ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ: ‘ವಾಸ್ತವಿಕ’ ಮಾರ್ಗಸೂಚಿ ದರಕ್ಕೆ ಸಿದ್ಧತೆ

ಅಕ್ಟೋಬರ್‌ಗೂ ಮುನ್ನ ಪರಿಷ್ಕೃತ ದರ ಜಾರಿಗೆ ಪ್ರಕ್ರಿಯೆ ಆರಂಭ
Published 31 ಜುಲೈ 2023, 0:30 IST
Last Updated 31 ಜುಲೈ 2023, 0:30 IST
ಅಕ್ಷರ ಗಾತ್ರ

ವಿ.ಎಸ್‌. ಸುಬ್ರಹ್ಮಣ್ಯ

ಬೆಂಗಳೂರು: ‘ಗ್ಯಾರಂಟಿ’ ಯೋಜನೆಗಳ ಅನುಷ್ಠಾನಕ್ಕೆ ಅಗತ್ಯವಿರುವ ಹೆಚ್ಚುವರಿ ಸಂಪನ್ಮೂಲ ಕ್ರೋಡೀಕರಣಕ್ಕೆ ಪೂರಕವಾಗಿ ವಾಸ್ತವಿಕ ಮಾರುಕಟ್ಟೆ ದರವನ್ನು ಆಧರಿಸಿ ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಿಸಲು ಕಂದಾಯ ಇಲಾಖೆ ಪ್ರಕ್ರಿಯೆ ಆರಂಭಿಸಿದೆ. ರಾಜ್ಯದ ಹಲವು ಭಾಗಗಳಲ್ಲಿ ಈ ಬಾರಿ ಸ್ಥಿರಾಸ್ತಿ ಮಾರ್ಗಸೂಚಿ ದರಗಳಲ್ಲಿ ಗಣನೀಯ ಏರಿಕೆಯಾಗುವ ಸಾಧ್ಯತೆ ಇದೆ.

ರಾಜ್ಯದ ಪ್ರಮುಖ ನಗರ ಮತ್ತು ಪಟ್ಟಣಗಳ ಹೊರ ವಲಯಗಳು ಹಾಗೂ ನಗರ ಪ್ರದೇಶಗಳಿಗೆ ಹೊಂದಿಕೊಂಡಿರುವ ಅರೆ–ನಗರ ಪ್ರದೇಶಗಳ ಬಹುತೇಕ ಭಾಗಗಳಲ್ಲಿ ಸ್ಥಿರಾಸ್ತಿಗಳ ವಾಸ್ತವಿಕ ಮಾರುಕಟ್ಟೆ ದರ ಹಾಗೂ ಮಾರ್ಗಸೂಚಿ ದರಗಳ ಮಧ್ಯೆ ಭಾರಿ ವ್ಯತ್ಯಾಸ ಇದೆ. ಅಂತಹ ಎಲ್ಲ ಪ್ರದೇಶಗಳನ್ನೂ ಗುರುತಿಸಿ, ಮಾರುಕಟ್ಟೆ ದರದ ಕುರಿತು ಮಾಹಿತಿ ಸಂಗ್ರಹಿಸಿ ಅದರ ಆಧಾರದಲ್ಲಿ ಮಾರ್ಗಸೂಚಿ ದರ ಪರಿಷ್ಕರಣೆಗೆ ಕ್ರಮ ಕೈಗೊಳ್ಳುವಂತೆ ಆರ್ಥಿಕ ಇಲಾಖೆಯು ಕಂದಾಯ ಇಲಾಖೆಗೆ ನಿರ್ದೇಶನ ನೀಡಿದೆ.

ಆರ್ಥಿಕ ಇಲಾಖೆಯ ನಿರ್ದೇಶನದಂತೆ ವಾಸ್ತವಿಕ ಮಾರುಕಟ್ಟೆ ದರಗಳ ಕುರಿತು ಅಧ್ಯಯನ ನಡೆಸಿ, ಮಾರ್ಗಸೂಚಿ ದರ ಪರಿಷ್ಕರಣೆಗೆ ಇರುವ ಅವಕಾಶಗಳ ಕುರಿತು ಅಂದಾಜು ವರದಿ ನೀಡುವಂತೆ ಕಂದಾಯ ಇಲಾಖೆಯು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತರಿಗೆ ಸೂಚನೆ ನೀಡಿದೆ. ವರದಿ ಸಲ್ಲಿಕೆಯಾಗುತ್ತಿದ್ದಂತೆಯೇ ಮಾರ್ಗಸೂಚಿ ದರ ಪರಿಷ್ಕರಣೆಗೆ ಹಸಿರು ನಿಶಾನೆ ದೊರೆಯಲಿದೆ.

‘ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರ ಪ್ರದೇಶಗಳು, ಹೊಸದಾಗಿ ನಗರೀಕರಣ ಚಟುವಟಿಕೆ ನಡೆಯುತ್ತಿರುವ ಪ್ರದೇಶಗಳು, ಹೊಸ ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯ ಹೆದ್ದಾರಿಗಳು ಮತ್ತು ಜಿಲ್ಲಾ ಮುಖ್ಯ ರಸ್ತೆಗಳು ನಿರ್ಮಾಣವಾಗಿರುವ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಸ್ಥಿರಾಸ್ತಿ ಮಾರ್ಗಸೂಚಿ ದರ ಏರಿಕೆ ಮಾಡಲು ಇರುವ ಸಾಧ್ಯತೆಗಳ ಕುರಿತು ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಈ ಎಲ್ಲ ಕಡೆಗಳಲ್ಲೂ ವಾಸ್ತವಿಕ ಮಾರುಕಟ್ಟೆ ದರಗಳನ್ನು ಸಂಗ್ರಹಿಸಿ ಮುಂದಿನ ವಾರದ ಅಂತ್ಯದೊಳಗೆ ವರದಿ ಸಲ್ಲಿಸಲು ಸಿದ್ಧತೆ ನಡೆದಿದೆ’ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಅಕ್ಟೋಬರ್‌ನಿಂದ ಜಾರಿಗೆ ಸಿದ್ಧತೆ:

ಸಂಪನ್ಮೂಲ ಸಂಗ್ರಹಕ್ಕೆ ವೇಗ ನೀಡುವ ಉದ್ದೇಶದಿಂದ ಅಕ್ಟೋಬರ್‌ ತಿಂಗಳಿಗೂ ಮೊದಲೇ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಹಣಕಾಸು ಇಲಾಖೆ ಸೂಚನೆ ನೀಡಿದೆ. ಅಕ್ಟೋಬರ್‌ ತಿಂಗಳಿನಿಂದ ಪರಿಷ್ಕೃತ ದರಗಳ ಆಧಾರದಲ್ಲಿ ಸ್ಥಿರಾಸ್ತಿಗಳ ನೋಂದಣಿಗೆ ಅವಕಾಶ ನೀಡುವ ಪ್ರಸ್ತಾವ ಇಲಾಖೆಯ ಮುಂದಿದೆ.

‘ಪ್ರಾಥಮಿಕ ವರದಿ ಸಲ್ಲಿಕೆಯಾದ ಬಳಿಕ ಮಾರ್ಗಸೂಚಿ ದರ ಪರಿಷ್ಕರಣೆಯ ಮಾನದಂಡಗಳನ್ನು ಅಂತಿಮಗೊಳಿಲಾಗುವುದು. ಆಗಸ್ಟ್‌ ಅಂತ್ಯದೊಳಗೆ ಸ್ಥಳೀಯ ಮೌಲ್ಯಮಾಪನ ಸಮಿತಿಗಳಿಂದ ವರದಿ ಪಡೆದು, ಕೇಂದ್ರೀಯ ಮೌಲ್ಯಮಾಪನ ಸಮಿತಿಗಳ ಅನುಮೋದನೆಯೊಂದಿಗೆ ಪ್ರಕಟಿಸುವ ಗುರಿ ಇದೆ. ನಂತರ ಸಾರ್ವಜನಿಕರ ಆಕ್ಷೇಪಣೆಗಳನ್ನು ಆಹ್ವಾನಿಸಿ, ಅವುಗಳನ್ನು ವಿಲೇವಾರಿ ಮಾಡಿ ಸೆಪ್ಟೆಂಬರ್ 15ರೊಳಗೆ ಅಂತಿಮ ಅಧಿಸೂಚನೆ ಹೊರಡಿಸುವಂತೆ ಹಣಕಾಸು ಇಲಾಖೆ ಸೂಚಿಸಿದೆ. ಆದರೆ, ಈ ಎಲ್ಲ ಪ್ರಕ್ರಿಯೆಗೆ ಕಾಲಾವಕಾಶ ಬೇಕಿರುವುದರಿಂದ ಸೆಪ್ಟೆಂಬರ್‌ ಅಂತ್ಯದೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ’ ಎಂದೂ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಮೂಲಗಳು.

‘ಏಕರೂಪ ಹೆಚ್ಚಳ ಇಲ್ಲ’

‘ರಾಜ್ಯದಾದ್ಯಂತ ಸರಾಸರಿ ಆಧಾರದಲ್ಲಿ ಮಾರ್ಗಸೂಚಿ ದರ ಹೆಚ್ಚಿಸುವ ಕ್ರಮ ಈ
ಬಾರಿ ಇರುವುದಿಲ್ಲ. ವಾಸ್ತವಿಕ ಮಾರುಕಟ್ಟೆ ದರ ಮತ್ತು ಮಾರ್ಗಸೂಚಿ ದರದ ಮಧ್ಯೆ
ಭಾರಿ ಅಂತರ ಇರುವ ಪ್ರದೇಶಗಳಲ್ಲಿ ಹೆಚ್ಚಿನ ಏರಿಕೆ ಆಗಲಿದೆ. ಅಂತರ ಕಡಿಮೆ ಇರುವ ಪ್ರದೇಶಗಳಲ್ಲಿ ಮಾರ್ಗಸೂಚಿ ದರದ ಏರಿಕೆ ಪ್ರಮಾಣ ಕಡಿಮೆ ಇರಲಿದೆ’ ಎಂದು
ಆರ್ಥಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌.ಕೆ. ಅತೀಕ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಹೆಚ್ಚಿದ ಗುರಿ: ಪರಿಷ್ಕರಣೆಯೇ ದಾರಿ

2022–23ನೇ ಆರ್ಥಿಕ ವರ್ಷದಲ್ಲಿ ನೋಂದಣಿ ಮತ್ತು ಮುದ್ರಾಂಕ ಶುಲ್ಕದಿಂದ ₹15 ಸಾವಿರ ಕೋಟಿ ಸಂಗ್ರಹಿಸುವ ಗುರಿ ಹೊಂದಲಾಗಿತ್ತು. ಆರ್ಥಿಕ ವರ್ಷಾಂತ್ಯಕ್ಕೆ ₹ 17,873 ಕೋಟಿ ಸಂಗ್ರಹವಾಗಿತ್ತು.

ಕಳೆದ ಫೆಬ್ರುವರಿಯಲ್ಲಿ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ್ದ ಬಜೆಟ್‌ನಲ್ಲಿ 2023–24ನೇ ಆರ್ಥಿಕ ವರ್ಷದಲ್ಲಿ ಈ ಮೂಲದಿಂದ ₹19 ಸಾವಿರ ಕೋಟಿ ಸಂಗ್ರಹಿಸುವ ಗುರಿ ಪ್ರಕಟಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ ತಿಂಗಳಿನಲ್ಲಿ ಮಂಡಿಸಿರುವ ಬಜೆಟ್‌ನಲ್ಲಿ ಈ ಗುರಿಯನ್ನು ₹25 ಸಾವಿರ ಕೋಟಿಗೆ ಹೆಚ್ಚಿಸಲಾಗಿದೆ. ಹಿಂದಿನ ವರ್ಷದ ಸಂಗ್ರಹಕ್ಕೆ ಹೋಲಿಸಿದರೆ ಈ ಬಾರಿ ₹7,127 ಕೋಟಿಯಷ್ಟನ್ನು ಈ ಮೂಲದಿಂದ ಹೆಚ್ಚುವರಿಯಾಗಿ ಸಂಗ್ರಹಿಸಬೇಕಿದೆ. ಹಾಗಾಗಿ ಮಾರ್ಗಸೂಚಿ ಪರಿಷ್ಕರಣೆ ಅನಿವಾರ್ಯವೇ ಆಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT