ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಣ ತಾಲ್ಲೂಕಿನ ಅರಹುಣಸಿಯಲ್ಲಿ 200 ಮಂದಿಗೆ ಜ್ವರ: ಗ್ರಾಮ ತೊರೆಯಲು ಮುಂದಾದ ಜನ

65 ಮಂದಿಯ ಗಂಟಲು ದ್ರವದ ಮಾದರಿ ಸಂಗ್ರಹ
Last Updated 15 ಜನವರಿ 2021, 7:31 IST
ಅಕ್ಷರ ಗಾತ್ರ

ರೋಣ: ತಾಲ್ಲೂಕಿನ ಅರಹುಣಸಿ ಗ್ರಾಮದ ಸುಮಾರು 200 ಮಂದಿ ಐದು ದಿನಗಳಿಂದ ಜ್ವರ, ಕೆಮ್ಮು, ಗಂಟಲು ಕಡಿತ,ಶೀತ, ನೆಗಡಿಯಿಂದ ಬಳಲುತ್ತಿದ್ದು, ದಿನೇ ದಿನೇ ರೋಗಿಗಗಳ ಸಂಖ್ಯೆ ಹೆಚ್ಚುತ್ತಿದೆ. ರೋಗಮೂಲ ಪತ್ತೆಗಾಗಿ ವೈದ್ಯರ ತಂಡ ಎರಡು ದಿನಗಳಿಂದ ಗ್ರಾಮದಲ್ಲಿ ಬೀಡುಬಿಟ್ಟಿದ್ದು, ಗ್ರಾಮಸ್ಥರ ಆರೋಗ್ಯ ತಪಾಸಣೆ, ಔಷಧೋಪಚಾರ ನಡೆಸುತ್ತಿದೆ.

ಆರೋಗ್ಯ ಇಲಾಖೆ ಸಿಬ್ಬಂದಿ ನಾಲ್ಕು ತಂಡಗಳ ಮೂಲಕ ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆ ನಡೆಸಿದ್ದು, ಗುರುವಾರ ಜ್ವರ, ಕೆಮ್ಮು, ನೆಗಡಿಯಿಂದ ಬಳಲುತ್ತಿರುವ 40 ಮಂದಿ ಹಾಗೂ ಎಚ್1ಎನ್1 ಶಂಕೆ ಹಿನ್ನೆಲೆಯಲ್ಲಿ 25 ಜನ ಸೇರಿದಂತೆ ಒಟ್ಟು 65 ಮಂದಿಯ ಗಂಟಲು ದ್ರವದ ಮಾದರಿ ಸಂಗ್ರಹಿಸಿದ್ದಾರೆ. 150ಕ್ಕೂ ಹೆಚ್ಚು ಜನರಿಗೆ ಮಾತ್ರೆ, ಔಷಧ ನೀಡಿದ್ದಾರೆ.

‘ಗುರುವಾರ 303 ಮನೆಗಳಿಗೆ ಭೇಟಿ ನೀಡಿ ಕುಟುಂಬದ ಸದಸ್ಯರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಕೋವಿಡ್‌–19, ಎಚ್‌1ಎನ್‌1 ಜತೆಗೆ ಮಲೇರಿಯಾ, ಡೆಂಗಿ, ಚಿಕೂನ್‌ಗುನ್ಯಾ ಪರೀಕ್ಷೆಯನ್ನೂ ನಡೆಸಲಾಗುವುದು. ಅದಕ್ಕಾಗಿ ರಕ್ತ ಮತ್ತು ಗಂಟಲು ದ್ರವದ ಮಾದರಿ ಸಂಗ್ರಹಿಸಲಾಗಿದೆ. ಗ್ರಾಮದ ಎಲ್ಲ ಮನೆಗಳಿಗೂ ತೆರಳಿ ಆರೋಗ್ಯ ತಪಾಸಣೆ ಮಾಡಲಾಗುವುದು. ಲಾರ್ವಾ ಸಮೀಕ್ಷೆ ಕೈಗೊಳ್ಳಲಾಗುವುದು. ಆರೋಗ್ಯ ಮತ್ತು ಸ್ವಚ್ಛತೆ ಬಗ್ಗೆ ಜನಜಾಗೃತಿ ಮೂಡಿಸಲಾಗುವುದು’ ಎಂದು ಆರೋಗ್ಯ ಶಿಬಿರದ ವೈದ್ಯಾಧಿಕಾರಿ ಡಾ.ಸಂಗಮೇಶ ಬಂಕದ ತಿಳಿಸಿದರು.

ನಿಯಂತ್ರಣಕ್ಕೆ ಬಾರದ ರೋಗ

ಗ್ರಾಮದಲ್ಲಿ ವೈದ್ಯರ ತಂಡ ಬೀಡು ಬಿಟ್ಟು ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ನೀಡುತ್ತಿದ್ದರೂ, ಕಾಯಿಲೆ ನಿಯಂತ್ರಣಕ್ಕೆ ಬರುತ್ತಿಲ್ಲ. ಗ್ರಾಮಸ್ಥರು ಜ್ವರ, ಕೆಮ್ಮು, ನೆಗಡಿ, ಗಂಟಲು ಉರಿ, ಕೀಲುನೋವಿನಿಂದ ಬಳಲುತ್ತಿದ್ದಾರೆ.

ಅನೇಕರು ಮಲ್ಲಾಪೂರ, ಸವಡಿ, ರೋಣ ಪಟ್ಟಣದಲ್ಲಿನ ಖಾಸಗಿ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಣ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆ ಆಗಿದ್ದ ಮಲ್ಲಿಕಾರ್ಜುನಗೌಡ ಚೌಡರಡ್ಡಿ ಅವರಿಗೆ ಗುರುವಾರ ಮತ್ತೆ ಕಾಯಿಲೆ ಉಲ್ಬಣಗೊಂಡು, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರಂತೆ ಅನೇಕರು ಗುರುವಾರ ಬೇರೆ ಊರಿನ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.

ಗ್ರಾಮ ತೊರೆಯಲು ನಿರ್ಧಾರ

‘ದಿನೇ ದಿನೇ ರೋಗಗಳು ಹೆಚ್ಚುತ್ತಿರುವುದರಿಂದ ಆರೋಗ್ಯವಂತ ಜನರು ಭಯಭೀತರಾಗಿದ್ದಾರೆ. ಇನ್ನೆರಡು ದಿನ ಕಾದು ನೋಡಿ, ಕಾಯಿಲೆ ನಿಯಂತ್ರಣಕ್ಕೆ ಬರದಿದ್ದಲ್ಲಿ ಕೆಲವು ದಿನಗಳ ಕಾಲ ಗ್ರಾಮವನ್ನೇ ತೊರೆಯಲು ನಿರ್ಧರಿಸಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ಈಗಾಗಲೇ ಸಂಗ್ರಹಿಸಿದ ರಕ್ತದ ಮಾದರಿ ಮತ್ತು ಗಂಟಲು ದ್ರವದ ಮಾದರಿಯ ವರದಿ ತರಿಸಿಕೊಂಡು, ಕಾಯಿಲೆಗೆ ನಿಖರ ಕಾರಣ ಪತ್ತೆ ಮಾಡಿ, ನಿರ್ದಿಷ್ಟ ಚಿಕಿತ್ಸೆ ನೀಡಬೇಕು’ ಎಂದು ಅರಹುಣಸಿ ಗ್ರಾಮಸ್ಥ ಚಿದಾಂಬರಗೌಡ ಸುಳ್ಳದ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT