ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಬ್ಬರಿ ಕಿತ್ತಾಟ: ದಳ ಸದಸ್ಯರ ಮೇಲೆ ತೋಳೇರಿಸಿದ ಶಿವಲಿಂಗೇಗೌಡ

ರೇವಣ್ಣಗೆ ಏಕವಚನದಲ್ಲೇ ಬೈಗುಳ
Published 5 ಡಿಸೆಂಬರ್ 2023, 15:45 IST
Last Updated 5 ಡಿಸೆಂಬರ್ 2023, 15:45 IST
ಅಕ್ಷರ ಗಾತ್ರ

ವಿಧಾನಸಭೆ(ಬೆಳಗಾವಿ): ಕೊಬ್ಬರಿ ಬೆಲೆ ಕುಸಿತದ ವಿಷಯ ಪ್ರಸ್ತಾಪಿಸಲು ಅಡ್ಡಿಪಡಿಸಿದ ಎಚ್.ಡಿ. ರೇವಣ್ಣ ಅವರಿಗೆ ಏಕವಚನದಲ್ಲಿ ಬೈದ ಕಾಂಗ್ರೆಸ್‌ನ ಕೆ.ಎಂ. ಶಿವಲಿಂಗೇಗೌಡ, ಅದನ್ನು ಆಕ್ಷೇಪಿಸಿದ ಜೆಡಿಎಸ್‌ ಶಾಸಕರ ಮೇಲೆ ತೋಳೇರಿಸಿ ಹೋದ ಘಟನೆಗೆ ಸದನವು ಮಂಗಳವಾರ ಸಾಕ್ಷಿಯಾಯಿತು.

ಕೊಬ್ಬರಿ ಬೆಲೆ ಕುಸಿತದ ಈ ವಿಷಯ ಪ್ರಸ್ತಾಪಿಸಲು ಅನುಮತಿ ಕೋರಿ ಶಿವಲಿಂಗೇಗೌಡರು ಸಭಾಧ್ಯಕ್ಷರಿಗೆ ಸೋಮವಾರವೇ  ಸಲ್ಲಿಸಿದ್ದ ಕೋರಿಕೆ, ಮಂಗಳವಾರದ ಪಟ್ಟಿಯಲ್ಲಿತ್ತು. ಪ್ರಶ್ನೋತ್ತರ ಕಲಾಪ ಮುಗಿಯುವ ಕೆಲವು ನಿಮಿಷಗಳ ಮೊದಲು ಕೋರಿಕೆ ಸಲ್ಲಿಸಿದ್ದ ರೇವಣ್ಣ, ತಮಗೇ ಮೊದಲು ವಿಷಯ ಪ್ರಸ್ತಾಪಿಸಲು ಅವಕಾಶ ನೀಡುವಂತೆ ಪಟ್ಟು ಹಿಡಿದರು.

ಸ್ಪೀಕರ್‌ ಅವರು ಶಿವಲಿಂಗೇಗೌಡರ ಹೆಸರು ಕರೆದರು. ಅವರು ನಿಲ್ಲುವಷ್ಟರಲ್ಲೇ ಎದ್ದು ನಿಂತ ರೇವಣ್ಣ ಮಾತು ಆರಂಭಿಸಿದರು. ‘ನಿಯಮದ ಪ್ರಕಾರ ಶಿವಲಿಂಗೇಗೌಡರೇ ಮಾತನಾಡಬೇಕು’ ಎಂದು ಸಭಾಧ್ಯಕ್ಷರು ಸೂಚಿಸಿದರು. ಸಿಟ್ಟಿಗೆದ್ದ ರೇವಣ್ಣ ಜೆಡಿಎಸ್‌ ಸದಸ್ಯರೊಂದಿಗೆ ಸಭಾಧ್ಯಕ್ಷರ ಪೀಠದ ಎದುರು ಧರಣಿ ಆರಂಭಿಸಿದರು.

ರೇವಣ್ಣ ಅವರ ನಡೆಯನ್ನು ಕಂಡು ಕೆಂಡಾಮಂಡಲರಾದ ಶಿವಲಿಂಗೇಗೌಡ, ‘ನೀಚ ರಾಜಕಾರಣ ಮಾಡ್ತೀಯ. ಮಾನ ಮರ್ಯಾದೆ ಇದೆಯಾ ನಿಮಗೆ? ನಿಮ್ಮ ಪಕ್ಷ ಬಿಟ್ಟು ಇಲ್ಲಿ ಬಂದೆ ಎಂಬ ಕಾರಣಕ್ಕೆ ಇಷ್ಟು ನೀಚ ರಾಜಕಾರಣ ಮಾಡ್ತೀರಾ? ಹಾಸನ ಜಿಲ್ಲೆ, ಕೊಬ್ಬರಿ ಬೆಳೆಗಾರರನ್ನು ನಿಮಗೆ ಗುತ್ತಿಗೆಗೆ ಕೊಟ್ಟಿದ್ದಾರಾ’ ಎಂದು ಏಕವಚನದಲ್ಲೇ ಹರಿಹಾಯ್ದರು.

ಗದ್ದಲ ಜೋರಾಗುತ್ತಿದ್ದಂತೆ ಸಭಾಧ್ಯಕ್ಷರು ಕಲಾಪ ಮುಂದೂಡಿದರು. ಬಳಿಕ ಜೆಡಿಎಸ್‌ನ ಎ. ಮಂಜು ಮತ್ತು ಎಚ್‌.ಸಿ. ಬಾಲಕೃಷ್ಣ ಅವರು ಶಿವಲಿಂಗೇಗೌಡರ ಬಳಿ ವಾಗ್ವಾದ ಮುಂದುವರಿಸಿದ್ದರು. ಸಿಟ್ಟಿಗೆದ್ದ ಶಿವಲಿಂಗೇಗೌಡ ತೋಳೇರಿಸಿ ಮುನ್ನುಗ್ಗಿದರು. ಕಾಂಗ್ರೆಸ್‌ ಸದಸ್ಯರು ಎಲ್ಲರನ್ನೂ ಸಮಾಧಾನಪಡಿಸಿದರು.

ಬಳಿಕ, ಜೆಡಿಎಸ್ ಸದಸ್ಯರನ್ನು ತಮ್ಮ ಕೊಠಡಿಗೆ ಕರೆಯಿಸಿ ಮಾತನಾಡಿದ ಸಭಾಧ್ಯಕ್ಷ ಯು.ಟಿ. ಖಾದರ್‌, ಅವರಿಗೆ ಮೊದಲು ಮಾತನಾಡಲು ಅವಕಾಶ ಕಲ್ಪಿಸುವುದಾಗಿ ಹೇಳಿದರು. ಹೀಗಾಗಿ, ದಳದ ಸದಸ್ಯರು ಧರಣಿ ಕೈಬಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT