ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಧೋರಣೆಯಿಂದ ಕಾಮೆಡ್‌ಕೆಗೆ ಲಾಭ: ಪೋಷಕರ ದೂರು

Last Updated 26 ಜುಲೈ 2018, 15:21 IST
ಅಕ್ಷರ ಗಾತ್ರ

ಬೆಂಗಳೂರು: ಕಾಮೆಡ್‌ಕೆ (ಕರ್ನಾಟಕ ವೈದ್ಯ, ಎಂಜಿನಿಯರಿಂಗ್‌, ದಂತವೈದ್ಯ ಕಾಲೇಜುಗಳ ಒಕ್ಕೂಟ) ಎಂಜಿನಿಯರಿಂಗ್‌ ಕೋರ್ಸ್‌ಗಳಿಗೆ ಸಿಇಟಿಗಿಂತ ಮೊದಲೇ ಕೌನ್ಸೆಲಿಂಗ್‌ ನಡೆಸಿರುವುದರಿಂದ ಬಡ ಮತ್ತು ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿದ್ದಾರೆ ಎಂದು ಪೋಷಕರು ದೂರಿದ್ದಾರೆ.

ಹೀಗೆ ಮಾಡುವ ಮೂಲಕ ವಿದ್ಯಾರ್ಥಿಗಳು ಅನಿವಾರ್ಯವಾಗಿ ಹೆಚ್ಚು ಶುಲ್ಕ ಪಾವತಿಸಿ ಕಾಮೆಡ್‌ಕೆ ಸೀಟುಗಳನ್ನು ನೆಚ್ಚಿಕೊಳ್ಳುವ ಅನಿವಾರ್ಯತೆ ಸೃಷ್ಟಿಸಲಾಗಿದೆ ಎಂದು ಪೋಷಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಸಿಇಟಿಯ ಮೊದಲನೇ ಮತ್ತು ಎರಡನೇ ಸುತ್ತಿನ ಕೌನ್ಸೆಲಿಂಗ್‌ಗಳನ್ನು ಕಾಮೆಡ್‌ಕೆಗಿಂತ ತಡವಾಗಿ ನಡೆಸುತ್ತಿರುವುದರ ಹಿಂದೆ ದುರುದ್ದೇಶವಿದೆ ಎಂದು ಹೇಳಿದರು.

ಇದೇ 16 ರಂದು ಕಾಮೆಡ್‌ಕೆ ಕೌನ್ಸೆಲಿಂಗ್‌ ನಡೆಯಿತು. ನಾಲ್ಕೇ ದಿನಗಳ ಅಂತರದಲ್ಲಿ ಸಿಇಟಿ ಜುಲೈ 20 ರಂದು ಕೌನ್ಸೆಲಿಂಗ್‌ ನಡೆಸಿತು. ಇದಾದ ಬಳಿಕ ಕಾಮೆಡ್‌ಕೆ ಎರಡನೇ ಸುತ್ತಿನ ಕೌನ್ಸಿಲಿಂಗ್‌ ಆರಂಭಿಸಿತು. ಸಿಇಟಿಯ ಎರಡನೇ ಸುತ್ತಿನ ಕೌನ್ಸೆಲಿಂಗ್‌ ತಡವಾಗಿರುವುದರಿಂದ ವಿದ್ಯಾರ್ಥಿಗಳು ಕಾಮೆಡ್‌ಕೆ ಸೀಟುಗಳನ್ನೇ ಆಯ್ಕೆ ಮಾಡಿಕೊಳ್ಳಬೇಕಾದ ಒತ್ತಡದ ತಂತ್ರ ಅನುಸರಿಸಲಾಗಿದೆ. ಸಿಇಟಿ ಸೀಟಿಗೆ ಸುಮಾರು ₹ 50 ಸಾವಿರ ಶುಲ್ಕವಾದರೆ, ಕಾಮೆಡ್‌ ಕೆ ಶುಲ್ಕ ₹1.95 ಲಕ್ಷಗಿಂತಲೂ ಹೆಚ್ಚು ಎಂದು ಹೇಳಿದರು.

ಕಾಮೆಡ್‌ಕೆ ಪ್ರತಿ ದಿನ 7,000 ದಿಂದ 8,000 ವಿದ್ಯಾರ್ಥಿಗಳ ಕೌನ್ಸೆಲಿಂಗ್‌ ನಡೆಸಿತ್ತು. ಐದು ದಿನಗಳಲ್ಲಿ 35,000 ವಿದ್ಯಾರ್ಥಿಗಳ ಕೌನ್ಸೆಲಿಂಗ್‌ ನಡೆಸಿದೆ. ಕಾಮೆಡ್‌ಕೆಯಡಿ ಸೀಟು ಪಡೆದು ಕಾಲೇಜಿನಲ್ಲಿ ಶುಲ್ಕ ಪಾವತಿ ಮಾಡಿದರೆ, ಬಿಟ್ಟು ಬೇರೆ ಕಾಲೇಜಿಗೆ ಹೋಗುವ ಸಂದರ್ಭ ಬಂದರೆ ಯಾವುದೇ ಕಾರಣಕ್ಕೂ ಶುಲ್ಕವನ್ನು ಹಿಂತಿರುಗಿಸುವುದಿಲ್ಲ. ಒಟ್ಟಿನಲ್ಲಿ ಕಾಮೆಡ್‌ಕೆ ಸೀಟುಗಳನ್ನು ಭರ್ತಿ ಮಾಡುವ ಉದ್ದೇಶದಿಂದಲೇ ತಂತ್ರಗಾರಿಕೆ ಮಾಡಲಾಗಿದೆ ಎಂದು ತಿಳಿಸಿದರು.

ಸಾಕಷ್ಟು ರಾಜಕಾರಣಿಗಳು ಎಂಜಿನಿಯರಿಂಗ್‌ ಕಾಲೇಜುಗಳನ್ನು ನಡೆಸುತ್ತಿದ್ದಾರೆ. ತಮ್ಮ ಸಂಸ್ಥೆಗಳ ಹಿತಾಸಕ್ತಿ ಕಾಪಾಡಲು ಕುತಂತ್ರ ಮಾಡಿದ್ದಾರೆ. ಕಳೆದ ವರ್ಷ ಕಾಮೆಡ್‌ಕೆ ಕಾಲೇಜುಗಳಲ್ಲಿ ಭಾರಿ ಸಂಖ್ಯೆ ಸೀಟುಗಳು ಭರ್ತಿ ಆಗಿರಲಿಲ್ಲ. ಅದರಿಂದ ಈ ಬಾರಿ ಒಳ ಒಪ್ಪಂದದ ಮೂಲಕ ಕೌನ್ಸೆಲಿಂಗ್‌ ದಿನಾಂಕಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ನಿಗದಿ ಮಾಡಿಕೊಂಡಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT