ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಠಕ್ಕೆ ಗೋಕರ್ಣ ದೇವಾಲಯ ಕೊಡಿ ಎಂದು ಎಲ್ಲೂ ಹೇಳಿಲ್ಲ: ಹಿರಿಯ ವಕೀಲರ ಸ್ಪಷ್ಟನೆ

ಸುಪ್ರೀಂ ಕೋರ್ಟ್‌ ಆದೇಶದ ಬಗ್ಗೆ ವಿವರಣೆ ನೀಡಿದ ಎಸ್.ಎಸ್‌.ನಾಗಾನಂದ
Last Updated 4 ಅಕ್ಟೋಬರ್ 2018, 15:48 IST
ಅಕ್ಷರ ಗಾತ್ರ

ಬೆಂಗಳೂರು: ‘ಗೋಕರ್ಣದ ಮಹಾಬಲೇಶ್ವರ ದೇವಾಲಯವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ ಎಂಬ ಸುಳ್ಳು ಮಾಹಿತಿ ಹಬ್ಬಿಸುವ ಮೂಲಕ ಮಠದ ಪ್ರತಿನಿಧಿಗಳು ಭಕ್ತರ ದಾರಿ ತಪ್ಪಿಸುತ್ತಿದ್ದಾರೆ’ ಎಂದು ಹಿರಿಯ ವಕೀಲ ಎಸ್.ಎಸ್‌.ನಾಗಾನಂದ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣದಲ್ಲಿ ಮಹಾಬಲೇಶ್ವರ ದೇವಾಲಯದ ಪರ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿರುವ ನಾಗಾನಂದ ಅವರು ಈ ಕುರಿತಂತೆ ಗುರುವಾರ ‘ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದರು.

ನಾಗಾನಂದ ಅವರು ಹೇಳಿರುವುದೇನು?: ನ್ಯಾಯಮೂರ್ತಿ ಕುರಿಯನ್‌ ಜೋಸೆಫ್‌ ಮತ್ತು ನ್ಯಾಯಮೂರ್ತಿ ಎ.ಎಂ.ಖನ್ವಿಲ್ಕರ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ನೀಡಿರುವ ಆದೇಶದಲ್ಲಿ ಯಾವುದೇ ಗೊಂದಲವಿಲ್ಲ.

ರಾಜ್ಯ ಸರ್ಕಾರ 2018ರ ಸೆಪ್ಟೆಂಬರ್ 18ರಂದು ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ರಾಜ್ಯ ಸರ್ಕಾರದ ಆದೇಶ ಏನೆಂದರೆ; ಜಿಲ್ಲಾಧಿಕಾರಿ ನೇತೃತ್ವದಲ್ಲಿ ಉಸ್ತುವಾರಿ ಸಮಿತಿ ರಚಿಸಿ ದೇವಸ್ಥಾನವನ್ನು ನಡೆಸಿಕೊಂಡು ಹೋಗಬೇಕು ಎಂಬುದಾಗಿದೆ.

ಈಗ ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಜಿಲ್ಲಾಧಿಕಾರಿ ನೇತೃತ್ವದ ದೇಖರೇಖಿ ಸಮಿತಿ ರಚನೆ ಆದೇಶ ಹಿಂಪಡೆಯಬೇಕಾಗುತ್ತದೆ. ಅದರರ್ಥ ರಾಮಚಂದ್ರಾಪುರ ಮಠಕ್ಕೆ ದೇವಾಲಯವನ್ನು ವಾಪಸ್ ನೀಡಬೇಕು ಎಂಬುದಲ್ಲ.

2018ರ ಸೆಪ್ಟೆಂಬರ್ 7ನೇ ತಾರೀಖು ಇದ್ದ ಸ್ಥಿತಿಯನ್ನು ಕಾಪಾಡಿಕೊಂಡು ಹೋಗಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಅಂದರೆ, ಈ ದಿನಾಂಕದ ವೇಳೆಗೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಚ್‌.ಹಾಲಪ್ಪ ಅವರಿಗೆ ಮಹಾಬಲೇಶ್ವರ ದೇವಾಲಯದ ಕಾರ್ಯನಿರ್ವಹಣಾಧಿಕಾರಿಯಾಗಿ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.

ಮುಜರಾಯಿ ಇಲಾಖೆಯ ಆಯುಕ್ತರ ಆದೇಶದ ಮೇರೆಗೆ ಹಾಲಪ್ಪ ಅವರು ಈಗಾಗಲೇ ಗೋಕರ್ಣ ದೇವಾಲಯದ ಕಾರ್ಯನಿರ್ವಹಣಾಧಿಕಾರಿಯೂ ಹೌದು. ಈ ಸ್ಥಿತಿ ಯಥಾವತ್ತಾಗಿ ಇರಲಿ ಎಂಬುದೇ ಸುಪ್ರೀಂ ಕೋರ್ಟ್‌ ಆದೇಶದ ತಿರುಳು.

ಗೊಂದಲ ಬೇಡ: ’ರಾಮಚಂದ್ರಾಪುರ ಮಠಕ್ಕೆ ದೇಗುಲದ ಆಡಳಿತ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಎಲ್ಲಿಯೂ ಹೇಳಿಲ್ಲ. ಆದ್ದರಿಂದ ಸಾರ್ವಜನಿಕರು ಗೊಂದಲಕ್ಕೆ ಒಳಗಾಗಬಾರದು’ ಎಂದು ನಾಗಾನಂದ ಅವರು ತಿಳಿಸಿದ್ದಾರೆ.

ಗೋಕರ್ಣ ದೇವಾಲಯವನ್ನು ರಾಜ್ಯ ಸರ್ಕಾರ 2008ರ ಆಗಸ್ಟ್‌ 12ರಂದು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿತ್ತು. ಈ ಕ್ರಮವನ್ನು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಹಾಗೂ ನ್ಯಾಯಮೂರ್ತಿ ಅರವಿಂದ ಕುಮಾರ್ ನೇತೃತ್ವದ ವಿಭಾಗೀಯ ನ್ಯಾಯಪೀಠ ರದ್ದುಗೊಳಿಸಿತ್ತು.

ಈ ಆದೇಶವನ್ನು ರಾಮಚಂದ್ರಾಪುರ ಮಠ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ.

‘ಸುಳ್ಳು ಹೇಳುವುದು ಮಠದವರಿಗೆ ಕರಗತ’

‘ಹೊಸನಗರದ ರಾಮಚಂದ್ರಾಪುರ ಮಠದವರಿಗೆ ಸುಳ್ಳು ಹೇಳುವುದು ಕರಗತವಾಗಿದೆ’ ಎಂದು ನಾಗಾನಂದ ಅವರು ಕಿಡಿ ಕಾರಿದ್ದಾರೆ.

ನೈತಿಕ ನಿಯಮ ಪಾಲಿಸದ, 15 ವರ್ಷದ ಹುಡುಗಿಯ ಮೇಲೆ ಅತ್ಯಾಚಾರ ಮಾಡಿದ ಆರೋಪ ಎದುರಿಸುತ್ತಿರುವ ಸ್ವಾಮೀಜಿ ಪೀಠದಲ್ಲಿ ಕುಳಿತು ಶಂಕರಾಚಾರ್ಯರ ಪರಂಪರೆಯ ಬಗ್ಗೆ ಮಾತನಾಡುತ್ತಾರೆ. ಇವರಿಗೆ ಒಂಚೂರು ನಾಚಿಕೆಯಿಲ್ಲ’ ಎಂದು ಹೇಳಿದ್ದಾರೆ.

‘ಸ್ವಾಮೀಜಿ ಮತ್ತು ಮತ್ತು ಅವರ ಪಟಾಲಂ ಮಾತುಗಳನ್ನು ಮಾಧ್ಯಮಗಳು ಎಚ್ಚರಿಕೆ ಮತ್ತು ಜವಾಬ್ದಾರಿಯಿಂದ ಪರಿಶೀಲಿಸಬೇಕು’ ಎಂದೂ ನಾಗಾನಂದ ಮನವಿ ಮಾಡಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT