ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

3,368 ಆ್ಯಂಬುಲೆನ್ಸ್‌ಗಳಿಗೆ ಜಿಪಿಎಸ್: ಹೈಕೋರ್ಟ್‌ಗೆ ಸರ್ಕಾರ ಮಾಹಿತಿ

Last Updated 2 ಡಿಸೆಂಬರ್ 2022, 17:36 IST
ಅಕ್ಷರ ಗಾತ್ರ

ಬೆಂಗಳೂರು: ‘ಆಂಬ್ಯುಲೆನ್ಸ್‌ಗಳ ತಡೆರಹಿತ ಸಂಚಾರಕ್ಕೆ ಅನುವು ಮಾಡಿಕೊಡಲು ಈವರೆಗೂ ಒಟ್ಟು 3,368 ಆ್ಯಂಬುಲೆನ್ಸ್‌ಗಳಿಗೆ ಜಿಪಿಎಸ್ ವ್ಯವಸ್ಥೆ ಅಳವಡಿಸಲಾಗಿದೆ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

‘ರಾಜ್ಯದ ಎಲ್ಲ ಆ್ಯಂಬುಲೆನ್ಸ್‌ಗಳಿಗೆ ಜಿಪಿಎಸ್ ಅಳವಡಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿ ‘ಭಾರತ್ ಪುನರುತ್ಥಾನ ಟ್ರಸ್ಟ್’ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ, ಸರ್ಕಾರಿ ವಕೀಲರಾದ ಪ್ರತಿಮಾ ಹೊನ್ನಾಪುರ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ 8 ರಂದು ಹೈಕೋರ್ಟ್ ನೀಡಿರುವ ಆದೇಶದ ಅನುಪಾಲನಾ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

ವಿವರ ಸಲ್ಲಿಕೆ: ‘ರಾಜ್ಯದಲ್ಲಿ ಖಾಸಗಿ ಹಾಗೂ ಸರ್ಕಾರಕ್ಕೆ ಸೇರಿದ 12,107 ಆ್ಯಂಬುಲೆನ್ಸ್‌ಗಳಿವೆ. ಸರ್ಕಾರ ಇವುಗಳ ತಪಾಸಣೆ ನಡೆಸಿದಾಗ 3,368ಕ್ಕೆ ಮಾತ್ರವೇ ಜಿಪಿಎಸ್ ಅಳವಡಿಸಿರುವುದು ಕಂಡುಬಂದಿದೆ. ಉಳಿದವುಗಳಿಗೂ ಜಿಪಿಎಸ್ ಅಳವಡಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು’ ಎಂದು ಪ್ರತಿಮಾ ಹೊನ್ನಾಪುರ ನ್ಯಾಯಪೀಠಕ್ಕೆ ವಿವರಿಸಿದರು.

‘ಸಂಚಾರ ಮಾರ್ಗದ ಕುರಿತು ಸಂಚಾರ ದಟ್ಟಣೆ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡುವಂತೆ ಎಲ್ಲಾ ಆ್ಯಂಬುಲೆನ್ಸ್ ಚಾಲಕರಿಗೆ ಮಾಹಿತಿ ನೀಡಲಾಗಿದೆ. ಅದಕ್ಕಾಗಿ ವಿಶೇಷ ಸಹಾಯವಾಣಿ ಸಂಖ್ಯೆಯನ್ನೂ ಪ್ರಕಟಿಸಲಾಗಿದೆ’ ಎಂದರು.

‘ಸಂಯೋಜಿತ ಆ್ಯಂಬುಲೆನ್ಸ್ ಸೇವೆಗೆ ಟೆಂಡರ್ ಕರೆಯಲಾಗಿತ್ತು. ಆದರೆ, ಈವರೆಗೂ ಬಿಡ್ ಸ್ವೀಕರಿಸಿಲ್ಲ. ಮುಂದಿನ 15 ದಿನಗಳಲ್ಲಿ ಹೊಸದಾಗಿ ಟೆಂಡರ್ ಅಧಿಸೂಚನೆ ಹೊರಡಿಸಲು ಸರ್ಕಾರ ಸೂಚಿಸಿದೆ’ ಎಂಬ ಮಾಹಿತಿ ನೀಡಿದರು.

ಇದನ್ನು ಪರಿಗಣಿಸಿದ ನ್ಯಾಯಪೀಠ, ‘15 ದಿನಗಳವರೆಗೆ ಕಾಯದೆ ಆದಷ್ಟು ಶೀಘ್ರವೇ ಅನುಮೋದನೆ ನೀಡಬೇಕು’ ಎಂದು ಸೂಚಿಸಿತು.

‘ಸಹಾಯವಾಣಿ ಸಂಖ್ಯೆಯನ್ನು ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೂ ನೀಡಬೇಕು. ಆಯಾ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಆ್ಯಂಬುಲೆನ್ಸ್ ಚಾಲಕರ ದತ್ತಾಂಶ ಪಡೆದು ಪೊಲೀಸರಿಗೆ ಮಾಹಿತಿ ಒದಗಿಸಬೇಕು. ಇದರಿಂದ ಆ್ಯಂಬುಲೆನ್ಸ್ ಸಂಚರಿಸುವ ಮಾರ್ಗಗಳಲ್ಲಿ ದಟ್ಟಣೆ ನಿವಾರಿಸಲು ಪೊಲೀಸರಿಗೆ ಸಹಾಯವಾಗುತ್ತದೆ ಹಾಗೂ ಹುಸಿ ಕರೆಗಳ ಪರಿಶೀಲನೆಗೆ ಸಹಾಯವಾಗುತ್ತದೆ ಎಂಬುದನ್ನು ಮನವರಿಕೆ ಮಾಡಿಸಬೇಕು’ ಎಂದು ತಿಳಿಸಿತು.

ಶ್ಲಾಘನೆ: ‘ಈ ಪ್ರಕರಣದಲ್ಲಿ ಸರ್ಕಾರ ಪೂರಕವಾಗಿ ಸ್ಪಂದಿಸುತ್ತಿದೆ. ಸರ್ಕಾರದ ಕೆಲಸ ತೃಪ್ತಿಕರವಾಗಿದೆ’ ಎಂದು ಶ್ಲಾಘಿಸಿದ ನ್ಯಾಯಪೀಠ, ‘ಎಲ್ಲದಕ್ಕೂ ಸರ್ಕಾರವನ್ನೇ ಹೊಣೆ ಮಾಡಲಾಗುವುದಿಲ್ಲ. ನಾಗರಿಕರೂ ಆ್ಯಂಬುಲೆನ್ಸ್‌ಗಳು ಬಂದಾಗ ಸುಗಮ ಸಂಚಾರಕ್ಕೆ ದಾರಿ ಮಾಡಿಕೊಡಬೇಕು’ ಎಂಬ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿತು. ವಿಚಾರಣೆಯನ್ನು 2023ರ ಜನವರಿ 11ಕ್ಕೆ ಮುಂದೂಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT