ರಾಜ್ಯದಾದ್ಯಂತ ಕಟ್ಟಡ ಕಲ್ಲು, ಎಂ-ಸ್ಯಾಂಡ್ ಉತ್ಪಾದನೆ ಹಾಗೂ ಪೂರೈಕೆಯನ್ನು ಅನಿರ್ದಿಷ್ಟಾವಧಿ ತನಕ ಬಂದ್ ಮಾಡಲು ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ಸ್ ಅಸೋಸಿಯೇಷನ್ ನಿರ್ಧರಿಸಿದೆ.

ಈ ಹೋರಾಟಕ್ಕೆ ಲಾರಿ ಮಾಲೀಕರ ಸಂಘವು ಬೆಂಬಲ ನೀಡಿದ್ದು, ಭಾನುವಾರದಿಂದಲೇ (ಡಿ.25) ಸಾಗಾಣಿಕೆ ಸ್ಥಗಿತಗೊಳ್ಳಲಿದೆ. ನೆರೆಯ ರಾಜ್ಯಗಳಿಂದಲೂ ಪೂರೈಕೆ ಸ್ಥಗಿತವಾಗಲಿದೆ ಎಂದು ಸಂಘದವರು ಎಚ್ಚರಿಸಿದ್ದಾರೆ.

ಸರ್ಕಾರದ ಧೋರಣೆ ಖಂಡಿಸಿ ನಗರದ ಶೇಷಾದ್ರಿಪುರ ಸಂಘದ ಕಚೇರಿ ಎದುರು ಪದಾಧಿಕಾರಿಗಳು ಶನಿವಾರ ತಲೆಯ ಮೇಲೆ ಕಟ್ಟಡ ಕಲ್ಲು, ಜಲ್ಲಿ, ಎಂ-ಸ್ಯಾಂಡ್‌ನ ಮೂಟೆ ಹೊತ್ತುಪ್ರತಿಭಟಿಸಿದರು.

ಕೆಎಂಎಂಸಿಆರ್‌ಗೆ ತಿದ್ದುಪಡಿ ತರದೆ ಕರ್ನಾಟಕ ಸ್ಟೇಟ್ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಕೇಂದ್ರದಿಂದ ವೇ–ಬ್ರಿಡ್ಜ್, ಜಿಯೊ ಫೆನ್ಸಿಂಗ್‌, ಮುಂತಾದ ಕ್ರಮ ಅಳವಡಿಸಿದರೆ ಉದ್ಯಮ ನಡೆಸುವುದೇ ಕಷ್ಟವಾಗಲಿದೆ ಎಂದು ಗುತ್ತಿಗೆದಾರರು ಅಳಲು ತೋಡಿಕೊಂಡರು.

ಅಸೋಸಿಯೇಷನ್ ಅಧ್ಯಕ್ಷ ರವೀಂದ್ರ ಶೆಟ್ಟಿ, ‘ಬೇಡಿಕೆ ಈಡೇರುವ ತನಕ ಬಂದ್‌ ವಾಪಸ್‌ ಪಡೆಯುವುದಿಲ್ಲ. ಇದರಿಂದ ಜನ ಸಾಮಾನ್ಯರು ಮನೆ ನಿರ್ಮಿಸಲು ತೊಂದರೆ ಎದುರಾಗಲಿದೆ. ಸರ್ಕಾರದ ವಿವಿಧ ಮೂಲ ಸೌಕರ್ಯ ನಿರ್ಮಾಣ ಕಾಮಗಾರಿ ಮೇಲೆ ಬಂದ್‌ನಿಂದ ತೀವ್ರ ಪ್ರತಿಕೂಲ ಪರಿಣಾಮ ಬೀರಲಿದೆ’ ಎಂದು ತಿಳಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗಣಿ ಮತ್ತು ಭೂವಿಜ್ಞಾನ ಸಚಿವರು ಸಮಸ್ಯೆ ಬಗೆಹರಿಸಬೇಕು ಎಂದು ಕೋರಿದರು.

ಕಾನೂನುಬದ್ಧ ಗಣಿಗಾರಿಕೆ ನಡೆಸುವುದಕ್ಕೆ ಪೂರಕ ನಿಯಮಗಳಿಲ್ಲ. ನಿಯಮಗಳ ಸಮಗ್ರ ತಿದ್ದುಪಡಿಯ ಅಗತ್ಯವಿದೆ. ದೂರ ಸಂವೇದಿ ತಂತ್ರಜ್ಞಾನದ ಮೂಲಕ ಡ್ರೋನ್ ಸಮೀಕ್ಷೆ ನಡೆಸುವ ನಿಯಮಗಳಿಗೆ ತಿದ್ದುಪಡಿ ತಂದಿರುವುದು ಸೂಕ್ತವಾಗಿಲ್ಲ. ಇದರಿಂದ ಉದ್ಯಮ ನಡೆಸುವುದು ಕಷ್ಟವಾಗಲಿದೆ ಎಂದು ಉಪಾಧ್ಯಕ್ಷ ಬಿ.ಆರ್‌.ಕಿರಣ್‌ರಾಜ್ ಹೇಳಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್‌, ‘ಬೆಳಗಾವಿಯಲ್ಲಿ ಡಿ.28ರಂದು ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ₹ 50 ಸಾವಿರಕ್ಕೂ ಹೆಚ್ಚು ಮಂದಿ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಕ್ರಷರ್‌ ಮತ್ತು ಕ್ವಾರಿ ಘಟಕ ಸಹ ಬಂದ್‌ ಮಾಡಲಾಗುವುದು’ ಎಂದು ಪರುಷೋತಮ್‌ ಎಚ್ಚರಿಸಿದರು.

ಸರ್ಕಾರಕ್ಕೆ ರಾಜಧನ ಸಂದಾಯವಾಗಿದೆ. ಮತ್ತೆ ಗಣಿ ಗುತ್ತಿಗೆದಾರರಿಂದ ವಸೂಲಿ ಮಾಡುವುದು ಸರಿಯಲ್ಲ. ಸರ್ಕಾರ ಕಳೆದ 40 ವರ್ಷಗಳಿಂದ ಕಾಮಗಾರಿ ನಿರ್ವಹಣಾ ಇಲಾಖೆಗಳಲ್ಲಿ ರಾಜಧನವನ್ನು ಪಡೆದುಕೊಳ್ಳುತ್ತಿದೆ ಎಂದು ಅಸೋಸಿಯೇಷನ್ ಗೌರವಾಧ್ಯಕ್ಷ ಡಿ. ಸಿದ್ದರಾಜು ಹೇಳಿದರು.

ಅಸೋಸಿಯೇಷನ್ ಅಧ್ಯಕ್ಷ ಷಣ್ಮುಖಪ್ಪ, ಉಪಾಧ್ಯಕ್ಷರಾದ ಸಿಸ್ ಭಾಸ್ಕರ್, ಬಿ.ಎನ್‌.ಶ್ರೀನಿವಾಸ್‌, ಮಧುಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT