ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೇಶದಲ್ಲೀಗ ‘ಒಂದರ’ ಭಯೋತ್ಪಾದನೆ: ರಹಮತ್ ತರೀಕೆರೆ

ಗೌರಿ ಲಂಕೇಶ್ ನೆನಪು ಕಾರ್ಯಕ್ರಮದಲ್ಲಿ ರಮಹತ್ ತರಿಕೆರೆ ಕಳವಳ
Published : 5 ಸೆಪ್ಟೆಂಬರ್ 2024, 20:39 IST
Last Updated : 5 ಸೆಪ್ಟೆಂಬರ್ 2024, 20:39 IST
ಫಾಲೋ ಮಾಡಿ
Comments

ಬೆಂಗಳೂರು: ‘ದೇಶದಲ್ಲಿ ಈಗ ‘ಒಂದು’ ಎಂಬುದು ಭಯೋತ್ಪಾದನೆಯ ಪದವಾಗಿದೆ. ಒಂದು ಭಾಷೆ, ಒಂದು ಚುನಾವಣೆ, ಒಂದು ಧರ್ಮ, ಒಂದು ಸಿದ್ದಾಂತ, ಒಂದು ರಾಜಕೀಯ ಪಕ್ಷ ಎಂದು ವೈವಿಧ್ಯವನ್ನು ಇಲ್ಲವಾಗಿಸುವ ಭಯವನ್ನು ಹುಟ್ಟಿಸಲಾಗುತ್ತಿದೆ’ ಎಂದು ಸಂಸ್ಕೃತಿ ಚಿಂತಕ ರಹಮತ್ ತರೀಕೆರೆ ಆತಂಕ ವ್ಯಕ್ತಪಡಿಸಿದರು.

ಗೌರಿ ಸ್ಮಾರಕ ಟ್ರಸ್ಟ್‌ ನಗರದಲ್ಲಿ ಗುರುವಾರ ಆಯೋಜಿಸಿದ್ದ ‘ಗೌರಿ ಲಂಕೇಶ್ ನೆನಪು–2024’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸ್ವಾತಂತ್ರ್ಯ ಹೋರಾಟ ಮತ್ತು ಏಕೀಕರಣ ಚಳವಳಿಗಳ ಸಂದರ್ಭದಲ್ಲಿ ‘ಒಂದು’ ಎಂಬುದು ಏಕತೆಯನ್ನು ಪ್ರತಿನಿಧಿಸುತ್ತಿತ್ತು. ಆದರೆ ಈಗ ಅದು ಬಹುತ್ವ ಮತ್ತು ಒಕ್ಕೂಟ ವ್ಯವಸ್ಥೆಗೆ ಕಂಟಕವಾಗಿ ಅದನ್ನು ಬದಲಿಸಲಾಗಿದೆ. ಈ ಭಯೋತ್ಪಾದನೆಯನ್ನು ನಾವು ಮುಖಾಮುಖಿಯಾಗಬೇಕು’ ಎಂದರು.

‘ಎಂ.ಎಂ.ಕಲಬುರ್ಗಿ ಮತ್ತು ಗೌರಿ ಲಂಕೇಶ್ ಅವರು ಒಕ್ಕೂಟ ವ್ಯವಸ್ಥೆಯ ಪ್ರತಿಪಾದಕರಾಗಿದ್ದರು. ಕನ್ನಡತ್ವದ ಮೇಲೆ ಸಂಸ್ಕೃತ, ಹಿಂದಿ, ಶಿಕ್ಷಣ ವ್ಯವಸ್ಥೆ, ತೆರಿಗೆ, ಬಂಡವಾಳಶಾಹಿ ನೀತಿಗಳ ಹೇರಿಕೆಯು ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ. ಕಲಬುರ್ಗಿ ಮತ್ತು ಗೌರಿ ಅದರ ವಿರುದ್ಧ ದನಿ ಎತ್ತಿದ್ದರು. ಅವರಿಬ್ಬರ ಕೊಲೆಗಳು, ಒಕ್ಕೂಟ ವ್ಯವಸ್ಥೆಯ ಆಶೋತ್ತರಗಳ ಹತ್ಯೆಯೇ ಆಗಿದೆ’ ಎಂದರು.

‘ಭಾರತದ ಗಣರಾಜ್ಯದಲ್ಲಿನ ಬಿರುಕುಗಳು’ ಕುರಿತು ಮಾತನಾಡಿದ ಮುಂಬೈನ ಟಾಟಾ ಸಾಮಾಜಿಕ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಆರ್‌.ರಾಮಕುಮಾರ್‌, ‘ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಆರ್ಥಿಕ ಹಕ್ಕುಗಳನ್ನು ಹತ್ತಿಕ್ಕುವ ಎಲ್ಲ ಕೆಲಸಗಳನ್ನೂ ಎನ್‌ಡಿಎ ಸರ್ಕಾರ ಮಾಡುತ್ತಿದೆ. ತೆರಿಗೆ ಆದಾಯದಲ್ಲಿ ರಾಜ್ಯಗಳ ಪಾಲನ್ನು ಕಡಿಮೆ ಮಾಡುತ್ತಿದೆ. ತಮ್ಮ ಹಕ್ಕನ್ನು ಪ್ರತಿಪಾದಿಸುವ ರಾಜ್ಯಗಳನ್ನು ದೇಶವಿರೋಧಿಗಳಂತೆ ಬಿಂಬಿಸುತ್ತಿದೆ’ ಎಂದು ಆರೋಪಿಸಿದರು.

‘ಕೇಂದ್ರ–ಕರ್ನಾಟಕ–ಗಣತಂತ್ರದ ಕನಸು’ ಕುರಿತು ಮಾತನಾಡಿದ ಚಿಂತಕಿ ಪ್ರೊ.ಮೀನಾಕ್ಷಿ ಬಾಳಿ, ‘ಬಿಜೆಪಿ ಸರ್ಕಾರ ಒಕ್ಕೂಟ ವ್ಯವಸ್ಥೆಗೆ ಎಷ್ಟು ವಿರುದ್ಧವಾಗಿ ಇದೆಯೆಂದರೆ, ತೀವ್ರ ನೆರೆ ಬಂದಾಗ ಬಿಜೆಪಿ ಮುಖ್ಯಮಂತ್ರಿ ಯಡಿಯೂರಪ್ಪನವರು ನೆರವು ಕೋರಲು ದೆಹಲಿಗೆ ಹೋಗಿದ್ದರು. ಆದರೆ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರನ್ನು ಮಾತನಾಡಿಸಲೂ ಇಲ್ಲ. ಅವರು ಬರಿಗೈಯಲ್ಲಿ ವಾಪಸ್ಸು ಬಂದರು. ಹೀಗೆ ಬಿಜೆಪಿಯು ಶಾಸನ, ಆಡಳಿತ ಮತ್ತು ಆರ್ಥಿಕತೆ ಎಲ್ಲದರಲ್ಲೂ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT