ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರು... ಮತ್ತೊಮ್ಮೆ ತಣ್ಣೀರು: ವಸತಿ ಯೋಜನೆಗೆ ನೀಡಿದ್ದ ₹ 300 ಕೋಟಿ ವಾಪಸ್

ಅಲೆಮಾರಿ ಸಮುದಾಯಗಳ ವಸತಿ ಯೋಜನೆಗೆ ನಿಗದಿಯಾಗಿದ್ದ ₹ 300 ಕೋಟಿ ವಾಪಸ್
Last Updated 26 ಜನವರಿ 2023, 19:43 IST
ಅಕ್ಷರ ಗಾತ್ರ

ಬೆಂಗಳೂರು: ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡದಲ್ಲಿನ (ಎಸ್‌ಟಿ) ಅಲೆಮಾರಿ ಸಮುದಾಯಗಳ ಜನರ ವಸತಿ ಯೋಜನೆಗೆ ಮೀಸಲಿಟ್ಟಿದ್ದ ₹ 300 ಕೋಟಿ ಅನುದಾನವನ್ನು ಇತರ ವಸತಿ ಯೋಜನೆಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದೇ ಯೋಜನೆಯಡಿ 2021– 22ನೇ ಸಾಲಿನಲ್ಲಿ ಮೀಸಲಿಟ್ಟಿದ್ದ ₹ 250 ಕೋಟಿಯನ್ನು ಈ ಹಿಂದೆಯೂ ಸರ್ಕಾರ ವಾಪಸ್ ಪಡೆದಿತ್ತು.

ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳಿಗೆ ಆದ್ಯತೆ ಮೇರೆಗೆ ಮನೆ ನಿರ್ಮಿಸಿ ಕೊಡುವುದಾಗಿ 2022–23ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದರು. ಬಜೆಟ್‌ ಘೋಷಣೆಯಂತೆ ₹ 300 ಕೋಟಿ ಅನುದಾನ ನಿಗದಿಪಡಿಸಿ ಸಮಾಜ ಕಲ್ಯಾಣ ಇಲಾಖೆ 2022 ಏಪ್ರಿಲ್‌ 18ರಂದು ಆದೇಶ ಹೊರಡಿಸಿತ್ತು.

ರಾಜೀವ್ ಗಾಂಧಿ ವಸತಿ ಯೋಜನೆಯಡಿ ₹ 2 ಲಕ್ಷ ಘಟಕ ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಅದರ ಜತೆಗೆ ಹೆಚ್ಚುವರಿಯಾಗಿ ₹ 2 ಲಕ್ಷ ನೀಡಿ ಒಟ್ಟು ₹ 4 ಲಕ್ಷ ಘಟಕ ವೆಚ್ಚದಲ್ಲಿ ಮನೆ ನಿರ್ಮಿಸಲು ₹ 300 ಕೋಟಿ ಮೀಸಲಿಡಲಾಗಿತ್ತು. ಈ ಸಂಬಂಧ ಮನೆ ಮಂಜೂರಾತಿ ಮತ್ತು ಆದೇಶ ಪತ್ರಗಳನ್ನೂ ಶಿವಮೊಗ್ಗದಲ್ಲಿ ಸೆ. 3ರಂದು ಸಾಂಕೇತಿಕವಾಗಿ ಸರ್ಕಾರ ವಿತರಣೆ ಮಾಡಿತ್ತು.

ಆದರೆ, ಜ. 21ರಂದು ಆರ್ಥಿಕ ಇಲಾಖೆ ಟಿಪ್ಪಣಿಯೊಂದನ್ನು ಹೊರಡಿಸಿದ್ದು, ಅಲೆಮಾರಿಗಳ ವಸತಿ ಯೋಜನೆಗೆ ಬಿಡುಗಡೆ ಮಾಡಿರುವ ₹ 300 ಕೋಟಿ ಅನುದಾನವನ್ನು ಅಂಬೇಡ್ಕರ್ ವಸತಿ ಯೋಜನೆಯಡಿ ಈಗಾಗಲೇ ಮಂಜೂರಾತಿ ನೀಡಿರುವ ಮನೆಗಳ ಬಾಕಿ ಕಂತುಗಳಿಗೆ ಬಳಸಿಕೊಳ್ಳಲು ಸೂಚನೆ ನೀಡಿದೆ. ಸಮಾಜ ಕಲ್ಯಾಣ ಇಲಾಖೆ ಪ್ರಸ್ತಾಪಿಸಿ ರುವ ಅಲೆಮಾರಿ ಫಲಾನುಭವಿ ಗಳನ್ನು ಹೊಸದಾಗಿ ಮಂಜೂರು ಮಾಡಿದ 5 ಲಕ್ಷ ಮನೆ ನಿರ್ಮಾಣ ಯೋಜನೆಯಲ್ಲಿ ಪರಿಗಣಿಸಬಹುದು ಎಂದು ತಿಳಿಸಿದೆ.

‘2021–22ನೇ ಸಾಲಿನಲ್ಲಿ ನಿಗದಿ ಮಾಡಿದ್ದ ₹ 250 ಕೋಟಿಯನ್ನು ಆರ್ಥಿಕ ಇಲಾಖೆ ಇದೇ ರೀತಿ 2022ರ ಜ. 21ರಂದು ವರ್ಗಾಯಿಸಿ ಆದೇಶಿಸಿತ್ತು. ಈ ವರ್ಷ ಕೂಡ ಅದೇ ದಿನಾಂಕದಂದು ₹ 300 ಕೋಟಿ ಅನುದಾನವನ್ನು ವರ್ಗಾಯಿಸಿದೆ. ಅಲೆಮಾರಿ ಸಮುದಾಯಗಳ ಸ್ವಂತ ಸೂರಿನ ಕನಸು ಮತ್ತೊಮ್ಮೆ ಭಗ್ನವಾಗಿದೆ’ ಎಂದು ಅಲೆಮಾರಿ ಸಮುದಾಯಗಳ ಮುಖಂಡರು ಬೇಸರ ವ್ಯಕ್ತಪಡಿಸಿದರು.

‘ಅಂಬೇಡ್ಕರ್ ವಸತಿ ಯೋಜನೆ ಯಡಿ ಗ್ರಾಮ ಪಂಚಾಯಿತಿಗಳ ಮೂಲಕ ನೀಡುವ ಮನೆಗಳನ್ನು ಈ ಅತಿಸೂಕ್ಷ್ಮ ಸಮುದಾಯಗಳು ಪಡೆಯಲು ಸಾಧ್ಯವಿಲ್ಲ. ಅಲ್ಲದೇ, 14 ರೀತಿಯ ದಾಖಲೆಗಳನ್ನು ಒದಗಿಸಿ ಕೊಡಬೇಕು. ಅಷ್ಟು ದಾಖಲೆ ನೀಡುವುದು ಈ ಸಮುದಾಯಕ್ಕೆ ಕಷ್ಟ. ಆದ್ದರಿಂದ ಸಮಾಜ ಕಲ್ಯಾಣ ಇಲಾಖೆಯಡಿ ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮಗಳ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. 14 ಸಾವಿರ ಅಲೆಮಾರಿ ಕುಟುಂಬಗಳು ಮನೆ ಬಯಸಿ ಅರ್ಜಿ ಸಲ್ಲಿಸಿವೆ’ ಎಂದು ವಿವರಿಸಿದರು.

‘ಊಟ ಕೊಟ್ಟು ತಟ್ಟೆ ಕಿತ್ತುಕೊಂಡರು’

‘ಕೊರಮ, ಕೊರಚ, ಹಂದಿ ಜೋಗಿ, ಸುಡುಗಾಡು ಸಿದ್ಧ, ಚನ್ನದಾಸರು, ಹೊಲೆಯ ದಾಸರು, ಮಾಲದಾಸರು, ಬುಡುಗ ಜಂಗಮ, ದೊಂಬರು, ಹಕ್ಕಿಪಿಕ್ಕಿ, ಇರುಳಿಗ, ಮೇದ, ಗೊಂಡ ಸೇರಿ 73 ಅಲೆಮಾರಿ ಸಮುದಾಯಗಳಿಗೆ ಅನ್ಯಾಯವಾಗಿದೆ. ಊಟ ಕೊಟ್ಟು ತಟ್ಟೆ ಕಿತ್ತುಕೊಳ್ಳುವ ಕೆಲಸವನ್ನು ಸರ್ಕಾರ ಮಾಡಿದೆ’ ಎಂದು ಎಸ್‌ಸಿ, ಎಸ್‌ಟಿ ಅಲೆಮಾರಿ ವಿಮುಕ್ತ ಬುಡಕಟ್ಟು ಮಹಾಸಭಾದ ಪ್ರಧಾನ ಕಾರ್ಯದರ್ಶಿ ಕಿರಣ್‌ಕುಮಾರ್ ಕೊತ್ತಗೆರೆ ಬೇಸರ ವ್ಯಕ್ತಪಡಿಸಿದರು.

‘ಇನ್ನೊಂದು ವಾರದಲ್ಲಿ ಆದೇಶವನ್ನು ವಾಪಸು ಪಡೆದು ಅನುದಾನ ಮರಳಿ ನೀಡಬೇಕು. ಇಲ್ಲದಿದ್ದರೆ ಈ ಸಮುದಾಯಗಳು ಸರ್ಕಾರದ ವಿರುದ್ಧ ಹೋರಾಟಕ್ಕೆ ಸಜ್ಜಾಗಲಿವೆ’ ಎಂದು ತಿಳಿಸಿದರು.

***

ವಸತಿ ಉದ್ದೇಶಕ್ಕೆ ಸಮಾಜ ಕಲ್ಯಾಣ ಇಲಾಖೆ ನಿಗದಿ ಮಾಡಿರುವ ಅನುದಾನವನ್ನು ಬೇರೆ ಉದ್ದೇಶಕ್ಕೆ ಬಳಕೆ ಮಾಡಲು ಸಾಧ್ಯವಿಲ್ಲ. ಆರ್ಥಿಕ ಇಲಾಖೆಗೆ ಪತ್ರ ಬರೆದು ಹಣ ವಾಪಸ್ ತರಿಸುತ್ತೇವೆ ಕೋಟ ಶ್ರೀನಿವಾಸ ಪೂಜಾರಿ

- ಸಮಾಜ ಕಲ್ಯಾಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT