ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಉತ್ಪಾದನೆ 58 ಲಕ್ಷ ಟನ್‌ ಕುಸಿತ ಸಾಧ್ಯತೆ: ಚಲುವರಾಯಸ್ವಾಮಿ

ಬೆಳೆಹಾನಿಯ ವಿವರ ನೀಡಿದ ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ
Published 27 ಸೆಪ್ಟೆಂಬರ್ 2023, 23:30 IST
Last Updated 27 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಬರದ ಪರಿಣಾಮವಾಗಿ ರಾಜ್ಯದಲ್ಲಿ ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ 58 ಲಕ್ಷ ಟನ್‌ನಷ್ಟು ಕುಸಿತವಾಗುವ ಸಾಧ್ಯತೆ ಇದೆ ಎಂದು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ತಿಳಿಸಿದರು.

ಸುದ್ದಿಗಾರರ ಜತೆ ಬುಧವಾರ ಮಾತನಾಡಿದ ಅವರು, ‘ವಾಡಿಕೆಯ ಅಂದಾಜಿನ ಪ್ರಕಾರ, ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ 1.11 ಕೋಟಿ ಟನ್‌ಗಳಷ್ಟು ಆಹಾರ ಧಾನ್ಯದ ಉತ್ಪಾದನೆ ಆಗಬೇಕಿತ್ತು. ಆದರೆ, ಬರದಿಂದ ಆಹಾರ ಧಾನ್ಯಗಳ ಬೆಳೆಗಳಿಗೆ ಭಾರಿ ಪ್ರಮಾಣದಲ್ಲಿ ಹಾನಿಯಾಗಿದೆ. ಉತ್ಪಾದನೆಯಲ್ಲಿ ಶೇಕಡ 52ರಷ್ಟು ಕುಸಿತ ಆಗುವ ಸಾಧ್ಯತೆಯನ್ನು ಅಂದಾಜು ಮಾಡಲಾಗಿದೆ’ ಎಂದರು.

ರಾಜ್ಯದಲ್ಲಿ ಒಟ್ಟು 40 ಲಕ್ಷ ಹೆಕ್ಟೇರ್‌ ವಿಸ್ತೀರ್ಣದಲ್ಲಿ ಬೆಳೆ ಹಾನಿಯಾಗಿದೆ. ಒಟ್ಟು ಬೆಳೆ ಪ್ರಮಾಣದಲ್ಲಿ ಶೇ 50ರಷ್ಟು ಹಾನಿಯಾಗಿರುವುದು ಕಂಡುಬಂದಿದೆ. ಭತ್ತ, ರಾಗಿ, ಜೋಳ ಸೇರಿದಂತೆ ಆಹಾರ ಧಾನ್ಯಗಳ ಬೆಳೆಗಳಿಗೆ ಭಾರಿ ಪ್ರಮಾಣದ ಹಾನಿಯಾಗಿದೆ. ಈ ಕಾರಣದಿಂದಾಗಿಯೇ ಆಹಾರ ಧಾನ್ಯಗಳ ಬೆಲೆ ಏರಿಕೆಯಾಗುವ ಸಾಧ್ಯತೆಯೂ ಇದೆ ಎಂದು ತಿಳಿಸಿದರು.

‘ಕಾವೇರಿ ಕಣಿವೆಯಲ್ಲಿ ಭತ್ತ ನಾಟಿ ಮಾಡದಂತೆ ರಾಜ್ಯ ಸರ್ಕಾರ ಸೂಚನೆ ನೀಡಿತ್ತು. ಆದರೂ, ಕೆಲವು ರೈತರು ಭತ್ತ ನಾಟಿ ಮಾಡಿದ್ದಾರೆ. ಅಲ್ಲಿ ಬೆಳೆ ಸಂಪೂರ್ಣವಾಗಿ ಹಾನಿಯಾಗುವ ಸಾಧ್ಯತೆ ಇದೆ. ಬೆಳೆ ಹಾನಿಯಿಂದ ಕರ್ನಾಟಕಕ್ಕೆ ಹೆಚ್ಚು ಪರಿಣಾಮ ಆಗುವ ಸಾಧ್ಯತೆ ಕಡಿಮೆ. ಆದರೆ, ರಾಷ್ಟ್ರ ಮಟ್ಟದಲ್ಲಿ ತುಸು ಪರಿಣಾಮ ಬೀರುವ ಸಾಧ್ಯತೆ ಇದೆ’ ಎಂದು ಸಚಿವರು ಹೇಳಿದರು.

ಹಿಂಗಾರು ಅವಧಿಯಲ್ಲಿ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಇದರಿಂದ ಒಟ್ಟು ಉತ್ಪಾದನೆಯಲ್ಲಿ ಸುಧಾರಣೆಯಾಗಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT