ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲಿಂಗಾಯತ ಅಧಿಕಾರಿಗಳನ್ನು ಸರ್ಕಾರ ಕಡೆಗಣಿಸಿಲ್ಲ: ಸಚಿವ ಮಹದೇವಪ್ಪ

Published : 3 ಅಕ್ಟೋಬರ್ 2023, 12:38 IST
Last Updated : 3 ಅಕ್ಟೋಬರ್ 2023, 12:38 IST
ಫಾಲೋ ಮಾಡಿ
Comments

ಮೈಸೂರು: ಲಿಂಗಾಯತ ಸಮುದಾಯದ ಅಧಿಕಾರಿಗಳೂ ಸೇರಿದಂತೆ ಯಾರನ್ನೂ ಸರ್ಕಾರ ಮೂಲೆಗುಂಪು ಮಾಡಿಲ್ಲ. ಆ ರೀತಿ ಮಾಡಲೂ ಆಗದು ಎಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್‌.ಸಿ. ಮಹದೇವಪ್ಪ ಸ್ಪಷ್ಟನೆ ನೀಡಿದರು.

ಶ್ಯಾಮನೂರು ಶಿವಶಂಕರಪ್ಪ ಹೇಳಿಕೆ ಕುರಿತು ಮಂಗಳವಾರ ಇಲ್ಲಿ ಪತ್ರಕರ್ತರಿಗೆ ಅವರು ಪ್ರತಿಕ್ರಿಯೆ ನೀಡಿದರು. ‘ ಶಿವಶಂಕರಪ್ಪ ಅವರು ಲಿಂಗಾಯತ ಮಹಾಸಭಾ ಅಧ್ಯಕ್ಷರಾಗಿ ಆ ಮಾತು ಹೇಳಿರಬಹುದು. ಶ್ಯಾಮನೂರು ಪುತ್ರ ಮಲ್ಲಿಕಾರ್ಜುನ ಸೇರಿದಂತೆ ಆ ಸಮುದಾಯದ ಏಳು ಸಚಿವರು ಸಂಪುಟದಲ್ಲಿ ಇದ್ದಾರೆ. ಐಎಎಸ್‌, ಐಪಿಎಸ್‌ ಸೇರಿದಂತೆ ಯಾವ್ಯಾವ ಹುದ್ದೆಯಲ್ಲಿ ಲಿಂಗಾಯತರು ಇದ್ದಾರೆ ಎಂಬ ಪಟ್ಟಿಯೂ ಬಹಿರಂಗಗೊಂಡಿದೆ. ಭಾರತ ಜಾತ್ಯತೀತ ದೇಶ. ಜಾತಿಯ ಆಧಾರದ ಮೇಲೆ ಆಡಳಿತ ನಡೆಸಲು ಆಗದು. ಎಲ್ಲ ಜಾತಿ–ಧರ್ಮೀಯರೂ ಸಮಾಜದ ಅಂಗ. ಎಲ್ಲರನ್ನು ಒಗ್ಗೂಡಿಸಿಕೊಂಡೇ ಆಡಳಿತ ನಡೆಸಲು ಸಾಧ್ಯ’ ಎಂದರು.

ಬಿಹಾರದಂತೆ ಕರ್ನಾಟಕದಲ್ಲಿಯೂ ಜಾತಿಗಣತಿ ಬಿಡುಗಡೆ ಮಾಡುವಂತೆ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್‌ ಆಗ್ರಹದ ಕುರಿತು ಮಾತನಾಡಿ ‘ ಸಿದ್ದರಾಮಯ್ಯ ಹಿಂದಿನ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದಾಗಲೇ ಜಾತಿಗಣತಿಗೆ ₹350 ಕೋಟಿ ಅನುದಾನ ಒದಗಿಸಿದ್ದರು. ಸೂಕ್ತ ಕಾಲದಲ್ಲಿ ಅದು ಬಿಡುಗಡೆ ಆಗಲಿದೆ. ಬಿಹಾರದಲ್ಲಿ ವರದಿ ಬಿಡುಗಡೆ ಸ್ವಾಗತಾರ್ಹ. ದೇಶದ ಇತರೆಡೆಯೂ ಈ ಕೆಲಸ ಆಗಲಿ’ ಎಂದರು. ‘ ಕಾಂಗ್ರೆಸ್‌ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ಆದರೆ ಪಕ್ಷದ ಮುಖಂಡರು ಯಾವುದನ್ನು ಎಲ್ಲಿ ಹೇಳಬೇಕೋ ಅಲ್ಲಿ ಹೇಳಿದರೆ ಉತ್ತಮ’ ಎಂದು ಕಿವಿಮಾತು ಹೇಳಿದರು.

ಹಗಲುಕನಸು: ಸಂಕ್ರಾಂತಿ ವೇಳೆಗೆ ರಾಜ್ಯ ಸರ್ಕಾರ ಪತನವಾಗಲಿದೆ ಎಂಬ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್‌ ಹೇಳಿಕೆಗೆ ಪ್ರತಿಕ್ರಿಯಿಸಿ ‘ ಅವರು ಹಗಲು ಕನಸು ಕಾಣುತ್ತಿದ್ದಾರೆ. ರಾಜ್ಯದ ಜನ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ನೀಡಿದ್ದಾರೆ. ಹೀಗಿರುವಾಗ ಸರ್ಕಾರ ಹೇಗೆ ಬೀಳಿಸಲು ಸಾಧ್ಯ? ಜನಾದೇಶದ ಮೇಲೆ ಬಿಜೆಪಿಯವರಿಗೆ ಗೌರವ ಇಲ್ಲವೇ’ ಎಂದು ಪ್ರಶ್ನಿಸಿದರು.

ಈ ಹಿಂದಿನ ಸರ್ಕಾರಗಳ ಅವಧಿಯಲ್ಲಿ ದಾಖಲಾಗಿರುವ ರಾಜಕೀಯ ಪ್ರೇರಿತ ಪ್ರಕರಣಗಳನ್ನು ಪರಿಶೀಲಿಸಿ ಹಿಂಪಡೆಯಲಾಗುವುದು. ಅದನ್ನು ಸಚಿವ ಸಂಪುಟ ಉಪಸಮಿತಿಯು ತೀರ್ಮಾನಿಸಲಿದೆ ಎಂದರು.

ಗೊಂದಲ ಸೃಷ್ಟಿಸದಿರಿ: ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ‘ ಸಿದ್ದರಾಮಯ್ಯ ಹಿಂದೆ ಮುಖ್ಯಮಂತ್ರಿ ಆಗಿದ್ದಾಗಲೇ ಜಾತಿಗಣತಿಗಾಗಿ ಕಾಂತರಾಜು ನೇತೃತ್ವದಲ್ಲಿ ಸಮಿತಿ ನೇಮಿಸಿದ್ದರು. ಆದರೆ ಆ ವರದಿಯನ್ನು ಇನ್ನೂ ನಾವು ನೋಡಿಲ್ಲ. ಸೂಕ್ತ ಸಮಯದಲ್ಲಿ ಬಿಡುಗಡೆ ಆಗಲಿದೆ. ಹಾಗೆಯೇ, ಲಿಂಗಾಯತ ಅಧಿಕಾರಿಗಳ ವಿಚಾರದಲ್ಲಿ ಅನಗತ್ಯವಾಗಿ ಗೊಂದಲ ಸೃಷ್ಟಿಸಬಾರದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT