ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಮುಂದುವರಿಕೆ: ಇಳೆಯ ದಾಹ ತಗ್ಗಿಸಿದ ವ್ಯಾಪಕ ಮಳೆ

Published 21 ಮೇ 2024, 20:52 IST
Last Updated 21 ಮೇ 2024, 20:52 IST
ಅಕ್ಷರ ಗಾತ್ರ

ತುಮಕೂರು/ದಕ್ಷಿಣ ಕನ್ನಡ: ಹಲವು ಜಿಲ್ಲೆಗಳಲ್ಲಿ ಮಂಗಳವಾರವೂ ಮಳೆ ಮುಂದುವರಿದಿದ್ದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಕುಪ್ಪಸಮುದ್ರದ ಕೆರೆ, ಚೌಳಹಿರಿಯೂರು, ವಿಷ್ಣುಸಮುದ್ರ ಕೆರೆಗಳು ತುಂಬುವ ಹಂತದಲ್ಲಿವೆ.‌

ಅಜ್ಜಂಪುರ, ತರೀಕೆರೆ ತಾಲ್ಲೂಕಿ ನಲ್ಲೂ ಜೋರು ಮಳೆಯಾಗಿದೆ. ಹಳ್ಳ–ಕೊಳ್ಳಗಳು ತುಂಬಿ ಹೊಲ ಮತ್ತು ಅಡಿಕೆ ತೋಟಗಳಿಗೆ ನೀರು ತುಂಬಿಕೊಂಡಿದೆ. 

ಚಿಕ್ಕಮಗಳೂರು ನಗರ, ಆವತಿ, ಜಾಗರ, ಲಕ್ಯಾ, ಬೀರೂರು, ಸಖರಾಯ ಪಟ್ಟಣ, ಸಿಂಗಟಗೆರೆ, ಪಂಚನಹಳ್ಳಿ, ಯಗಟಿ, ಕೊಪ್ಪ, ಹರಿಹರಪುರ, ಬಾಳೆಹೊನ್ನೂರು, ಶೃಂಗೇರಿ, ಅಮೃತಾಪುರ, ಲಿಂಗದಹಳ್ಳಿ, ಚೌಳಹಿರಿಯೂರು, ಶಿವನಿ, ಹಿರೇ ನಲ್ಲೂರು ಸುತ್ತಮುತ್ತು ಜೋರು ಮಳೆ ಯಾಗಿದೆ. ವಿಪರೀತ ಬರಗಾಲ ಮತ್ತು ಬಿಸಿಲಿನಿಂದ ಕಾದಿದ್ದ ನೆಲ ತಂಪಾಗಿದೆ. 

ದಕ್ಷಿಣ ಕನ್ನಡದ ಬೆಳ್ತಂಗಡಿ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನದ ವೇಳೆ ಸುಮಾರು ಅರ್ಧ ಗಂಟೆ ಧಾರಾಕಾರ ಮಳೆ ಸುರಿಯಿತು.

ತುಮಕೂರು ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದ ತೋವಿನಕೆರೆ ಬಸ್ ನಿಲ್ದಾಣದ ಬಳಿ ಮಧುಗಿರಿ ರಸ್ತೆಯಲ್ಲಿರುವ ಹಾಲು ಉತ್ಪಾದಕರ ಸಂಘದ ಕಟ್ಟಡ, ಧಾನ್ಯ ಮಾರಾಟ ಮಳಿಗೆ ಹಾಗೂ ತಗ್ಗು ಪ್ರದೇಶದ ಮನೆಗಳಿಗೂ ನೀರು ನುಗ್ಗಿ ಸಾರ್ವಜನಿಕರು ಪರದಾಡಿದರು.

ಹೊಸಪೇಟೆ (ವಿಜಯನಗರ)/ಬಳ್ಳಾರಿ ವರದಿ: ವಿಜಯನಗರ ಜಿಲ್ಲೆಯ ಕೂಡ್ಲಿಗಿ ಮತ್ತು ಹಗರಿಬೊಮ್ಮನಹಳ್ಳಿ ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾಗಿದ್ದರಿಂದ ಗೋಕಟ್ಟೆ, ಕೃಷಿ ಹೊಂಡಗಳು ಮೈದುಂಬಿಕೊಳ್ಳುತ್ತಿವೆ. ಕೃಷಿ ಚಟುವಟಿಕೆಗಳು ಗರಿಗೆದರಿವೆ.

ಬಳ್ಳಾರಿ ಜಿಲ್ಲೆಯಲ್ಲಿ ಎರಡು ಮನೆಗಳಿಗೆ ಹಾನಿಯಾಗಿದೆ. ಮತ್ತೊಂದೆಡೆ, ಜಲಮೂಲಗಳಿಗೆ ನೀರು ಹರಿದು ಬರುತ್ತಿದೆ. ಸಂಡೂರಿನ ಜೀವನಾಡಿ ನಾರಿಹಳ್ಳ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ. 

ಮೈಸೂರು ವರದಿ: ಮಡಿಕೇರಿ ನಗರ ಮತ್ತು ನಾಪೋಕ್ಲು ವ್ಯಾಪ್ತಿ, ಸಿದ್ದಾಪುರದಲ್ಲಿ ಭಾರಿ ಮಳೆ ಸುರಿದಿದೆ. ಸುಂಟಿಕೊಪ್ಪ, ಸೋಮವಾರಪೇಟೆ, ಕುಶಾಲನಗರದಲ್ಲಿ ಸಾಧಾರಣ ಮಳೆಯಾಗಿದೆ.

ಚಾಮರಾಜನಗರ ತಾಲ್ಲೂಕಿನ ವಿ.ಸಿ.ಹೊಸೂರು, ವೆಂಕಟಯ್ಯನ
ಛತ್ರ, ಅಮಚವಾಡಿ, ಚನ್ನಪ್ಪನಪುರ ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆಯಾಗಿದ್ದು, ತೊರೆ, ಹೊಳೆಗಳು ತುಂಬಿ ಹರಿದಿವೆ. 

ಮೈಸೂರು ಜಿಲ್ಲಾ ಕೇಂದ್ರದಲ್ಲಿ ಸೋಮವಾರ ರಾತ್ರಿಯಿಡೀ ಮಳೆ ಸುರಿಯಿತು. ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ, ಹುಣಸೂರು ತಾಲ್ಲೂಕಿನ ಧರ್ಮಾಪುರ ಹಾಗೂ ಹನಗೋಡು, ಸಾಲಿಗ್ರಾಮ ಹಾಗು ನಂಜನಗೂಡು ತಾಲ್ಲೂಕು, ತಿ.ನರಸೀಪುರ ತಾಲ್ಲೂಕಿನ ತಲಕಾಡು ಪ್ರದೇಶದಲ್ಲಿ ಮಧ್ಯಾಹ್ನದ ಬಳಿಕ ಗಾಳಿ ಸಹಿತ ಜೋರು ಮಳೆ ಯಾಯಿತು. ಹಾಸನ ಜಿಲ್ಲೆಯ ಅರಕಲ ಗೂಡು, ಕೊಣನೂರಿನ ಸುತ್ತ ಸೋಮ ವಾರ ರಾತ್ರಿ ಧಾರಾಕಾರ ಮಳೆಯಾಗಿದೆ. ಹೊಳೆನರಸೀಪುರ, ಹಾಸನ, ಹಿರೀಸಾವೆ, ಚನ್ನರಾಯಪಟ್ಟಣ, ಬೇಲೂರು, ಹಳೇಬೀಡಿನಲ್ಲಿ ಮಂಗಳವಾರ ಸಂಜೆ ಸಾಧಾರಣ ಮಳೆ ಸುರಿದಿದೆ.

ದಾವಣಗೆರೆ ವರದಿ: ಸೋಮವಾರ ರಾತ್ರಿಯಿಂದ ಬೆಳಗಿನ ಜಾವದವರೆಗೂ ದಾವಣಗೆರೆ ನಗರ, ಜಿಲ್ಲೆಯ ಜಗಳೂರು, ಹೊನ್ನಾಳಿ, ನ್ಯಾಮತಿ, ಚನ್ನಗಿರಿ, ಸಂತೇಬೆನ್ನೂರು, ಹರಿಹರ, ಮಲೇಬೆನ್ನೂರು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. 

ಕೆರೆ- ಕಟ್ಟೆಗಳಿಗೆ ನೀರು ಹರಿದಿದ್ದು, ರೈತರಲ್ಲಿ ಹರ್ಷ ತಂದಿದೆ. ಅಡಿಕೆ ತೋಟ ಉಳಿಸಿಕೊಳ್ಳಲು ಪರದಾಡುತ್ತಿದ್ದ ರೈತರು ಈಗ ಸುರಿಯುತ್ತಿರುವ ಮಳೆಯಿಂದ ನಿಟ್ಟುಸಿರು ಬಿಟ್ಟಂತಾಗಿದೆ. ಇತರ ತೋಟಗಾರಿಕೆ ಬೆಳೆಗಳಿಗೆ ಮಳೆ ವರವಾಗಿ ಪರಿಣಮಿಸಿದೆ. ಜಗಳೂರು ತಾಲ್ಲೂಕಿನಲ್ಲಿ ಸೋಮವಾರ ರಾತ್ರಿ ವ್ಯಾಪಕವಾಗಿ ಮಳೆ ಸುರಿದಿದೆ. ಕೆರೆ–ಕಟ್ಟೆಗಳಿಗೆ ನೀರು ಹರಿದು ಬರುತ್ತಿದೆ. ಗಡಿಮಾಕುಂಟೆ ಕೆರೆಗೆ ನಾಲ್ಕು‌ ಅಡಿಗೂ ಹೆಚ್ಚು ನೀರು ಬಂದಿದ್ದು, ಹಲವು ಹಳ್ಳಗಳು ತುಂಬಿ ಹರಿಯುತ್ತಿವೆ. ಭರಮಸಮುದ್ರದ ಕೆರೆಗೂ ನೀರು ಬಂದಿದ್ದು, ಗೋಕಟ್ಟೆಗಳು, ಚೆಕ್ ಡ್ಯಾಂಗಳು ಭರ್ತಿಯಾಗಿವೆ. 

ಚಿತ್ರದುರ್ಗ ವರದಿ: ಸೋಮವಾರ ರಾತ್ರಿ ಹಾಗೂ ಮಂಗಳವಾರ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ಚಿತ್ರದುರ್ಗ ನಗರದಲ್ಲಿ ಸುರಿದ ಮಳೆಯ ರಭಸಕ್ಕೆ ತಿಮ್ಮಣ್ಣನಾಯಕನ ಕೆರೆಯ ಸಮೀಪದ ಟ್ರೀ ಪಾರ್ಕ್‌ ಅಸ್ತವ್ಯಸ್ತಗೊಂಡಿದೆ.

ಸತತ ಮಳೆಯಿಂದ ಜಲಮೂಲ ಗಳಿಗೆ ನೀರು ಹರಿದು ಬಂದಿದೆ. ಧರ್ಮಪುರ- ಅರಳೀಕೆರೆ ರಸ್ತೆ ಕುಸಿದಿದ್ದು, ಕಾರೊಂದು ಬೃಹತ್‌ ಗುಂಡಿಗೆ ಇಳಿದಿದೆ. ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT