ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಮಾಜಿಕ ಕ್ರಾಂತಿಯ ಪಾಠ ಮಾಡಿದ ಸಿದ್ದರಾಮಯ್ಯ

Published 5 ಜುಲೈ 2024, 23:13 IST
Last Updated 5 ಜುಲೈ 2024, 23:13 IST
ಅಕ್ಷರ ಗಾತ್ರ

ಬೆಂಗಳೂರು: ‘ಅಕ್ಷರಗಳು ಎಡಬಿಡದೆ ಸೇರುವುದೇ ಸಂಧಿ...’, ‘ಮನುಷ್ಯರ ಮಧ್ಯದ ತಾರತಮ್ಯ, ಜಾತಿ ವ್ಯವಸ್ಥೆ ವಿರೋಧಿಸಿ ಬಸವಣ್ಣನವರು ಸಾಮಾಜಿಕ ಕ್ರಾಂತಿ ನಡೆಸಿದರು...’

– ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಕ್ಕಳಿಗೆ ಪ್ರಶ್ನೆ ಕೇಳಿ, ಉತ್ತವರನ್ನೂ ಅವರೇ ವಿವರಿಸಿದ್ದು ಹೀಗೆ.

ಚಾಮರಾಜಪೇಟೆಯ ಮೊರಾರ್ಜಿ ದೇಸಾಯಿ ವಸತಿಶಾಲೆಗೆ ಶುಕ್ರವಾರ ಮಧ್ಯಾಹ್ನ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದ ಅವರು ಮಕ್ಕಳಿಗೆ ವ್ಯಾಕರಣ ಪಾಠವನ್ನೂ ಮಾಡಿದರು.

ಸಂಧಿ ಎಂದರೇನು? ಸಂಧಿಗಳಲ್ಲಿ ಎಷ್ಟು ವಿಧ? ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ? ಅವುಗಳಲ್ಲಿ ಯೋಗವಾಹಗಳು ಎಷ್ಟು? ಸ್ವರ ಎಂದರೇನು? ವ್ಯಂಜನಗಳು ಎಂದರೇನು? ಎಷ್ಟಿವೆ? ವರ್ಗೀಯ, ಅವರ್ಗೀಯ ವ್ಯಂಜನಗಳು ಎಷ್ಟಿವೆ? ಅಲ್ಪಪ್ರಾಣ, ಮಹಾಪ್ರಾಣ ಎಂದರೇನು? ಅಲ್ಪ ಪ್ರಾಣಕ್ಕೆ ಉದಾಹರಣೆ ಹೇಳಿ ಎನ್ನುವ ಪ್ರಶ್ನೆಗಳನ್ನು ಮಕ್ಕಳಿಗೆ ಕೇಳಿದ ಸಿದ್ದರಾಮಯ್ಯ ಅವರು, ಮಕ್ಕಳು ಹೇಳಿದ ಉತ್ತರಗಳನ್ನು ತಿದ್ದಿದರು.

ಮೊರಾರ್ಜಿ ದೇಸಾಯಿ ಶಾಲೆಗಳನ್ನು ರಾಜ್ಯದಲ್ಲಿ ಯಾರು, ಯಾವಾಗ ಆರಂಭಿಸಿದರು ಎಂಬ ಮುಖ್ಯಮಂತ್ರಿಯವರ ಪ್ರಶ್ನೆಗೆ, ‘ನೀವೇ ಆರಂಭಿಸಿದ್ದು’ ಎಂದ ವಿದ್ಯಾರ್ಥಿ ಇಸವಿ ಹೇಳಲಿಲ್ಲ. ಬಳಿಕ, 94-95ರಲ್ಲಿ ಆರಂಭಿಸಿದ್ದಾಗಿ ಸಿದ್ದರಾಮಯ್ಯ ಹೇಳಿದರು. ಮಕ್ಕಳು ಚಪ್ಪಾಳೆ ತಟ್ಟಿದರು.

250 ವಿದ್ಯಾರ್ಥಿಗಳಿರುವ ಶಾಲೆಯಲ್ಲಿ ಮೊದಲಿಗೆ 10ನೇ ತರಗತಿ ಕೊಠಡಿಗೆ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಭೇಟಿ ನೀಡಿದರು.

‘ಪಠ್ಯ, ಸ್ನಾನದ ಕಿಟ್‌ಗಳ ಸಮರ್ಪಕ ವಿತರಣೆ ಆಗ್ತಿದೆ’ ಎಂದು ಹೇಳಿದ ವಿದ್ಯಾರ್ಥಿಗಳು, ‘ಬೆಳಿಗ್ಗೆ ದೋಸೆ, ಮಧ್ಯಾಹ್ನ ಊಟ ಚೆನ್ನಾಗಿರುತ್ತೆ. ಆಗಾಗ ಪಲಾವ್‌ ಕೊಡುತ್ತಾರೆ. ನಮ್ಮ ಆರೋಗ್ಯ ತಪಾಸಣೆಗೆ ನಿಯಮಿತವಾಗಿ ವೈದ್ಯರು ಬರುತ್ತಿದ್ದಾರೆ’ ಎಂದು ಮುಖ್ಯಮಂತ್ರಿಯವರ ಪ್ರಶ್ನೆಗೆ ಉತ್ತರಿಸಿದರು.

‘ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಎಲ್ಲರೂ ‘ಡಿಸ್ಟಿಂಕ್ಷನ್‌’ನಲ್ಲಿ ಉತ್ತೀರ್ಣರಾಗಿದ್ದು, ಒಬ್ಬ ವಿದ್ಯಾರ್ಥಿನಿ ಮಾತ್ರ ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ’ ಎಂದು ಶಿಕ್ಷಕರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT