ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಾದ್ಯಂತ ಧಾರಾಕಾರ ಮಳೆ; ಕೃಷಿ ಚಟುವಟಿಕೆ ಬಿರುಸು

Published 22 ಮೇ 2023, 5:11 IST
Last Updated 22 ಮೇ 2023, 5:11 IST
ಅಕ್ಷರ ಗಾತ್ರ

ರಾಜ್ಯಾದ್ಯಂತ ಭಾನುವಾರ ಧಾರಾಕಾರ ಮಳೆಯಾಗಿದ್ದು, ಕೃಷಿ ಚುಟುವಟಿಕೆಗಳು ಪ್ರಾರಂಭವಾಗಿವೆ. ಕೆಲವಡೆ ಅನಾಹುತಗಳು ಸಂಭವಿಸಿದ್ದು, ಹಲವು ಜಿಲ್ಲೆಗಳಲ್ಲಿ ಜನ ಜೀವನ ಅಸ್ತವ್ಯಸ್ತವಾಗಿದೆ.

ಬೆಂಗಳೂರು

ನಗರದಲ್ಲಿ ಭಾನುವಾರ 45 ನಿಮಿಷವಷ್ಟೇ ಅಬ್ಬರಿಸಿದ ಮಳೆಗೆ ಬೆಂಗಳೂರು ತತ್ತರಗೊಂಡಿದೆ. ಹಲವು ಬಡಾವಣೆಗಳು ಮುಳುಗಿದ್ದರೆ, ನೂರಾರು ಮರಗಳು ನೆಲಕ್ಕುರುಳಿವೆ. ಮಹಿಳೆಯೊಬ್ಬರು ಅಂಡರ್ ಪಾಸ್‌ನಲ್ಲಿ ಮೃತಪಟ್ಟಿದ್ದರೆ, ಹಲವು ವಾಹನಗಳು ಜಖಂಗೊಂಡಿವೆ. ಮನೆಗಳು ಜಲಾವೃತಗೊಂಡಿವೆ.

ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ತಾಲ್ಲೂಕು ‌ಕೇಂದ್ರ ಸೇರಿದಂತೆ ಇತರೆಡೆಗಳಲ್ಲಿ ಭಾನುವಾರ ಸಂಜೆ ಉತ್ತಮ ಮಳೆಯಾಗಿದೆ.‌ ಬಿರುಗಾಳಿ, ಗುಡುಗು ಮಿಂಚು ಸಹಿತ ಬಂದ ಮಳೆಯ ಪರಿಣಾಮವಾಗಿ ಬಿರು ಬಿಸಿಲಿನ ತಾಪದಿಂದ ಬೆಂದಿದ್ದ ಭೂಮಿ ತಂಪೆರದಿದೆ. ರೈತಾಪಿ ವರ್ಗದವರಲ್ಲಿ ಸಂತಸ ಮನೆ ಮಾಡಿದೆ. ಮಳೆಗೆ ಯಾವುದೇ ಅನಾಹುತಗಳು ಸಂಭವಿಸಿಲ್ಲ.

ಮಂಚೇನಹಳ್ಳಿಯಲ್ಲಿ ತಾಲ್ಲೂಕು ಕೇಂದ್ರದಲ್ಲಿ ಉತ್ತಮ ಮಳೆಯಾದ ಕಾರಣ ನಗರದ ಚರಂಡಿಗಳಲ್ಲಿ ಮಳೆ ನೀರು ತುಂಬಿ ರಸ್ತೆಯ ಮೇಲೆ ಹರಿದಿದೆ. ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಸಂಗ್ರಹವಾದ ಕಾರಣ ಅಲ್ಲಿನ ಜನತೆಗೆ ಸಂಕಷ್ಟ ಎದುರಾಗಿದೆ. ಅಲ್ಲಲ್ಲಿ ನಡೆದಿದ್ದ ಅವೈಜ್ಞಾನಿಕ ಕಾಮಗಾರಿಗಳಿಂದಾಗಿ ಮಳೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ನಿಂತಲ್ಲೆ ನಿಂತಿದ್ದವು.

ಉತ್ತಮ ಮಳೆಯ ಪರಿಣಾಮದಿಂದ ರೈತರು ಕೃಷಿ ಚಟುವಟಿಕೆಗಳನ್ನು ಆರಂಭಿಸಲು ಚಿಂತಿಸುತ್ತಿದ್ದು, ಭೂಮಿಯ ಉಳುಮೆ, ಬಿತ್ತನೆ ಬೀಜ ಮತ್ತು ರಸಗೊಬ್ಬರ ಖರೀದಿ ಸೇರಿದಂತೆ ಇತರ ಕಾರ್ಯಗಳತ್ತ ಆಸಕ್ತಿ
ತೋರುತ್ತಿದ್ದಾರೆ.

ದಾವಣಗೆರೆ

ಕೆಲವು ದಿನಗಳಿಂದ ಬಿಸಿಲ ಬೇಗೆಗೆ ಬಸವಳಿದಿದ್ದ ದಾವಣಗೆರೆಯಲ್ಲಿ ಭಾನುವಾರ ರಾತ್ರಿ ಸುರಿದ ಮಳೆ ತಂಪೆರೆದಿದೆ.

ಸಂಜೆ ಹೊತ್ತಿಗೆ ಭಾರಿ ಗಾಳಿ ಬೀಸಿತ್ತು. ನಾಲ್ಕು ಹನಿ ಮಳೆ ಬಂದು ನಾಪತ್ತೆಯಾಗಿತ್ತು. ರಾತ್ರಿ 10 ಗಂಟೆಯ ಹೊತ್ತಿಗೆ ಗುಡುಗು ಮಿಂಚು ಜತೆಗೆ ಜೋರಾಗಿ ಮಳೆ ಸುರಿಯಿತು. ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಬಂದಿತ್ತು. ಈ ಸಮಯದಲ್ಲಿ ವಿದ್ಯುತ್‌ ಕೂಡ ಕಡಿತಗೊಂಡಿತು.

ಹರಿಹರ ತಾಲ್ಲೂಕಿನ ಮಲೇಬೆನ್ನೂರು, ಕಡಾರನಾಯ್ಕನಹಳ್ಳಿ ಸಹಿತ ವಿವಿಧೆಡೆ ಸಂಜೆಯೇ ಮಳೆ ಸುರಿಯಿತು. ಜಿಲ್ಲೆಯ ವಿವಿಧೆಡೆ ಮಳೆಯಿಂದಾಗಿ ವಿದ್ಯುತ್‌ ಸ್ಥಗಿತಗೊಂಡಿದ್ದರಿಂದ ಊರೆಲ್ಲ ಕತ್ತಲಲ್ಲಿ ಮುಳುಗಿತು. ಅಡಿಕೆ ತೋಟ ಸಹಿತ ವಿವಿಧ ತೋಟ, ಕೃಷಿಗಳಿಗೆ ಮಳೆ ಬಂದಿರುವುದು ಅನುಕೂಲವಾಯಿತು.

ಕೋಲಾರ

ನಗರ ಹಾಗೂ ಗ್ರಾಮಾಂತರ ಪ್ರದೇಶದ ವಿವಿಧೆಡೆ ಭಾನುವಾರ ಬಿರುಸಿನ ಮಳೆಯಾಯಿತು. ಬೆಳಿಗ್ಗೆಯಿಂದಲೇ ಮೋಡದ ವಾತಾವರಣವಿತ್ತು. ಮಧ್ಯಾಹ್ನದ ವೇಳೆಗೆ ಕತ್ತಲು ಆವರಿಸಿತು. ಮಧ್ಯಾಹ್ನ 2.30ರ ಸುಮಾರಿಗೆ ಸಿಡಿಲು ಗುಡುಗಿನಿಂದ ಕೂಡಿದ ಮಳೆ ಆರಂಭವಾಯಿತು.

ಜಿಲ್ಲೆಯ ವಿವಿಧೆಡೆ ವಿದ್ಯುತ್‌ ಅಡಚಣೆ ಉಂಟಾಯಿತು. ಜೋರು ಮಳೆ ಕಾರಣ ಹಲವೆಡೆ ಮರಗಳು ನೆಲಕ್ಕುರುಳಿದವು.

ಸಂಜೆ 5 ಗಂಟೆ ವೇಳೆಗೆ ಕೋಲಾರ ತಾಲ್ಲೂಕಿನ ವಕ್ಕಲೇರಿ ವ್ಯಾಪ್ತಿಯಲ್ಲಿ 6.8 ಸೆ.ಮೀ., ತೋರದೇವಂಡಹಳ್ಳಿ ವ್ಯಾಪ್ತಿಯಲ್ಲಿ 3 ಸೆ.ಮೀ., ಶ್ರೀನಿವಾಸಪುರ ತಾಲ್ಲೂಕಿನ ಲಕ್ಷ್ಮಿಪುರ ವ್ಯಾಪ್ತಿಯಲ್ಲಿ 5.7 ಸೆ.ಮೀ. ಹಾಗೂ ಮಾಲೂರು ತಾಲ್ಲೂಕಿನ ಅಬ್ಬೇನಹಳ್ಳಿ ವ್ಯಾಪ್ತಿಯಲ್ಲಿ 2.7 ಸೆ.ಮೀ. ಮಳೆ ದಾಖಲಾಗಿದೆ. 

ಮಂಚೇನಹಳ್ಳಿಯಲ್ಲಿ ಬಿದ್ದ ಉತ್ತಮ‌ ಮಳೆಯಿಂದಾಗಿ ಮುಖ್ಯ ರಸ್ತೆಯಲ್ಲಿ ಮಳೆ ನೀರು ಹರಿದಿದೆ
ಮಂಚೇನಹಳ್ಳಿಯಲ್ಲಿ ಬಿದ್ದ ಉತ್ತಮ‌ ಮಳೆಯಿಂದಾಗಿ ಮುಖ್ಯ ರಸ್ತೆಯಲ್ಲಿ ಮಳೆ ನೀರು ಹರಿದಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT