ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗೈಯಲ್ಲೇ ಪೊಲೀಸ್‌ ಸೇವೆಗಳು

ನೂತನ ಆ್ಯಪ್‌ಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಚಾಲನೆ
Last Updated 22 ಜೂನ್ 2018, 20:13 IST
ಅಕ್ಷರ ಗಾತ್ರ

ಬೆಂಗಳೂರು: ನಾಗರಿಕರಿಗೆ ತಮ್ಮ ಅಂಗೈಯಲ್ಲೇ ಇನ್ನು ಮುಂದೆ ಪೊಲೀಸ್ ಸೇವೆ ಸಿಗಲಿದೆ. ಪೊಲೀಸ್ ವ್ಯವಸ್ಥೆ ಜನಸ್ನೇಹಿಯಾಗಿರಬೇಕು ಎಂಬ ಉದ್ದೇಶದಿಂದ ‘ಕರ್ನಾಟಕ ರಾಜ್ಯ ಪೊಲೀಸ್’ ಆ್ಯಪ್‌ ಅನ್ನು ಇಲಾಖೆ ರೂಪಿಸಿದೆ.

ರಾಜ್ಯ ಪೊಲೀಸ್‌ ಮಹಾನಿರ್ದೇಶಕರ ಕಚೇರಿಯಲ್ಲಿ ಶುಕ್ರವಾರ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಈ ನೂತನ ಆ್ಯಪ್‌ ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಕುಮಾರಸ್ವಾಮಿ, ‘ಈ ಆ್ಯಪ್‌ ಮೂಲಕ ಜನಸಾಮಾನ್ಯರಿಗೆ ಪೊಲೀಸರು ಮತ್ತಷ್ಟು ಹತ್ತಿರವಾಗಲಿದ್ದಾರೆ. ಜನ ಹಾಗೂ ಪೊಲೀಸರು, ಈ ಆ್ಯಪ್‌ನಸದುಪಯೋಗಪಡಿಸಿಕೊಳ್ಳಬೇಕು’ ಎಂದು ಕೋರಿದರು.

‘ಹೊಸ ಸರ್ಕಾರದ ಮೇಲೆ ಜನರು ವಿಶ್ವಾಸ ಇಟ್ಟುಕೊಂಡಿದ್ದಾರೆ. ಕೆಳ ಹಂತದಲ್ಲಿ ಅಪರಾಧಗಳಿಗೆ ಕಡಿವಾಣ ಹಾಕಬೇಕಿದೆ. ಅದಕ್ಕೆ ಈ ಆ್ಯಪ್‌ ರೂಪಿಸಲಾಗಿದೆ. ಯಾವುದೇ ಸ್ಥಳದಿಂದ ಯಾವುದೇ ಸಮಯದಲ್ಲೂ ಪೊಲೀಸರಿಗೆ ಮಾಹಿತಿ ನೀಡುವ ಅವಕಾಶವೂ ಇದೆ’ ಎಂದು ಹೇಳಿದರು.

ಕೋಮು ಸೌಹಾರ್ದತೆ ಕದಡಿದರೆ ಕ್ರಮ: ‘ನಾನು ಮುಖ್ಯಮಂತ್ರಿ ಆಗಿರುವವರೆಗೂ ರಾಜ್ಯದಲ್ಲಿ ಕೋಮು ಗಲಭೆ ಆಗಬಾರದು. ಸಾಮರಸ್ಯ ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ’ ಎಂದು ಕುಮಾರಸ್ವಾಮಿ ಹೇಳಿದರು.

‘ಆ ಸಂಘಟನೆ, ಈ ಸಂಘಟನೆ ಎಂದು ಹೆಸರು ಹೇಳುವುದಿಲ್ಲ. ಯಾವುದೇ ಸಂಘಟನೆ ಹಾಗೂ ಅದರ ಸದಸ್ಯರು ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಬಾರದು. ಪ್ರಚೋದನಾ ಕೃತ್ಯಗಳು ಪುನರಾವರ್ತನೆಯಾದರೆ ಕಠಿಣ ಕ್ರಮ ಎದುರಿಸಬೇಕಾದಿತು’ ಎಂದು ಎಚ್ಚರಿಸಿದರು.

ಅಧಿಕಾರಿಗಳೇ ಹೊಣೆ: ಗೃಹ ಸಚಿವರೂ ಆದ ಉಪಮುಖ್ಯಮಂತ್ರಿ ಜಿ. ಪರಮೇಶ್ವರ, ‘ಕೋಮು ಗಲಭೆ ಹಾಗೂ ಯಾವುದೇ ಗಂಭೀರ ಅಪರಾಧಗಳು ನಡೆದರೆ, ಆಯಾ ಜಿಲ್ಲೆ ಹಾಗೂ ಕಮಿಷನರೇಟ್‌ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು’ ಎಂದು ಎಚ್ಚರಿಸಿದರು.

‘ಅಪರಾಧಗಳ ಸಂಖ್ಯೆವಾರು ದೇಶದಲ್ಲೇ ಕರ್ನಾಟಕ 10 ಸ್ಥಾನದಲ್ಲಿದೆ. ಎಚ್ಚರಿಕೆಯಿಂದ ಕೆಲಸ ಮಾಡಿ, ಅಪರಾಧ ಸಂಖ್ಯೆ ಇಳಿಸುವಂತೆ ಅಧಿಕಾರಿಗಳಿಗೆ ಹೇಳಿದ್ದೇವೆ. ರಾಜ್ಯದಲ್ಲಿ 14 ಸಾವಿರ ಕಾನ್‌ಸ್ಟೆಬಲ್ ಹುದ್ದೆ ಖಾಲಿ ಇದ್ದು, ಭರ್ತಿಗೆ ಕ್ರಮ ಕೈಗೊಳ್ಳಲಿದ್ದೇವೆ. ಪೊಲೀಸ್ ಗೃಹ ಯೋಜನೆಯಡಿ 11 ಸಾವಿರ ಮನೆಗಳ ನಿರ್ಮಾಣ 2020ರ ವೇಳೆಗೆ ಪೂರ್ಣಗೊಳ್ಳಲಿದೆ’ ಎಂದರು.

‘ರಾಜ್ಯದಲ್ಲಿ ಉಪ ಗಸ್ತು (ಸಬ್‌ ಬೀಟ್) ಜಾರಿಯಲ್ಲಿದ್ದು, ಅಪರಾಧಗಳು ಹತೋಟಿಗೆ ಬಂದಿವೆ. ಇದೇ ಮಾದರಿಯಲ್ಲೇ ದೇಶದ ಎಲ್ಲ ರಾಜ್ಯಗಳಲ್ಲಿ ಸಬ್ ಬೀಟ್‌ ವ್ಯವಸ್ಥೆ ಜಾರಿಗೆ ತರುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇದು ರಾಜ್ಯ ಸರ್ಕಾರದ ಹೆಮ್ಮೆ’ ಎಂದು ಹೇಳಿದರು.

ನೂತನ ಆ್ಯಪ್‌ನ ವಿಶೇಷತೆ

* ಗೂಗಲ್ ಪ್ಲೇ ಸ್ಟೋರ್‌ನಲ್ಲಿ ‘Karnataka State Po*ice (Officia*)’ ಆ್ಯಪ್ ಲಭ್ಯವಿದೆ.
* ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಈ ಆ್ಯಪ್ ಬಳಸಬಹುದು
* ಅಪರಾಧ ಕೃತ್ಯಗಳ ಬಗ್ಗೆ ಮಾಹಿತಿ ನೀಡಬಹುದು
* ತುರ್ತು ಸಂದರ್ಭಗಳಲ್ಲಿ ನಿಯಂತ್ರಣ ಕೊಠಡಿಗೆ ಕರೆ ಮಾಡಬಹುದು
* ಪೊಲೀಸ್‌ ಇಲಾಖೆಯ ಸಾಮಾಜಿಕ ಜಾಲತಾಣಗಳನ್ನು ವೀಕ್ಷಿಸಬಹುದು
* ನಂಬಿಕಸ್ಥರ ಮೊಬೈಲ್ ನಂಬರ್ ನಮೂದಿಸಬಹುದು. ಅಪಾಯದ ಸಂದರ್ಭಗಳಲ್ಲಿ ಅವರಿಗೆ ಸಂದೇಶಗಳು ಹೋಗಲಿವೆ

ವಿಜಯಪುರ ಪ್ರಕರಣ; ಸಿಎಂ ಗರಂ
ವಿಜಯಪುರದ ರೌಡಿಶೀಟರ್‌ ಗಂಗಾಧರ ಚಡಚಣನ ಕೊಲೆ ಪ್ರಕರಣ ಸಭೆಯಲ್ಲಿ ಪ್ರಸ್ತಾಪವಾಯಿತು. ಆಗ ಗರಂ ಆದ ಮುಖ್ಯಮಂತ್ರಿ, ‘ಸಮಾಜಘಾತುಕ ಶಕ್ತಿಗಳು, ಮಾಫಿಯಾಗಳು ಹಾಗೂ ರೌಡಿಗಳ ಜತೆ ಪೊಲೀಸರು ಶಾಮೀಲಾಗಬಾರದು. ಆ ರೀತಿ ಮಾಡಿದರೆ, ಕಠಿಣ ಕ್ರಮ ಎದುರಿಸಬೇಕಾಗುತ್ತದೆ’ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

‘ಭೀಮಾ ತೀರದ ಸಮಸ್ಯೆ 25 ವರ್ಷಗಳಿಂದ ಇದೆ. ಕೊಲೆ ಪ್ರಕರಣ ಕಳೆದ ಸರ್ಕಾರದ ಅವಧಿಯಲ್ಲಿ ನಡೆದಿತ್ತು. ನಮ್ಮ ಸರ್ಕಾರ ಬಂದ ನಂತರ, ಆ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದರು.

ಗೌರಿ ಹತ್ಯೆ: ಕಾನೂನು ಚೌಕಟ್ಟಿನಲ್ಲಿ ತನಿಖೆ
‘ಗೌರಿ ಹತ್ಯೆ ಪ್ರಕರಣದಡಿ ಬಂಧಿಸಲಾಗಿರುವ ಆರೋಪಿಗಳಿಗೆ ಎಸ್‌ಐಟಿಯವರು ಕಿರುಕುಳ ನೀಡುತ್ತಿದ್ದಾರೆ’ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ‘ಕಾನೂನಿನ ಚೌಕಟ್ಟಿನಲ್ಲೇ ಎಸ್‌ಐಟಿ ತನಿಖೆ ಮಾಡುತ್ತಿದೆ. ಯಾರಿಗೂ ಕಿರುಕುಳ ನೀಡಿಲ್ಲ’ ಎಂದರು.

‘ಇಬ್ಬರನ್ನು ಎಸ್‌ಐಟಿ ವಶಕ್ಕೆ ಪಡೆದಿತ್ತು. ಅವರು ಅಮಾಯಕರು ಎಂಬುದು ಗೊತ್ತಾಗುತ್ತಿದ್ದಂತೆ ಬಿಟ್ಟು ಕಳುಹಿಸಿದೆ.ಹತ್ಯೆ ಸಂಬಂಧ ಸಾಕಷ್ಟು ಮಾಹಿತಿಯನ್ನು ಎಸ್‌ಐಟಿ ಅಧಿಕಾರಿಗಳು ಕಲೆ ಹಾಕಿದ್ದಾರೆ. ತನಿಖೆ ಪ್ರಗತಿಯಲ್ಲಿದೆ. ಆ ತಂಡಕ್ಕೆ ನನ್ನ ಅಭಿನಂದನೆ. ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವವರೆಗೂ ಸಹಕಾರ ನೀಡಲಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT