ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಎಲ್ಲೆಡೆ ಆರೋಗ್ಯ ಮೇಳ: ‌ಸಚಿವ ದಿನೇಶ್ ಗುಂಡೂರಾವ್

Published 29 ಜನವರಿ 2024, 7:10 IST
Last Updated 29 ಜನವರಿ 2024, 7:10 IST
ಅಕ್ಷರ ಗಾತ್ರ

ಕೊಳ್ಳೇಗಾಲ: ‘ಆರೋಗ್ಯ ಸೌಲಭ್ಯಗಳು ಕಡಿಮೆ ಇರುವ ಪ್ರದೇಶದ ಜನರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಆರೋಗ್ಯ ಮೇಳವನ್ನು ಆಯೋಜಿಸಲಾಗುತ್ತಿದ್ದು, ರಾಜ್ಯದ ಎಲ್ಲ ಕಡೆಗಳಲ್ಲಿ ನಡೆಸಲಾಗುವುದು’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಕೊಳ್ಳೇಗಾಲದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ನನ್ನ ಕ್ಷೇತ್ರದಲ್ಲಿ ಒಂದು ಆರೋಗ್ಯ ಮೇಳ ಮಾಡಿದ್ದೆ. ಆ ಸಂದರ್ಭದಲ್ಲಿ ಬೇರೆ ಕಡೆಗಳಲ್ಲೂ ಈ ರೀತಿಯ ಮೇಳ ಯಾಕೆ ನಡೆಸಬಾರದು ಎಂದು ಯೋಚಿಸಿದ್ದೆ. ಗುಡ್ಡಗಾಡು ಇರುವ ಪ್ರದೇಶಗಳಲ್ಲಿ, ದೂರ ಇರುವ ತಾಲ್ಲೂಕುಗಳಲ್ಲಿ ನಡೆಸಬೇಕು ಎಂದು ತೀರ್ಮಾನಿಸಲಾಯಿತು. ರಾಜ್ಯದಲ್ಲೇ ನಡೆಯುತ್ತಿರುವ ಮೊದಲ ಮೇಳವನ್ನು ಕೊಳ್ಳೇಗಾಲದಲ್ಲಿ ಆಯೋಜಿಸಲಾಗಿದೆ’ ಎಂದು ತಿಳಿಸಿದ್ದಾರೆ.

‘ಆರೋಗ್ಯ ವ್ಯವಸ್ಥೆ ಜನರ ಹತ್ತಿರ ಹೋಗಬೇಕು ಎಂಬುದು ನಮ್ಮ ಉದ್ದೇಶ. ಜನರು ಸಾಮಾನ್ಯವಾಗಿ ಆರೋಗ್ಯ ಪರೀಕ್ಷೆ ಮಾಡಿಸಲು ಹಿಂದೇಟು ಹಾಕುತ್ತಾರೆ. ಮೇಳದಲ್ಲಿ ಎಲ್ಲ ರೋಗಗಳಿಗೂ ಚಿಕಿತ್ಸೆ ನೀಡಿ ಉಚಿತ ಔಷಧಿ ನೀಡಲಾಗುವುದು. ಅಗತ್ಯ ಬಿದ್ದರೆ ಹೆಚ್ಚಿನ ಚಿಕಿತ್ಸೆಗೆ ಮೈಸೂರು, ಬೆಂಗಳೂರಿಗೂ ಕಳುಹಿಸಲು ವ್ಯವಸ್ಥೆ ಮಾಡಲಾಗುವುದು’ ಎಂದರು.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಚಿವರು, ‘ಹಿಂದೆ ಯಾವ ಸರ್ಕಾರಗಳೂ ಈ ರೀತಿಯ ಮೇಳ ಆಯೋಜಿಸಿಲ್ಲ. ನಾವು 5 ರಿಂದ 6 ಸಾವಿರ ಜನರು ಬರಬಹುದು ಎಂದು ನಿರೀಕ್ಷಿಸಿದ್ದೆವು. ಆದರೆ ಈಗಾಗಲೇ 8000 ಜನರು ನೋಂದಣಿ ಮಾಡಿಕೊಂಡಿದ್ದಾರೆ. ಮುಗಿಯುವ ಹೊತ್ತಿಗೆ 10 ರಿಂದ 12 ಸಾವಿರ ಜನರು ಭಾಗವಹಿಸಬಹುದು’ ಎಂದರು.

‘ಜನರಿಗೆ ಆರೋಗ್ಯ ಸೌಲಭ್ಯ ಎಷ್ಟು ಮುಖ್ಯ ಎಂಬುದನ್ನು ಈ ಮೇಳ ತೋರಿಸಿದೆ. ಮುಂದಿನ ದಿನಗಳಲ್ಲಿ ಇದು ರಾಜ್ಯ ಮಟ್ಟದ ಯೋಜನೆಯಾಗಿ ರೂಪುಗೊಳ್ಳಲು ಈ ಮೇಳ ನಾಂದಿ ಹಾಡಲಿದೆ’ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT