ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇವೇಗೌಡರ ರೋಡ್‌ ಶೋ ನಾಲ್ಕು ಕಿ.ಮೀ.ಗೆ ಇಳಿಕೆ

Last Updated 18 ಮಾರ್ಚ್ 2023, 19:40 IST
ಅಕ್ಷರ ಗಾತ್ರ

ಬೆಂಗಳೂರು: ಪಂಚರತ್ನ ರಥಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿರುವ ಮಾರ್ಚ್‌ 26ರಂದು ಎಚ್‌.ಡಿ. ದೇವೇಗೌಡರ ನೇತೃತ್ವದಲ್ಲಿ ಕುಂಬಳಗೋಡಿನಿಂದ ಮೈಸೂರಿನವರೆಗೆ ನಡೆಸಲು ಉದ್ದೇಶಿಸಿದ್ದ ರೋಡ್‌ ಶೋ ಕಾರ್ಯಕ್ರಮವನ್ನು ನಾಲ್ಕು ಕಿ.ಮೀ.ಗೆ ಸೀಮಿತಗೊಳಿಸಲು ತೀರ್ಮಾನಿಸಲಾಗಿದೆ.

ಸಮಾರೋಪ ಸಮಾರಂಭದ ಸಿದ್ಧತೆ ಕುರಿತು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಪಕ್ಷದ ಕಚೇರಿಯಲ್ಲಿ ಶನಿವಾರ ಸಭೆ ನಡೆಯಿತು. ದೇವೇಗೌಡರ ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ವಹಿಸುವಂತೆ ವೈದ್ಯರು ಸಲಹೆ ನೀಡಿರುವ ಕಾರಣದಿಂದ ರೋಡ್‌ ಶೋ ಕಡಿತಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕುಮಾರಸ್ವಾಮಿ, ‘ರೋಡ್‌ ಶೋ ನಡೆಸುವ ನಿರ್ಧಾರ ಕೈಗೊಂಡ ಸಂದರ್ಭದಲ್ಲಿ ಗೌಡರ ಆರೋಗ್ಯಕ್ಕೆ ಸಂಬಂಧಿಸಿದಂತೆ ಸ್ಪಷ್ಟವಾದ ಮಾಹಿತಿಗಳು ಇರಲಿಲ್ಲ. ಈಗ ಅವರ ಆರೋಗ್ಯದ ವಿಚಾರದಲ್ಲಿ ಅಪಾಯಕಾರಿಯಾಗುವಂತಹ ತೀರ್ಮಾನಗಳನ್ನು ಕೈಗೊಳ್ಳಬಾರದು ಎಂದು ವೈದ್ಯರು ಸೂಚಿಸಿದ್ದಾರೆ. ಈ ಕಾರಣದಿಂದ ತೀರ್ಮಾನ ಬದಲಿಸಲಾಗಿದೆ’ ಎಂದರು.

ಮಾರ್ಚ್‌ 26ರಂದು ಸಮಾರೋಪ ಸಮಾರಂಭಕ್ಕೆ ಸಿದ್ಧತೆ ನಡೆದಿದೆ. ಹತ್ತು ಲಕ್ಷ ಜನರು ಸಮಾವೇಶದಲ್ಲಿ ಭಾಗವಹಿಸುತ್ತಾರೆ. ಈ ಸಮಾವೇಶ ಜೆಡಿಎಸ್‌ಗೆ ಮತ್ತಷ್ಟು ಶಕ್ತಿ ತುಂಬಲಿದೆ ಎಂದು ಹೇಳಿದರು.

ಚಿತ್ರದುರ್ಗ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳ ಜೆಡಿಎಸ್‌ ಶಾಸಕರು ಹಾಗೂ ಜೆಡಿಎಸ್‌ ಜಿಲ್ಲಾ ಘಟಕಗಳ ಅಧ್ಯಕ್ಷರು ಸಭೆಯಲ್ಲಿದ್ದರು.

ದೇವೇಗೌಡರ ಭೇಟಿಯಾದ ಸ್ವಾಮೀಜಿ: ಮೀಸಲಾತಿ ಚರ್ಚೆ
ಬೆಂಗಳೂರು
: ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರು ಶನಿವಾರ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದರು.

ಈ ಸಂದರ್ಭದಲ್ಲಿ, ಪಂಚಮಸಾಲಿ ಸಮುದಾಯಕ್ಕೆ ‘2ಎ’ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ನಡೆಯುತ್ತಿರುವ ಹೋರಾಟದ ಬಗ್ಗೆ ದೇವೇಗೌಡರು ಸ್ವಾಮೀಜಿ ಅವರಿಂದ ಮಾಹಿತಿ ಪಡೆದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, ‘ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ದೇವೇಗೌಡರಲ್ಲಿ ಕೋರಿದ್ದೇವೆ. ಅನೇಕ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ವಿಚಾರದಲ್ಲಿ ದೇವೇಗೌಡರು ಹೋರಾಟ ಮಾಡಿದ್ದಾರೆ. ಹೀಗಾಗಿ, ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ವಿಷಯದಲ್ಲೂ ದನಿ ಎತ್ತಿ ಮುಖ್ಯಮಂತ್ರಿ ಅವರ ಮೇಲೆ ಒತ್ತಡ ಹಾಕುವಂತೆ ಕೋರಿದ್ದೇವೆ’ ಎಂದು ತಿಳಿಸಿದರು.

‘‍ಪಂಚಮಸಾಲಿ ಸಮಾಜದ ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯ ಬಗ್ಗೆ ದೇವೇಗೌಡರಿಗೆ ಮಾಹಿತಿ ಇದೆ. ಸಮಾಜದ ಜತೆ ಅವರು ಒಡನಾಟ ಹೊಂದಿದ್ದಾರೆ. ದೇವೇಗೌಡರು ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನಿಮ್ಮ ಹೋರಾಟ ನ್ಯಾಯಯುತವಾಗಿದ್ದು, ಈ ಬಗ್ಗೆ ಗಮನಹರಿಸುವುದಾಗಿ ಭರವಸೆ ನೀಡಿದ್ದಾರೆ’ ಎಂದು ವಿವರಿಸಿದರು.

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT