ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

Published 30 ಸೆಪ್ಟೆಂಬರ್ 2023, 16:08 IST
Last Updated 30 ಸೆಪ್ಟೆಂಬರ್ 2023, 16:08 IST
ಅಕ್ಷರ ಗಾತ್ರ

ಬೆಂಗಳೂರು: ‘ಈಗಿನ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳ ಸ್ಥಿತಿ ನಾಯಿಪಾಡು ಆಗಿದೆ’ ಎಂದು ಕಾಂಗ್ರೆಸ್‌ ಶಾಸಕರೂ ಆಗಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿರುವುದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ನಮ್ಮ ಸರ್ಕಾರ ಯಾವ ಸಮುದಾಯಕ್ಕೂ ಅನ್ಯಾಯ ಮಾಡಿಲ್ಲ’ ಎಂದು ಪ್ರತಿಪಾದಿಸಿದ್ದಾರೆ.

‘ಎಸ್‌. ನಿಜಲಿಂಗಪ್ಪ ಅವರಿಂದ ಹಿಡಿದು ಯಡಿಯೂರಪ್ಪ, ಬಸವರಾಜ ಬೊಮ್ಮಾಯಿವರೆಗೆ ನಮ್ಮ ಸಮುದಾಯದ ಮುಖ್ಯಮಂತ್ರಿಗಳು ಇದ್ದಾಗ ಲಿಂಗಾಯತ ಸಮುದಾಯದ ಅಧಿಕಾರಿಗಳಿಗೆ ಆಯಕಟ್ಟಿನ ಸ್ಥಾನ ಇರುತ್ತಿತ್ತು. ಈಗ ಮೂಲೆಗುಂಪು ಆಗಿದ್ದಾರೆ’ ಎಂದು ಶಾಮನೂರು ದೂರಿದ್ದರು.

ಇದಕ್ಕೆ ಶನಿವಾರ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ನನ್ನ ಬಳಿ ಅಂಕಿಅಂಶಗಳಿವೆ. ಯಾರಿಗೂ ಅನ್ಯಾಯವಾಗಿಲ್ಲ’ ಎಂದು ಹೇಳಿದರು.

‘ಶಿವಶಂಕರಪ್ಪನವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಲಿಂಗಾಯತ ಸಮುದಾಯಕ್ಕೆ ಸೇರಿದ ಏಳು ಸಚಿವರು ಸಚಿವ ಸಂಪುಟದಲ್ಲಿದ್ದಾರೆ. ಲಿಂಗಾಯತ ಸಮುದಾಯಕ್ಕೆ ಸೇರಿದ ಅಧಿಕಾರಿಗಳಿಗೆ ಅನ್ಯಾಯವಾಗಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಜಾತಿ, ಧರ್ಮದವರಿಗೆ ಅನ್ಯಾಯವಾಗುವುದಿಲ್ಲ’ ಎಂದೂ ತಿಳಿಸಿದರು.

‌ಚರ್ಚೆ ಮಾಡುತ್ತೇನೆ: ‘ಶಾಮನೂರು ಶಿವಶಂಕರಪ್ಪ ಅವರು ಏಕೆ ಹೀಗೆ ಹೇಳಿದ್ದಾರೆ ಎನ್ನುವ ಕುರಿತು ಅವರ ಬಳಿ ಚರ್ಚೆ ಮಾಡುತ್ತೇನೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

‘ಅವರ ಹೇಳಿಕೆ ಬಗ್ಗೆ ನನಗೆ ತಿಳಿದಿಲ್ಲ. ತಿಳಿದುಕೊಂಡು ಮಾತನಾಡುತ್ತೇನೆ’ ಎಂದರು.

‘ಮಗನ ಮೂಲಕ ಶಾಮನೂರು ಪರಿಹಾರ ಪಡೆಯಲಿ’

‘ತಮ್ಮ ಸಮುದಾಯದ ಯಾವುದೇ ಅಧಿಕಾರಿ ತೊಂದರೆ ಅನುಭವಿಸುತ್ತಿದ್ದರೆ ಸಚಿವರಾಗಿರುವ ತಮ್ಮ ಮಗನಿಗೆ (ಎಸ್‌.ಎಸ್. ಮಲ್ಲಿಕಾರ್ಜುನ) ಹೇಳಿ ಶಾಮನೂರು ಅವರು ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ’ ಎಂದು ಆಹಾರ ಸಚಿವ ಕೆ.ಎಚ್‌. ಮುನಿಯಪ್ಪ ಹೇಳಿದರು.

‘ಈಗಿನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿದವರಲ್ಲಿ ಶಾಮನೂರು ಕೂಡ ಒಬ್ಬರು. ಏನಾದರೂ ಸಮಸ್ಯೆಗಳಿದ್ದರೆ ಅವರು ನೇರವಾಗಿ ಮುಖ್ಯಮಂತ್ರಿ ಬಳಿ ಚರ್ಚಿಸುವುದಕ್ಕೆ ಯಾರ ಅಡೆತಡೆಯೂ ಇಲ್ಲ’ ಎಂದರು.

ಕಾಂಗ್ರೆಸ್ ಜತೆ ಲಿಂಗಾಯತ ಸಮುದಾಯ: ಸಚಿವೆ ಲಕ್ಷ್ಮಿ

‌‘ಕಾಂಗ್ರೆಸ್ ಪಕ್ಷ ಯಾವುದೇ ಒಂದು ಸಮುದಾಯದ ಬೆಂಬಲದಿಂದ ಅಧಿಕಾರಕ್ಕೇರಿಲ್ಲ. ಎಲ್ಲ ಸಮುದಾಯದವರ ಬೆಂಬಲ ಸಿಕ್ಕಿದೆ. ಹಿಂದೆಲ್ಲ ಲಿಂಗಾಯತ ಸಮಾಜವು ಕಾಂಗ್ರೆಸ್ ಜೊತೆಗೆ ಇಲ್ಲ ಎಂಬ ಕೊರಗಿತ್ತು. ಆ ಕೊರಗು ಈಗಿಲ್ಲ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

‘ಶಾಮನೂರು ಶಿವಶಂಕರಪ್ಪನವರ ಹೇಳಿಕೆ ನನ್ನ ಗಮನಕ್ಕೂ ಬಂದಿದೆ. ಈ ಬಗ್ಗೆ ಅವರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಚರ್ಚೆ ಮಾಡುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT