ಮೈಸೂರು: ದಶದಿಕ್ಕುಗಳಿಂದಲೂ ಧಾವಿಸಿ ಬಂದ ಸಹಸ್ರಾರು ಮಹಿಳೆಯರ ಕಾತರ, ಸಂಭ್ರಮದ ನಡುವೆ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಬುಧವಾರ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ 'ಗೃಹಲಕ್ಷ್ಮಿ' ಯೋಜನೆಗೆ ಅದ್ಧೂರಿ ಚಾಲನೆ ದೊರಕಿತು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ವಿಶೇಷ ಅತಿಥಿ ರಾಹುಲ್ ಗಾಂಧಿ ದೀಪ ಬೆಳಗಿಸಿ ಉದ್ಘಾಟಿಸಿದ ಕೂಡಲೇ, ₹ 2 ಸಾವಿರ ಪಡೆಯಲಿರುವ ಯಜಮಾನಿ ಮಹಿಳೆಯರು, ಅವರ ಅಕ್ಕ-ತಂಗಿಯರು, ತಾಯಂದಿರು, ಮನೆಯ ಯಜಮಾನರು, ಸರ್ವ ಸದಸ್ಯರು ಹರ್ಷೋದ್ಗಾರ ಮಾಡಿದರು.
ಕಾರ್ಯಕ್ರಮದ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಿದ್ದ ರಾಜ್ಯದ 12,600 ಸ್ಥಳಗಳಲ್ಲೂ ಸಂಭ್ರಮ ಮೇರೆ ಮೀರಿತ್ತು. ಉದ್ಘಾಟನೆಯಾಗುತ್ತಿದಂತೆ ವೇದಿಕೆಗೆ ಬಂದ ಅಷ್ಟಲಕ್ಷ್ಮಿಯರು ಹಾಗೂ ₹2 ಸಾವಿರ ಮೌಲ್ಯದ ಚೆಕ್ ಪ್ರತಿಕೃತಿಯು ಸನ್ನಿವೇಶವನ್ನು ಕಳೆಗಟ್ಟಿಸಿತ್ತು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಸಂಪುಟದ ಸದಸ್ಯರು, ಶಾಸಕರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.
ನಂತರ ಮಾತನಾಡಿದ ರಾಹುಲ್ ಗಾಂಧಿ, 'ಚುನಾವಣೆಗೂ ಮುನ್ನ ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ಘೋಷಿಸಿದಾಗ, ಇವೆಲ್ಲ ಅಸಾಧ್ಯ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದ್ದರು. ಕಾಂಗ್ರೆಸ್ ಸುಳ್ಳು ಹೇಳ್ತಿದೆ ಎಂದಿದ್ದರು. ಆದರೆ ಈಗ ಸತ್ಯ ನಿಮ್ಮ ಕಣ್ಣ ಮುಂದೆಯೇ ಇದೆ. ಮಹಿಳೆಯರು ಉಚಿತವಾಗಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಉಚಿತವಾಗಿ ಪ್ರತಿ ಮನೆಗೂ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದೆ. ಪ್ರತಿ ಬಿಪಿಎಲ್ ಕುಟುಂಬಕ್ಕೆ 10 ಕೆಜಿ ಅಕ್ಕಿ ಉಚಿತವಾಗಿ ನೀಡಲಾಗುತ್ತಿದೆ. ಶೀಘ್ರದಲ್ಲೇ ನಿರುದ್ಯೋಗಿಗಳಿಗಾಗಿ ಯುವನಿಧಿ ಕಾರ್ಯಕ್ರಮವೂ ಅನುಷ್ಠಾನಕ್ಕೆ ಬರಲಿದೆ' ಎಂದರು.
'ಗೃಹಲಕ್ಷ್ಮಿ ಯೋಜನೆಯು ವಿಶ್ವದಲ್ಲೇ ಅತ್ಯಂತ ದೊಡ್ಡ ಯೋಜನೆ. ಇಂಥ ಯೋಜನೆ ಬೇರೆಲ್ಲೂ ಇಲ್ಲ. ನಾವು ಕೊಡುವ ₹ 2 ಸಾವಿರ ಸಣ್ಣದಲ್ಲ. ಅದು ಮಹಿಳೆಗೆ ಸಂರಕ್ಷಣೆ ನೀಡುತ್ತದೆ. ಅದನ್ನು ಉಳಿಸಿ ಮಕ್ಕಳ ಶಿಕ್ಷಣಕ್ಕೆ ಬಳಸಬಹುದು. ರಾಜ್ಯದ ಮಹಿಳೆಯರೇ ರಾಜ್ಯದ ಏಳಿಗೆಗೆ ಕಾರಣ. 75 ವರ್ಷಗಳ ಅಭಿವೃದ್ಧಿ ನಿಮ್ಮಿಂದಲೇ ಆಗಿದೆ' ಎಂದು ಬಣ್ಣಿಸಿದರು.
'ಮುಕ್ತವಾಗಿ ನಮ್ಮೊಂದಿಗೆ ಮಾತಾಡಿ, ನಾವು ಸುಳ್ಳು ಆಶ್ವಾಸನೆ ಕೊಡಲ್ಲ. ಆಗುವುದಿಲ್ಲ ಎಂದರೆ ಅದನ್ನೇ ಹೇಳುತ್ತೇವೆ. ಸಾಧ್ಯವಾಗುವುದಾರೆ ಮಾಡಿಯೇ ತೀರುತ್ತೇವೆ' ಎಂದರು.
'ಇದು ನಮ್ಮ ಯೋಜನೆಯಲ್ಲ; ನಿಮ್ಮ ಯೋಜನೆ. ಕಾಂಗ್ರೆಸ್ ಪಕ್ಷದ ಥಿಂಕ್ ಟ್ಯಾಂಕ್ ಮಾಡಿದ್ದಲ್ಲ. ನೀವು ನಮಗೆ ಯೋಜನೆಯ ದಾರಿ ತೋರಿಸಿದಿರಿ' ಎಂದು ಕೃತಜ್ಞತೆ ವ್ಯಕ್ತಪಡಿಸಿದರು.
'ಭಾರತ್ ಜೋಡೋ ಯಾತ್ರೆಯಲ್ಲಿ ಸಾವಿರಾರು ಮಹಿಳೆಯರನ್ನು ಭೇಟಿ ಮಾಡಿದ್ದೆ. ರಾಜ್ಯದಲ್ಲಿ 600 ಕಿಮೀ ನಡೆದಿದ್ದೆ. ಬೆಲೆ ಏರಿಕೆಯು ಮಹಿಳೆಯರ ಮೇಲೆ ಬರೆ ಹಾಕಿದೆ ಎಂದು ಆಗ ಅನ್ನಿಸಿತ್ತು. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆ ಏರಿಕೆ ಎಲ್ಲದ್ದರ ಏಟು ಮಹಿಳೆಯರ ಮೇಲೇ ಬೀಳುತ್ತದೆ.
ಆ ಬಗ್ಗೆ ಮಹಿಳೆಯರು ನನಗೆ ಹೇಳಿದ್ದರು. ನಡೆಯುತ್ತಾ ನಡೆಯುತ್ತಾ, ಮಹಿಳೆಯರೇ ಈ ರಾಜ್ಯದ ಅಡಿಪಾಯ. ಅವರಿಲ್ಲದೆ ಈ ರಾಜ್ಯ ನಿಲ್ಲದು ಎಂಬುದು ಅರಿವಿಗೆ ಬಂದಿತ್ತು.
ಮರದ ಬೇರು ಕಾಣದ ರೀತಿಯಲ್ಲಿ, ಮನೆಯಲ್ಲೆ ಉಳಿದ ಮಹಿಳೆಯರು, ಯಾವುದೇ ಊರಾಗಿರಲಿ, ಇಡೀ ರಾಜ್ಯದ ಭದ್ರ ಬುನಾದಿ ನೀವೇ' ಎಂದಾಗ ಮಹಿಳೆಯರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು.
'ರಾಜ್ಯ ಸರ್ಕಾರ 100 ದಿನಗಳನ್ನು ಪೂರೈಸಿರುವ ಈ ಹೊತ್ತಿನಲ್ಲಿ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿದೆ. ರಕ್ಷಾಬಂಧನದ ದಿನವಾದ ಇಂದು ನಾಡಿನ ಕೋಟ್ಯಂತರ ಅಕ್ಕ ತಂಗಿಯರಿಗೆ ಕೊಟ್ಟ ಮಾತನ್ನು ಈಡೇರಿಸಿದ್ದೇವೆ' ಎಂದರು.
'ಕೇಂದ್ರ ಸರ್ಕಾರವು ಕೋಟ್ಯಧಿಪತಿಗಳಿಗಾಗಿ ಕೆಲಸ ಮಾಡುತ್ತಿದೆ. ಇಬ್ಬರು ಮೂವರಿಗಷ್ಟೇ ಅಭಿವೃದ್ಧಿಯ ಹೊಣೆ ನೀಡಲಾಗಿದೆ. ಆದರೆ ಕರ್ನಾಟಕದ ಐದು ಭರವಸೆಗಳು ಆಡಳಿತದ ನೀಲಿ ನಕ್ಷೆಯಾಗಿದೆ. ಬಡವರಿಗಾಗಿ ಸರ್ಕಾರಗಳು ಕೆಲಸ ಮಾಡಬೇಕು. ಜಾತಿ, ಧರ್ಮ ಮೀರಿ ನೆರವಾಗಬೇಕು. ರಾಜ್ಯದ ಯೋಜನೆಗಳನ್ನು ಇಡೀ ದೇಶದಲ್ಲಿ ಮಾದರಿಯಾಗಿ ಜಾರಿಗೆ ತರಲಾಗುವುದು. ಇವು ದೇಶಕ್ಕೆ ಸರಿಯಾದ ದಾರಿ ತೋರಿವೆ' ಎಂದು ಹೇಳಿದರು.
ದೇಶ ಹಾಳು ಮಾಡುತ್ತಿದೆ ಬಿಜೆಪಿ: ಖರ್ಗೆ
'ಬಿಜೆಪಿ ದೇಶ ಹಾಳು ಮಾಡುತ್ತಿದೆ. ಕೇಂದ್ರದಲ್ಲಿರುವ ಪ್ಯಾಸಿಸ್ಟ್ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
'ಕಾಂಗ್ರೆಸ್ ದೇಶವನ್ನು ಒಗ್ಗೂಡಿಸುತ್ತಿದ್ದರೆ ಬಿಜೆಪಿಯು ಭಾರತವನ್ನು ವಿಭಜಿಸುತ್ತಿದೆ' ಎಂದು ವಾಗ್ದಾಳಿ ನಡೆಸಿದರು.
'ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನುಡಿದಂತೆ ನಡೆಯುತ್ತಿದೆ. ದೇಶದಲ್ಲಿ ಯಾವ ಸರ್ಕಾರವೂ ಇಂಹತ ಗ್ಯಾರಂಟಿಗಳನ್ನು ಕೊಟ್ಟಿಲ್ಲ. ದೇಶದ ಎಲ್ಲರೂ ಇತ್ತ ನೋಡುತ್ತಿದ್ದಾರೆ' ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, 'ಕಾಂಗ್ರೆಸ್ ಸರ್ಕಾರ ಮುಂದಿನ ಐದು ವರ್ಷಗಳಲ್ಲಿ ಎಲ್ಲ ಭರವಸೆಗಳನ್ನೂ ಈಡೇರಿಸುವ ವಿಶ್ವಾಸವಿದೆ. ಸರ್ಕಾರದ ಯಾವುದೇ ಕಾರ್ಯಕ್ರಮಕ್ಕೆ ತೊಂದರೆಯಾಗದಂತೆ ಗ್ಯಾರಂಟಿಗಳನ್ನು ಜಾರಿಗೊಳಿಸಲಾಗುತ್ತಿದೆ. ಗ್ಯಾರಂಟಿಗಳಿಂದ ರಾಜ್ಯವೇನೂ ದಿವಾಳಿಯಾಗಿಲ್ಲ' ಎಂದು ಪ್ರತಿಪಾದಿಸಿದರು.
ಕಾರ್ಯಕ್ರಮದ ಉದ್ಘಾಟನೆ ಬಳಿಕ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು, ದೇಶದ ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಿದರು.
ಸಚಿವರಾದ ಎನ್.ಎಸ್.ಬೋಸರಾಜು, ಎನ್.ಚಲುವರಾಯಸ್ವಾಮಿ, ಕೆ.ಎಚ್.ಮುನಿಯಪ್ಪ, ಕೃಷ್ಣ ಬೈರೇಗೌಡ, ಡಾ.ಎಚ್.ಸಿ.ಮಹದೇವಪ್ಪ, ಎನ್.ರಾಜಣ್ಣ, ಕೆ.ವೆಂಕಟೇಶ್, ಸತೀಶ್ ಜಾರಕಿಹೊಳಿ, ಡಾ.ಜಿ.ಪರಮೇಶ್ವರ,
ಶಾಸಕರಾದ ತನ್ವೀರ್ ಸೇಟ್, ಎನ್.ನರೇಂದ್ರಸ್ವಾಮಿ, ಡಾ.ತಿಮ್ಮಯ್ಯ, ಎ.ಎಚ್.ವಿಶ್ವನಾಥ್, ದರ್ಶನ್ ಪುಟ್ಟಣ್ಣಯ್ಯ, ಶರತ್ ಬಚ್ಚೇಗೌಡ, ದರ್ಶನ್ ಧ್ರುವನಾರಾಯಣ, ಎ.ಎಸ್.ಪೊನ್ನಣ್ಣ, ಡಿ.ರವಿಶಂಕರ್, ಕೆ.ಹರೀಶ್ ಗೌಡ, ಮುಖ್ಯಕಾರ್ಯದರ್ಶಿ ವಂದಿತಾ ಶರ್ಮ ಇದ್ದರು.
ರಸ್ತ ಬದಿ ಕುಳಿತರು; ಮಂಡ್ಯ, ಚಾಮರಾಜನಗರ, ಹಾಸನ, ಕೊಡಗಿನಿಂದ ಸರ್ಕಾರಿ ಬಸ್‌ಗಳಲ್ಲಿ ಕರೆತಂದಿದ್ದ ಮಹಿಳೆಯರಲ್ಲಿ ನೂರಾರು ಮಂದಿಗೆ ವೇದಿಕೆ ಮುಂಭಾಗ ಸ್ಥಳಾವಕಾಶ ಸಿಗದೇ, ಮೈದಾನದ ಹೊರ ಆವರಣದ ರಸ್ತೆ ಬದಿ ಮರಗಳಡಿ ಕುಳಿತುಕೊಂಡೇ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.