ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ಕಾರಿ ವೈದ್ಯಕೀಯ ಕಾಲೇಜು: ಶೇ 15 ಎನ್‌ಆರ್‌ಐ ಕೋಟಾಕ್ಕೆ ಮನವಿ

ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧ್ಯಕ್ಷರಿಗೆ ವೈದ್ಯಕೀಯ ಶಿಕ್ಷಣ ಸಚಿವರಿಂದ ಪತ್ರ
Published 30 ಜೂನ್ 2024, 15:59 IST
Last Updated 30 ಜೂನ್ 2024, 15:59 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 2025-26ನೇ ಶೈಕ್ಷಣಿಕ ವರ್ಷದಿಂದ ಅನಿವಾಸಿ ಭಾರತೀಯ (ಎನ್‌ಆರ್‌ಐ) ಕೋಟಾ ಆರಂಭಿಸಲು ಸೂಪರ್ ನ್ಯೂಮರರಿ ಎಂಬಿಬಿಎಸ್ ಸೀಟುಗಳನ್ನು ಮಂಜೂರು ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ವೈದ್ಯಕೀಯ ಶಿಕ್ಷಣ ಇಲಾಖೆ ಪತ್ರ ಬರೆದಿದೆ.

ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‍ಎಂಸಿ) ಅಧ್ಯಕ್ಷರಿಗೆ ಪತ್ರ ಬರೆದಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ, ರಾಜ್ಯದಲ್ಲಿರುವ 22 ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶಕ್ಕಾಗಿ 508 ಹೆಚ್ಚುವರಿ ಸೂಪರ್ ನ್ಯೂಮರರಿ ಎಂಬಿಬಿಎಸ್ ಸೀಟುಗಳನ್ನು ಸೃಷ್ಟಿಸುವ ಮೂಲಕ ಶೇ 15ರಷ್ಟು ಎನ್ಆರ್‌ಐ ಕೋಟಾ ಮಂಜೂರು ಮಾಡಬೇಕೆಂದು ಮನವಿ ಮಾಡಿದ್ದಾರೆ.

ಪ್ರಸಕ್ತ 22 ಸರ್ಕಾರಿ ವೈದ್ಯಕೀಯ ಕಾಲೇಜುಗಳು 2023-24 ನೇ ಸಾಲಿನಲ್ಲಿ 3,450 ಸೀಟುಗಳ ಸಾಮರ್ಥ್ಯ ಹೊಂದಿವೆ. ಅದರಲ್ಲಿ 2,929 (ಶೇ 85) ಸೀಟುಗಳು ಕರ್ನಾಟಕ ಕೋಟಾ ಮತ್ತು 521 (ಶೇ 15) ಅಖಿಲ ಭಾರತ ಕೋಟಾ ಆಗಿದೆ.

ಈಗಾಗಲೇ ರಾಜಸ್ಥಾನ, ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಪುದುಚೇರಿಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ 7 ರಿಂದ 15ರಷ್ಟು ಎನ್‌ಆರ್‌ಐ ಕೋಟಾ ನೀಡಿರುವ, ನಿದರ್ಶನಗಳನ್ನು ಮತ್ತು ಈ ರಾಜ್ಯಗಳು ಎನ್‌ಆರ್‌ಐ ವಿದ್ಯಾರ್ಥಿಗಳಿಗೆ ವಾರ್ಷಿಕ 75 ಸಾವಿರ ಡಾಲರ್‌ದಿಂದ 1 ಲಕ್ಷ ಡಾಲರ್‌ಗೂ ಹೆಚ್ಚು ಶುಲ್ಕ ವಿಧಿಸುತ್ತಿವೆ ಎಂದು ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.

ಕರ್ನಾಟಕದಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್‌ಆರ್‌ಐ ಕೋಟಾಕ್ಕೆ ಅನುಮತಿಯಿದ್ದು, ಪ್ರತಿ ವಿದ್ಯಾರ್ಥಿ ವಾರ್ಷಿಕ ₹ 1 ಕೋಟಿಯಿಂದ ₹ 2.5 ಕೋಟಿ ಕೋರ್ಸ್ ಶುಲ್ಕ ಪಾವತಿಸಬೇಕಾಗುತ್ತದೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್‌ಆರ್‌ಐ ಕೋಟಾ ಜಾರಿಯಾದರೆ ವಿದ್ಯಾರ್ಥಿಗೆ ವಾರ್ಷಿಕ ₹ 25 ಲಕ್ಷ ಶುಲ್ಕ ನಿಗದಿಪಡಿಸಬಹುದು. ಇದರಿಂದ ವೈದ್ಯಕೀಯ ಶಿಕ್ಷಣ ಇಲಾಖೆಗೆ ಮೊದಲ ವರ್ಷ ₹ 127 ಕೋಟಿ ಮತ್ತು 5ನೇ ವರ್ಷಕ್ಕೆ ಒಟ್ಟು ₹ 571.5 ಕೋಟಿ ಸಂದಾಯವಾಗಬಹುದು ಎಂದೂ ಸಚಿವರು ಉಲ್ಲೇಖಿಸಿದ್ದಾರೆ. 

ಲಭ್ಯವಿರುವ ಸೀಟುಗಳ ಒಳಗೆ ಎನ್‌ಆರ್‌ಐ ಕೋಟಾ ರಚಿಸುವುದು ಕಾರ್ಯಸಾಧ್ಯವಲ್ಲ. ಹಾಗೆ ಮಾಡಿದರೆ ಬಡವರು ಮತ್ತು ಹಿಂದುಳಿದ ವಿದ್ಯಾರ್ಥಿಗಳಿಗೆ ಕಡಿಮೆ ಸೀಟು ಸೃಷ್ಟಿಯಾಗುತ್ತವೆ. ಅಲ್ಲದೆ, ವಿದ್ಯಾರ್ಥಿಗಳು ಮತ್ತು ಪೋಷಕರಿಂದ ವಿರೋಧ ಎದುರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿರುವ ಸಚಿವರು, ರಾಜ್ಯದಲ್ಲಿರುವ ಸರ್ಕಾರಿ ಪಶು ವೈದ್ಯಕೀಯ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳು ಶೇ 15ರಷ್ಟು ಎನ್‌ಆರ್‌ಐ ಕೋಟಾ ಹೊಂದಿರುವುದನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT