ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯದ ಹಲವೆಡೆ ಮುಂದುವರಿದ ಧಾರಾಕಾರ ಮಳೆ

ನಾಯಕನಹಟ್ಟಿ ಪೊಲೀಸ್ ಠಾಣೆ ಜಲಾವೃತ, ಮಲೆನಾಡಿನಲ್ಲಿ ಧುಮ್ಮಿಕ್ಕುತ್ತಿವೆ ಜಲಾಧಾರೆಗಳು
Published 25 ಮೇ 2024, 23:30 IST
Last Updated 25 ಮೇ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಕರಾವಳಿ, ಮಲೆನಾಡು ಹಾಗೂ ಕಲ್ಯಾಣ ಕರ್ನಾಟದ ಹಲವು ಜಿಲ್ಲೆಗಳಲ್ಲಿ ಶುಕ್ರವಾರ ತಡರಾತ್ರಿ ಮತ್ತು ಶನಿವಾರ ಧಾರಾಕಾರ ಮಳೆಯಾಗಿದೆ. ಹಲವು ಕಡೆಗಳು ಮನೆ, ಗೋಡೆಗಳು ಕುಸಿದಿವೆ. ಮರಗಳು, ವಿದ್ಯುತ್‌ ಕಂಬಗಳು ಮುರಿದು ಬಿದ್ದಿವೆ. ಅಲ್ಲಲ್ಲಿ ಆಸ್ತಿಗೂ ಹಾನಿಯಾಗಿದೆ. ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಕೆಲವು ಕಡೆಗಳಲ್ಲಿ ತಗ್ಗು ಪ್ರದೇಶಗಳು ಜಲಾವೃತವಾಗಿವೆ.  

ಮೈಸೂರು ಭಾಗದ ಮೈಸೂರು, ಕೊಡಗು, ಹಾಸನ, ಚಾಮರಾಜನಗರ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಶುಕ್ರವಾರ ರಾತ್ರಿ ಧಾರಾಕಾರ ಮಳೆ ಸುರಿಯಿತು. ಮಧ್ಯ ಕರ್ನಾಟಕದ ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ವಿವಿಧೆಡೆ ಶನಿವಾರ ಬೆಳಗಿನ ಜಾವ ಉತ್ತಮ ಮಳೆ ಸುರಿದಿದೆ. ಶಿವಮೊಗ್ಗ ಜಿಲ್ಲೆಯ ಹಲವೆಡೆ ಸಾಧಾರಣ ಮಳೆಯಾಗಿದೆ.

ಮಂಗಳೂರು ವರದಿ: ಮಂಗಳೂರು ನಗರದಲ್ಲಿ ಶುಕ್ರವಾರ ರಾತ್ರಿ ಶುರುವಾದ ಧಾರಾಕಾರ ಮಳೆ ಶನಿವಾರ ಬೆಳಿಗ್ಗೆವರೆಗೂ ಮುಂದುವರಿದಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಭಾರಿ ಮಳೆಯಾಗಿದೆ. ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ ಜಲಾವೃತವಾಗಿದ್ದರಿಂದ ಪೂಜೆ ಹಾಗೂ ದೇವರ ಬಲಿ ಪ್ರದಕ್ಷಿಣೆಗೆ ಅಡಚಣೆ ಉಂಟಾಯಿತು.

ಶನಿವಾರ ಬೆಳಿಗ್ಗೆ 8.30ರವರೆಗೆ 24 ಗಂಟೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮೂಲ್ಕಿ ತಾಲ್ಲೂಕಿನ ಪಡುಪಣಂಬೂರಿನಲ್ಲಿ 19 ಸೆಂ.ಮೀ., ಕಿಲ್ಪಾಡಿಯಲ್ಲಿ 13, ಕೆಮ್ರಾಲ್ ನಲ್ಲಿ 9, ಮಂಗಳೂರು ತಾಲ್ಲೂಕಿನ ಚೇಳಾಯ್ರುವಿನಲ್ಲಿ 13, ಬಾಳದಲ್ಲಿ 13, ಶಿರ್ತಾಡಿಯಲ್ಲಿ 10, ಪಡುಮಾರ್ನಾಡುವಿನಲ್ಲಿ 10, ಬೆಳುವಾಯಿಯಲ್ಲಿ 10, ಬಂಟ್ವಾಳ ತಾಲ್ಲೂಕಿನ ಬಡಗ ಬೆಳ್ಳೂರಿನಲ್ಲಿ 9 ಹಾಗೂ ಬೆಳ್ತಂಗಡಿ ತಾಲ್ಲೂಕಿನ ಹೊಸಂಗಡಿಯಲ್ಲಿ 9 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ‌ಯ ಮೂಲಗಳು ತಿಳಿಸಿವೆ.

ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಉತ್ತಮ ಮಳೆ ಸುರಿಯುತ್ತಿರುವುದರಿಂದ ಕಾರ್ಕಳ ತಾಲ್ಲೂಕಿನಲ್ಲಿರುವ ಮುಂಡ್ಲಿ ಅಣೆಕಟ್ಟೆಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದಿದೆ. ಮುಂಡ್ಲಿ ಜಲಾಶಯದ 2 ಬಾಗಿಲುಗಳನ್ನು ತೆರೆದಿರುವುದರಿಂದ ಸ್ವರ್ಣ ನದಿಯಲ್ಲಿ ಒಳಹರಿವು ಹೆಚ್ಚಾಗಿದೆ. 

ಉಡುಪಿ ನಗರಕ್ಕೆ ನೀರು ಪೂರೈಸುವ ಬಜೆ ಡ್ಯಾಂನಲ್ಲಿ ಸಾಕಷ್ಟು ಪ್ರಮಾಣದ ನೀರು ಸಂಗ್ರಹವಾಗುತ್ತಿರುವುದರಿಂದ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ರೇಷನಿಂಗ್ ಪದ್ಧತಿಯಲ್ಲಿ ನೀರು ಪೂರೈಕೆ ರದ್ದುಪಡಿಸಲಾಗಿದೆ. ನಿರಂತರವಾಗಿ ನಗರಕ್ಕೆ ನೀರು ಪೂರೈಸಲಾಗುವುದು ಎಂದು ಪೌರಾಯುಕ್ತ ರಾಯಪ್ಪ ತಿಳಿಸಿದ್ದಾರೆ. ಬ್ರಹ್ಮಾವರದಲ್ಲಿ ಒಂದೇ ದಿನ 9 ಸೆಂ.ಮೀ ಮಳೆ ಸುರಿದಿದ್ದು, ಕೃಷಿ ಭೂಮಿಗಳಲ್ಲಿ ನೀರು ನಿಂತಿರುವ ದೃಶ್ಯ ಕಂಡುಬಂತು.

ಚಿಕ್ಕಮಗಳೂರು ಜಿಲ್ಲೆಯ ಹೊನ್ನಮ್ಮನಹಳ್ಳ, ಹೆಬ್ಬೆ ಜಲಪಾತ, ಕಲ್ಲತ್ತಗಿರಿ ಜಲಪಾತಗಳು ತುಂಬಿ ಹರಿಯುತ್ತಿವೆ. ಇಡೀ ಜಿಲ್ಲೆಯಲ್ಲಿ ತಂಪಾದ ವಾತಾವರಣ ಇದ್ದು, ಮಂಜಿನ ನಡುವೆ ಮುಳುಗಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಕಳಸ, ಕೊಪ್ಪ, ಎನ್.ಆರ್.ಪುರ, ಬಾಳೆಹೊನ್ನೂರು, ಮೂಡಿಗೆರೆ, ಆಲ್ದೂರು, ಕಡೂರು, ಬೀರೂರು, ತರೀಕೆರೆ, ಅಜ್ಜಂಪುರ ಸೇರಿ ಎಲ್ಲೆಡೆ ರಾತ್ರಿಯಿಡಿ ಬಿರುಗಾಳಿ ಸಹಿತ ಜೋರು ಮಳೆಯಾಗಿದೆ.

ಮುಳ್ಳಯ್ಯನಗಿರಿ ಸೇರಿ ಚಂದ್ರದ್ರೋಣ ಪರ್ವತ ಶ್ರೇಣಿ, ಕೆಮ್ಮಣ್ಣುಗುಂಡಿ, ಚಾರ್ಮಾಡಿ ಘಾಟಿ, ಎತ್ತಿನಭುಜ, ದೇವರಮನೆ ಪ್ರವಾಸಿ ತಾಣಗಳಲ್ಲಿ ಮೋಡದ ನಡುವೆ ಓಡಾಡಿದ ಅನುಭವ ಪ್ರವಾಸಿಗರಿಗೆ ಆಯಿತು.

ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ಜನ ತಂಪಾಗಿರುವ ಚಿಕ್ಕಮಗಳೂರಿನ ಪ್ರವಾಸಿ ತಾಣಗಳಿಗೆ ಲಗ್ಗೆ ಇಡುತ್ತಿದ್ದಾರೆ. ವಾರಾಂತ್ಯವೂ ಆಗಿರುವುದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು. ಮುಳ್ಳಯ್ಯನಗಿರಿಯಲ್ಲಿ ವಾಹನ ದಟ್ಟೆಣೆಯೂ ಉಂಟಾಗಿ ಪ್ರವಾಸಿಗರ ಪರದಾಡಬೇಕಾಯಿತು.

ದಾವಣಗೆರೆ ವರದಿ: ನಗರವೂ ಒಳಗೊಂಡಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಶನಿವಾರ ಬೆಳಗಿನಜಾವ 2 ಗಂಟೆಯಿಂದ 5ರವರೆಗೆ ಭಾರಿ ಗುಡುಗು, ಸಿಡಿಲು, ಬಿರುಗಾಳಿ ಸಮೇತ ಅಂದಾಜು ಮೂರು ಗಂಟೆ ಕಾಲ ಮಳೆ ಸುರಿಯಿತು. ಮೂರು ದಿನ ಬಿಡುವಿನ ನಂತರ ಮತ್ತೆ ಮಳೆ ಸುರಿದಿರುವುದು ಮುಂಗಾರು ಬಿತ್ತನೆಗೆ ಅನುಕೂಲ ಕಲ್ಪಿಸಿದೆ.

ಸತತ ಮಳೆಯಿಂದಾಗಿ ನಗರದ ತಗ್ಗು ಪ್ರದೇಶದಲ್ಲಿ ನೀರುನಿಂತ ಪರಿಣಾಮ ಬೆಳಿಗ್ಗೆ ಜನಸಂಚಾರಕ್ಕೆ ಅಡಚಣೆಯಾಯಿತು. ಕೆಲವು ಕೆರೆ– ಕಟ್ಟೆಗಳಿಗೆ ಅಲ್ಪ ಪ್ರಮಾಣದ ನೀರು ಹರಿದುಬಂದಿದೆ. ಹಳ್ಳ– ಕೊಳ್ಳಗಳು ತುಂಬಿ ಹರಿದಿವೆ.

ಜಿಲ್ಲೆಯ ಹೊನ್ನಾಳಿ, ನ್ಯಾಮತಿ, ಹರಿಹರ ತಾಲ್ಲೂಕುಗಳಲ್ಲಿ ಉತ್ತಮ ವರ್ಷಧಾರೆಯಾಗಿದೆ. ಕಡರನಾಯ್ಕನಹಳ್ಳಿ, ಮಲೇಬೆನ್ನೂರು, ಸಂತೇಬೆನ್ನೂರಿನಲ್ಲೂ ಗುಡುಗು ಸಹಿತ ಸುರಿದರೆ, ಚನ್ನಗಿರಿಯಲ್ಲಿ ಸಾಧಾರಣ ಮಳೆ ಸುರಿದಿದೆ. ಹೊನ್ನಾಳಿ ತಾಲ್ಲೂಕಿನ ಸಾಸ್ವೆಹಳ್ಳಿ ಹೋಬಳಿಯಲ್ಲಿ ಮಳೆಯಿಂದಾಗಿ ಬೆಳೆಹಾನಿ ಸಂಭವಿಸಿದೆ. ಲಿಂಗಾಪುರ ಗ್ರಾಮದ ರೈತರು ಬೆಳೆದ ಭತ್ತ ಸಂಪೂರ್ಣ ಜಲಾವೃತವಾಗಿ ನಷ್ಟಕ್ಕೀಡಾಗಿದೆ.

ಚಿತ್ರದುರ್ಗ ವರದಿ: ಜಿಲ್ಲೆಯಲ್ಲಿ ಶುಕ್ರವಾರ ತಡರಾತ್ರಿಯಿಂದ ಶನಿವಾರ ಬೆಳಗಿನ ಜಾವದವರೆಗೂ ಉತ್ತಮ ಮಳೆ ಸುರಿದಿದೆ. ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿಯ ಪೊಲೀಸ್ ಠಾಣೆಯ ಕಟ್ಟಡ ಮಳೆಯಿಂದ ಜಲಾವೃತವಾಗಿತ್ತು. ಗ್ರಾಮದಲ್ಲಿ ಮೂರು ಮನೆಗಳಿಗೆ ನೀರು ನುಗ್ಗಿದ್ದು, 34 ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ಶುಕ್ರವಾರ ತಡರಾತ್ರಿ ಆರಂಭವಾದ ಮಳೆ ಆಗಾಗ ಬಿಡುವು ನೀಡುತ್ತ ಗುಡುಗು, ಮಿಂಚು ಸಹಿತ ಬಿರುಸಾಗಿ ಸುರಿದಿದೆ. ಕೆರೆ, ಕಟ್ಟೆ, ಚೆಕ್‌ಡ್ಯಾಮ್‌ಗಳಿಗೆ ನೀರು ಹರಿದುಬಂದಿದೆ. ಚಳ್ಳಕೆರೆ ತಾಲ್ಲೂಕಿನ ಗುಡಿಹಳ್ಳಿ ಗ್ರಾಮದ ಕೆಲವು ಮನೆಗಳಿಗೆ ಹಳ್ಳದ ನೀರು ನುಗ್ಗಿತ್ತು.

ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿಯಲ್ಲಿ 6.8 ಸೆಂ.ಮೀ, ಹೊಳಲ್ಕೆರೆಯಲ್ಲಿ 6 ಸೆಂ.ಮೀ, ನಾಯಕನಹಟ್ಟಿಯಲ್ಲಿ 6.5 ಸೆಂ.ಮೀ, ಚಳ್ಳಕೆರೆಯಲ್ಲಿ 5 ಸೆಂ.ಮೀ, ಚಿತ್ರದುರ್ಗ, ಸಿರಿಗೆರೆ, ಮೊಳಕಾಲ್ಮುರು ತಾಲ್ಲೂಕಿನ ರಾಯಪುರ, ಬಿ.ಜಿ.ಕೆರೆ, ಹಿರಿಯೂರು ತಾಲ್ಲೂಕಿನ ಸೂಗೂರು, ಬಬ್ಬೂರಿನಲ್ಲಿ 4 ಸೆಂ.ಮೀ ಮಳೆಯಾಗಿದೆ.

ಹುಬ್ಬಳ್ಳಿ ವರದಿ: ಬಳ್ಳಾರಿ, ವಿಜಯನಗರ ಜಿಲ್ಲೆಯ ವಿವಿಧೆಡೆ ಶುಕ್ರವಾರ ಮಧ್ಯರಾತ್ರಿಯಿಂದ ಶನಿವಾರ ಬೆಳಗಿನ ಜಾವದವರೆಗೆ ಉತ್ತಮ ಮಳೆಯಾಗಿದೆ. ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗದಲ್ಲಿ 5 ಸೆಂ.ಮೀ ಮಳೆಯಾಗಿದೆ.

ಧಾರವಾಡ ನಗರ ಮತ್ತು ಸುತ್ತಲಿನ ‍ಪ್ರದೇಶದಲ್ಲಿ ಶನಿವಾರ ತುಂತುರು ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ದಾಂಡೇಲಿ, ಹೊನ್ನಾವರ, ಬೆಳಗಾವಿ, ಕೌಜಲಗಿ, ಸವದತ್ತಿಯಲ್ಲಿ ಸಾಧಾರಣ ಮಳೆಯಾಯಿತು.

ಹೊನ್ನಾಳಿ ತಾಲ್ಲೂಕಿನ ಸಾಸ್ವೆಹಳ್ಳಿ ಹೋಬಳಿಯಾದ್ಯಂತ ಶುಕ್ರವಾರ ರಾತ್ರಿ ಸುರಿದ ಮಳೆಗೆ ಲಿಂಗಾಪುರ ಗ್ರಾಮದ ಸಮೀಪ ಕಟಾವಿಗೆ ಬಂದ ಭತ್ತ ಹಾನಿಗೀಡಾಗಿದೆ
ಹೊನ್ನಾಳಿ ತಾಲ್ಲೂಕಿನ ಸಾಸ್ವೆಹಳ್ಳಿ ಹೋಬಳಿಯಾದ್ಯಂತ ಶುಕ್ರವಾರ ರಾತ್ರಿ ಸುರಿದ ಮಳೆಗೆ ಲಿಂಗಾಪುರ ಗ್ರಾಮದ ಸಮೀಪ ಕಟಾವಿಗೆ ಬಂದ ಭತ್ತ ಹಾನಿಗೀಡಾಗಿದೆ
ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಯಲ್ಲಿ ಮೋಡದ ನಡುವೆ ಪ್ರವಾಸಿಗರು ಸಂಭ್ರಮಿಸಿದರು
ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಯಲ್ಲಿ ಮೋಡದ ನಡುವೆ ಪ್ರವಾಸಿಗರು ಸಂಭ್ರಮಿಸಿದರು
ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕು ಅರಸೀಕೆರೆ ಹೋಬಳಿಯ ಬೇವಿನಹಳ್ಳಿ ಗ್ರಾಮದ ಅಡಿಕೆ ತೋಟವೊಂದರಲ್ಲಿ ಸಂಗ್ರಹವಾದ ಮಳೆ ನೀರು
ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕು ಅರಸೀಕೆರೆ ಹೋಬಳಿಯ ಬೇವಿನಹಳ್ಳಿ ಗ್ರಾಮದ ಅಡಿಕೆ ತೋಟವೊಂದರಲ್ಲಿ ಸಂಗ್ರಹವಾದ ಮಳೆ ನೀರು

ಕಾಲುವೆಯಲ್ಲಿ ಕೊಚ್ಚಿ ಹೋಗಿ ರಿಕ್ಷಾ ಚಾಲಕ ಸಾವು

ಮಂಗಳೂರು: ನಗರದಲ್ಲಿ ಶುಕ್ರವಾರ ರಾತ್ರಿ ಕೊಟ್ಟಾರಚೌಕಿ ಪ್ರದೇಶದಲ್ಲಿ ರಾಜಕಾಲುವೆಯಲ್ಲಿ ಕೊಚ್ಚಿಹೋಗಿ ರಿಕ್ಷಾ ಚಾಲಕ ಕೊಟ್ಟಾರ ನಿವಾಸಿ ದೀಪಕ್ ಆಚಾರ್ಯ (44) ಮೃತಪಟ್ಟಿದ್ದಾರೆ.  ಕೊಟ್ಟಾರ ಪ್ರದೇಶದಲ್ಲಿ ಮಳೆ ನೀರಿನಿಂದಾಗಿ ಕಾಲುವೆ ಉಕ್ಕಿ ಹರಿದಿತ್ತು. ನೀರು ರಸ್ತೆಯ ಮೇಲೂ ಹರಿಯುತ್ತಿದ್ದ ವೇಳೆ ದೀಪಕ್ ಅವರ ರಿಕ್ಷಾ ಕಾಲುವೆಗೆ ಉರುಳಿತ್ತು. ಅವರ ಮೃತ ದೇಹವು ಕಾಲುವೆಯಲ್ಲಿ ಪತ್ತೆಯಾಗಿದೆ. ಕಾಲುವೆಗೆ ಸರಿಯಾದ ತಡೆಗೋಡೆ ನಿರ್ಮಿಸದೇ ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ಪೊಲೀಸರು ಮಹಾನಗರ ಪಾಲಿಕೆಯ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಂಗಳೂರು  ತಗ್ಗು ಪ್ರದೇಶದ 20 ಕ್ಕೂ ಅಧಿಕ ಮನೆಗಳಿಗೆ ನೀರುನುಗ್ಗಿತ್ತು. ಸಾಗರ ಕೋರ್ಟ್ ಪ್ರದೇಶದಲ್ಲಿ ಜಲಾವೃತವಾಗಿದ್ದ ಮನೆಯೊಂದರಿಂದ ವೃದ್ದೆಯೊಬ್ಬರನ್ನು ಅಗ್ನಿ ಶಾಮಕ ಠಾಣೆಯವರು ರಕ್ಷಿಸಿದ್ದಾರೆ. ‌ಉಳ್ಳಾಲ ಸಮೀಪದ ದೇರಳಕಟ್ಟೆ ಯೆನೆಪೋಯ ಆಸ್ಪತ್ರೆ ಬಳಿ ಮರದ ಮಿಲ್‌ನ ಆವರಣ ಗೋಡೆ ಕುಸಿದು ಅಲ್ಲಿ ನಿಲ್ಲಿಸಿದ್ದ ಎರಡು ಕಾರುಗಳು ಜಖಂಗೊಂಡಿವೆ.

ಮೈಸೂರು ಭಾಗದಲ್ಲಿ ಮುಂದುವರಿದ ಮಳೆ

ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ಸೋಮವಾರಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿ 6 ಸೆಂ.ಮೀ ವಿರಾಜಪೇಟೆ ತಾಲ್ಲೂಕಿನಲ್ಲಿ 5 ಸೆಂ.ಮೀನಷ್ಟು ಮಳೆಯಾಗಿದೆ. ಮೈಸೂರುಮಂಡ್ಯ ಹಾಸನದ ಕೆಲವೆಳೆ ಸತತ ಮಳೆಯಿಂದ ಮನೆ ಗೋಡೆಗಳು ಕುಸಿದಿವೆ. ಮರಗಳು ವಿದ್ಯುತ್‌ ಕಂಬಗಳು ಮುರಿದು ಬಿದ್ದಿವೆ. ಕಿಕ್ಕೇರಿಯ ಹೆಗ್ಗಡಹಳ್ಳಿ ಗ್ರಾಮದ ರೇಖಾಚಂದ್ರು ಎಂಬವರ ಕೊಟ್ಟಿಗೆಯ ಚಾವಣಿಯ ಸಿಮೆಂಟು ಶೀಟ್‌ಗಳು ಹಾರಿ ಹೋಗಿವೆ. ಹಾಸನ ಜಿಲ್ಲೆಯ ಹಳೇಬೀಡು ತಾಲ್ಲೂಕಿನ ಸಿದ್ದಾಪುರ ಗ್ರಾಮದಲ್ಲಿ ಮರ ಬಿದ್ದ ಪರಿಣಾಮ ಎರಡು ಮನೆಗಳಿಗೆ ಹಾನಿಯಾಗಿದೆ. ಸಾವುಕಾರ್ ರಾಜಣ್ಣ ಅವರ ತೋಟದಲ್ಲಿ ಫಸಲು ಬಿಡುತ್ತಿದ್ದ 15 ಅಡಿಕೆ ಮರ ಪಟೇಲ್ ಸಿದ್ದಬಸವೇಗೌಡರ ತೋಟದ 11 ಮರ ನೆಲಕಚ್ಚಿವೆ. ಗ್ರಾಮದಲ್ಲಿ 50ಕ್ಕೂ ಹೆಚ್ಚು ಅಡಿಕೆ ಮರ ಬಿದ್ದಿವೆ. ಕಟ್ಟೆಸೋಮನಹಳ್ಳಿ ರಸ್ತೆಯ ಸುರೇಶ್ ಜಮೀನಿನಲ್ಲಿ 12 ಗುಂಟೆ ಶುಂಠಿ ಬೆಳೆಗೆ ಹಾನಿಯಾಗಿದೆ. ಹಳೇಬೀಡು–ಹಾಸನ ನಡುವಿನ ಹಗರೆ ರಸ್ತೆಯಲ್ಲಿ ಕಂಬಗಳು ಮುರಿದು ಬಿದ್ದು ಭಾರಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಸೆಸ್ಕ್ ಸಿಬ್ಬಂದಿ ತಕ್ಷಣ ವಿದ್ಯುತ್ ಸ್ಥಗಿತಗೊಳಿಸಿದ್ದರಿಂದ ಅನಾಹುತ ಸಂಭವಿಸಲಿಲ್ಲ.  ಹೊಯ್ಸಳೇಶ್ವರ ದೇವಾಲಯದ ಉದ್ಯಾನದ ಕಾಡು ಜಾತಿಯ ದೊಡ್ಡ ಮರ ಕಾಂಪೌಂಡ್ ಮೇಲೆ ಬಿದ್ದು ಹಾನಿಯಾಗಿದೆ. ಕಾಂಪೌಂಡ್ ಪಕ್ಕದ ಮೂರು ಗೂಡಂಗಡಿಗಳು ಜಖಂ ಆಗಿವೆ. ತುಮಕೂರು ವರದಿ: ಜಿಲ್ಲೆಯ ಕುಣಿಗಲ್ ತಾಲ್ಲೂಕು ಹಾಗೂ ತುಮಕೂರು ತಾಲ್ಲೂಕಿನ ಕೆಲವು ಭಾಗಗಳನ್ನು ಹೊರತುಪಡಿಸಿ ಉಳಿದೆಡೆಗಳಲ್ಲಿ ಉತ್ತಮ ಮಳೆಯಾಗಿದೆ. ತಿಪಟೂರು ತಾಲ್ಲೂಕಿನ ಹಾಲ್ಕುರಿಕೆಯಲ್ಲಿ 8 ಸೆಂ.ಮೀ ಮಳೆಯಾಗಿದೆ. ಪಾವಗಡ ತಾಲ್ಲೂಕಿನಾದ್ಯಂತ ಶುಕ್ರವಾರ ರಾತ್ರಿ ಬಿರುಗಾಳಿ ಸಹಿತ ಉತ್ತಮ ಮಳೆಯಾಗಿದೆ. ತಾಲ್ಲೂಕಿನ ವಿವಿಧೆಡೆ ಮರಗಳು ವಿದ್ಯುತ್ ಕಂಬಗಳು ಉರುಳಿವೆ.  ಗುಬ್ಬಿ ತಾಲ್ಲೂಕಿನಾದ್ಯಂತ ವಾರದಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಪಟ್ಟಣದಲ್ಲಿ ಹೆದ್ದಾರಿಗೆ ಹೊಂದಿಕೊಂಡಿರುವ ರಂಗಕರ್ಮಿ ಡಾ.ಗುಬ್ಬಿ ವೀರಣ್ಣ ಹಾಗೂ ಅವರ ಪತ್ನಿಯ ಸಮಾಧಿಗಳು ನೀರಿನಲ್ಲಿ ಮುಳುಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT