ಹುಬ್ಬಳ್ಳಿ: ನೀರೋ ನೀರು... ಎಲ್ಲೆಡೆಯೂ ನೀರು. ಅಣೆಕಟ್ಟೆಯೊಳಗೂ, ಹೊರಗೂ, ನದಿ, ನಾಲೆ, ರಸ್ತೆ, ರೈಲು ಮಾರ್ಗ, ಗ್ರಾಮ, ಮನೆಯಂಗಳ, ಮನೆಗೂ ನೀರು. ಆದರೆ ಕುಡಿಯಲು ಹನಿ ನೀರಿಲ್ಲ. ಇಡೀ ಪ್ರದೇಶವೇ ನೀರ ನಡುವಿನ ಬಟ್ಟಲಿನಂತೆ ಆಗಿಬಿಟ್ಟಿದೆ.

ಬಾಗಲಕೋಟೆ, ಬೆಳಗಾವಿ, ಉತ್ತರ ಕನ್ನಡ, ಧಾರವಾಡ ಜಿಲ್ಲೆಗಳಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿದೆ. ಕೆಲವೆಡೆ ಬಿಡುಬೀಸಾದ ಮುಸಲಧಾರೆ, ಇನ್ನೂ ಕೆಲವೆಡೆ ನಿರಂತರ ಶೋಕ ಗೀತೆಯಂಥ ತುಂತುರು ಹನಿ. ಮಳೆಯ ಆರ್ಭಟಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಬ್ಬರು, ಬೆಳಗಾವಿ ಮತ್ತು ಹಾವೇರಿ ಜಿಲ್ಲೆಯಲ್ಲಿ ತಲಾ ಒಬ್ಬರು ಮೃತರಾಗಿದ್ದಾರೆ.

ವಿವಿಧ ನದಿಗಳ ತೀರದ ಹಳ್ಳಿಗಳಿಂದ ಎರಡೂ ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಸಾವಿರಾರು ಎಕರೆ ಕೃಷಿ ಭೂಮಿ ನೀರಿನಲ್ಲಿ ಮುಳುಗಿದೆ. ಬೆಳಗಾವಿ ಜಿಲ್ಲೆಯೊಂದರಲ್ಲೇ 140ಕ್ಕೂ ಹೆಚ್ಚು ಸೇತುವೆಗಳು ಜಲಾವೃತವಾಗಿವೆ.

ದಕ್ಷಿಣ ಮಹಾರಾಷ್ಟ್ರದಲ್ಲಿ ಮಳೆ ಮುಂದುವರಿದಿದ್ದು ಕೃಷ್ಣೆ ಉಕ್ಕಿಹರಿಯುತ್ತಿದೆ. ಇದೇ ವೇಳೆ ಸ್ಥಳೀಯವಾಗಿಯೂ ಮಳೆ ಹೆಚ್ಚಾಗಿದ್ದು, ಜನ ಜೀವನ ತತ್ತರಿಸಿದೆ. ಒಳಹರಿವು ಹೆಚ್ಚಾದ ಕಾರಣ ಆಲಮಟ್ಟಿ ಜಲಾಶಯದಿಂದ 4.3 ಲಕ್ಷ ಕ್ಯುಸೆಕ್ ಹೊರಬಿಡಲಾಗುತ್ತಿದೆ. 2005ರ ನಂತರ ಇದು ಗರಿಷ್ಠ ಹೊರಹರಿವು.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ಹಾಗೂ ಮುಧೋಳ ತಾಲ್ಲೂಕುಗಳು ನೆರೆಯಿಂದ ನಲುಗಿಹೋಗಿವೆ. ಒಂದೆಡೆ ಕೃಷ್ಣೆ, ಘಟಪ್ರಭಾ, ಮಲಪ್ರಭಾ ನದಿಗಳ ಭೋರ್ಗರೆತ. ಇನ್ನೊಂದೆಡೆ ಆಲಮಟ್ಟಿ, ನಾರಾಯಣಪುರ ಹಾಗೂ ಹಿಪ್ಪರಗಿ ಜಲಾಶಯಗಳ ಹಿನ್ನೀರು ದಿನೇ ದಿನೇ ವಿಸ್ತಾರಗೊಳ್ಳುತ್ತಿದೆ. ಕೂಡಲಸಂಗಮದ ಸಂಗಮೇಶ್ವರ ದೇವಸ್ಥಾನದೊಳಗೂ ನೀರು ನುಗ್ಗಿದೆ. ಹೀಗಾಗಿ ಜಿಲ್ಲೆಯ ಮೇಲ್ಮೈ ಪರಿಸರವೀಗ ನೀರು ತುಂಬಿಟ್ಟ ಬಟ್ಟಲಿನಂತೆ ಗೋಚರಿಸುತ್ತಿದೆ.

ಜಮಖಂಡಿ ತಾಲ್ಲೂಕಿನ ಕೃಷ್ಣಾ ತೀರದ ಗ್ರಾಮಗಳಲ್ಲಿ ಕುಡಿಯಲು ನೀರಿಲ್ಲ, ಜಾನುವಾರುಗಳಿಗೆ ಮೇವಿಲ್ಲ, ಗಂಜಿ ಕೇಂದ್ರಗಳೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಶೂರಪಾಲಿ ಗ್ರಾಮಸ್ಥರು ಈ ಸಂಬಂಧ ಆಕ್ಷೇಪ ಕೂಡ ಎತ್ತಿದ್ದಾರೆ.

ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದ್ದು, 1.65 ಲಕ್ಷ ಕ್ಯುಸೆಕ್ಸ್ ನೀರನ್ನು ಹೊರಬಿಡಲಾಗಿದೆ. ಇದು ಇದುವರೆಗಿನ ದಾಖಲೆಯ ಹೊರಹರಿವು ಎಂದು ಹೇಳಲಾಗುತ್ತಿದೆ.

ಉತ್ತರ ಕನ್ನಡ ಜಿಲ್ಲೆಯ ಕದ್ರಾ ಆಣೆಕಟ್ಟೆಯ ಹತ್ತೂ ಗೇಟುಗಳನ್ನು ತೆರೆಯಲಾಗಿದ್ದು, ಒಂದು ಲಕ್ಷ ಕ್ಯುಸೆಕ್ ನೀರು ಹೊರಬಿಡಲಾಗಿದೆ. ಕಾಳಿನದಿ ಪಾತ್ರದಲ್ಲಿರುವ ಹತ್ತೂ ಗ್ರಾಮಗಳು ಜಲಾವೃತವಾಗಿವೆ. ಕೈಗಾ ಉಷ್ಣು ವಿದ್ಯುತ್ ಸ್ಥಾವರದ ಮೈಲಾಪುರ ಟೌನ್‌ಶಿಪ್‌ಗೂ ನೀರು ನುಗ್ಗಿದೆ. ಧಾರವಾಡ ಜಿಲ್ಲೆಯ ಎಲ್ಲ ಕೆರೆ ಕೋಡಿ ಬಿದ್ದಿವೆ. ಹುಬ್ಬಳ್ಳಿಯಲ್ಲಿ ಇಡೀ ದಿನ ಸುರಿದ ಮಳೆಗೆ ಹಲವುಮನೆಗಳು ಜಖಂಗೊಂಡಿವೆ.

ಖಾನಾಪುರ ಪಟ್ಟಣದ ದುರ್ಗಾನಗರ ಬಡಾವಣೆಯಲ್ಲಿರುವ ಕ್ಷೇತ್ರದ ಶಾಸಕಿ ಡಾ.ಅಂಜಲಿ ನಿಂಬಾಳಕರ ಅವರ ಮನೆಯ ಸುತ್ತಲೂ ಕುಂಬಾರ ಹಳ್ಳದ ನೀರು ಹರಿದು ಕೆಳಮಹಡಿ ನೀರಿನಿಂದ ತುಂಬಿದೆ.

ರಸ್ತೆಗಳು ಜಲಾವೃತ, ಸಂಚಾರ ಬಂದ್

ಬೆಳಗಾವಿ ಬಳಿಯ ಕಾಕತಿ ಮೂಲಕ ಹಾದು ಹೋಗುವ ಪುಣೆ– ಬೆಂಗಳೂರು ರಾಷ್ಟ್ರೀಯ ಹೆದ್ದಾರಿ, ಮಹಾರಾಷ್ಟ್ರದ ಕೊಲ್ಹಾಪುರ, ಸಾವಂತವಾಡಿ ಹಾಗೂ ಗೋವಾದ ಪಣಜಿ, ಬಿಚೋಲಿಂ ಕಡೆ ಮಳೆಯಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಈ ಮಾರ್ಗದ ಬಸ್ ಸಂಚಾರ ರದ್ದುಪಡಿಸಲಾಗಿದೆ. ಶಿರಸಿ– ಯಲ್ಲಾಪುರ, ಶಿರಸಿ– ಕುಮಟಾ ಹಾಗೂ ಶಿರಸಿ– ಕಾರವಾರ ರಸ್ತೆಗಳು ಜಲಾವೃತವಾಗಿದ್ದು, ಸಂಚಾರ ಬಂದ್ ಆಗಿದೆ.

ರೈಲ್ವೆ ಬಂದ್: ಬೆಳಗಾವಿ– ಖಾನಾಪುರ ಮಾರ್ಗದಲ್ಲಿ ಭೂ ಕುಸಿತ ಉಂಟಾಗಿ, ರೈಲು ಮಾರ್ಗ ಹಾನಿಗೊಳಗಾಗಿದೆ. ಪಟ್ನಾ– ವಾಸ್ಕೊ, ಹುಬ್ಬಳ್ಳಿ– ವಾಸ್ಕೊ, ಹಜರತ್ ನಿಜಾಮುದ್ದೀನ್– ವಾಸ್ಕೊ ರೈಲುಗಳು ಬೆಳಗಾವಿ ನಿಲ್ದಾಣದಲ್ಲಿಯೇ ನಿಂತಿದ್ದು, ಅವುಗಳ ಮುಂದಿನ ಪ್ರಯಾಣವನ್ನು ರದ್ದುಪಡಿಸಲಾಗಿದೆ.

ಧಾರಾಕಾರ ಮಳೆಗೆ ನಲುಗಿದ ಮಲೆನಾಡು

ಶಿವಮೊಗ್ಗ: ಎರಡು ದಿನಗಳಿಂದ ಎಡೆಬಿಡದೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ನದಿ, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಜಲಾಶಯಗಳಿಗೆ ಹೆಚ್ಚಿನ ನೀರು ಹರಿದು ಬರುತ್ತಿದೆ.

ಲಿಂಗನಮಕ್ಕಿ ಜಲಾಶಯಕ್ಕೆ 48 ಗಂಟೆಗಳಲ್ಲಿ 7 ಅಡಿ ಹಾಗೂ ಭದ್ರಾ ಜಲಾಶಯಕ್ಕೆ 4 ಅಡಿ ನೀರು ಹರಿದು ಬಂದಿದೆ. ಲಿಂಗನಮಕ್ಕಿ ಜಲಾಶಯಕ್ಕೆ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ (1,01,176 ಕ್ಯುಸೆಕ್) ಹಾಗೂ ಭದ್ರಾ ಜಲಾಶಯಕ್ಕೆ 22,127 ಕ್ಯುಸೆಕ್ ನೀರು ಹರಿದುಬರುತ್ತಿದೆ. ತುಂಗಾ ಜಲಾಶಯಕ್ಕೆ 77,661 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 24 ಗೇಟ್‌ಗಳನ್ನೂ ತೆರೆದು 76,080 ಕ್ಯುಸೆಕ್ ನೀರು ಹೊರಗೆ ಬಿಡಲಾಗುತ್ತಿದೆ.

ತಗ್ಗು ಪ್ರದೇಶದ ಮನೆಗಳು, ರಸ್ತೆಗಳಿಗೆ ನೀರು ನುಗ್ಗಿದೆ. ಚರಂಡಿಗಳೆಲ್ಲಾ ತುಂಬಿ ಹರಿಯುತ್ತಿವೆ. ರಸ್ತೆಗಳೆಲ್ಲಾ ಜಲಾವೃತಗೊಂಡಿವೆ. ಜನ ಸಂಕಷ್ಟಕ್ಕೀಡಾಗಿದ್ದಾರೆ.

ತುಂಗಾ ನದಿಗೆ ಹೆಚ್ಚಿನ ನೀರು ಹರಿದು ಬರುತ್ತಿರುವ ಕಾರಣ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಶಿವಮೊಗ್ಗ ನಗರದಲ್ಲಿ ನದಿಯ ಒಂದು ಕಡೆ ಮಾತ್ರವೇ ತಡೆಗೋಡೆ ನಿರ್ಮಿಸಿರುವ ಕಾರಣ ವಿದ್ಯಾನಗರ, ಮಹಾದೇವಿ ಟಾಕೀಸ್ ಭಾಗದ ಪ್ರದೇಶಗಳು ಜಲಾವೃತಗೊಂಡಿವೆ. ಶಿವಮೊಗ್ಗ ತಾಲೂಕಿನ ಲಕ್ಷ್ಮೀಪುರ ಗ್ರಾಮದ ಕೋಳಿ ಫಾರಂಗೆ ನೀರು ನುಗ್ಗಿ ಸುಮಾರು 3 ಸಾವಿರ ಕೋಳಿಗಳು ಸಾವನ್ನಪ್ಪಿವೆ.

ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಗಳಿಗೆ ಮಂಗಳವಾರ ರಜೆ ಘೋಷಿಸಲಾಗಿತ್ತು. ಮಳೆ ಮುಂದುವರಿದಿರುವ ಕಾರಣ ಬುಧವಾರವೂ ರಜೆ ಘೋಷಿಸಲಾಗಿದೆ.

ಜಿಲ್ಲೆಯ ಹಲವೆಡೆ ಧರೆ ಕುಸಿದಿದೆ. ಮರ, ವಿದ್ಯುತ್ ಕಂಬಗಳು ಉರುಳಿಬಿದ್ದಿವೆ. ಗದ್ದೆಗಳು ಜಲಾವೃತಗೊಂಡಿವೆ. ಅಪಾರ ನಷ್ಟ ಉಂಟಾಗಿದೆ. ಸೋಮವಾರ ರಾತ್ರಿ ಒಬ್ಬರು ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. ಜಿಲ್ಲಾಡಳಿತ ಸನ್ನದ್ಧ ಸ್ಥಿತಿಯಲ್ಲಿದೆ. ಈಗಾಗಲೇ ಅಧಿಕಾರಿಗಳಿಗೆ ಕಟ್ಟೆಚ್ಚರದಿಂದ ಇರುವಂತೆ ಸೂಚಿಸಲಾಗಿದೆ.

ಚಿತ್ರದುರ್ಗ ವರದಿ: ಜಿಲ್ಲೆಯಲ್ಲಿ ಮಂಗಳವಾರ ಇಡೀ ದಿನ ತುಂತುರು ಹಾಗೂ ಸೋನೆ ಮಳೆ ಸುರಿಯಿತು.

ಹೊಸದುರ್ಗ, ಶ್ರೀರಾಂಪುರ, ಚಿಕ್ಕಜಾಜೂರು, ಹೊಳಲ್ಕೆರೆ, ಸಿರಿಗೆರೆ ಹಾಗೂ ಭರಮಸಾಗರ ಸುತ್ತ ಹದ ಮಳೆಯಾಗಿದೆ. ಆಗಾಗ ಬಿರುಸಿನಿಂದ ಸುರಿದ ಮಳೆಗೆ ಕಾಲುವೆಗಳಲ್ಲಿ ನೀರು ಹರಿಯಿತು. ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು ಹಾಗೂ ಮೊಳಕಾಲ್ಮೂರು ತಾಲ್ಲೂಕುಗಳಲ್ಲಿ ಸೋನೆ ಮಳೆ ಸುರಿಯಿತು.

ದಾವಣಗೆರೆ ವರದಿ:

ದಾವಣಗೆರೆ, ಹರಪನಹಳ್ಳಿ, ಮಲೇಬೆನ್ನೂರು, ಹೊನ್ನಾಳಿ, ಚನ್ನಗಿರಿ, ಸಾಸ್ವೆಹಳ್ಳಿಯಲ್ಲಿ ಉತ್ತಮ ಮಳೆಯಾಗಿದೆ.

ಸೋಮವಾರ 8.50 ಮೀಟರ್‌ನಷ್ಟಿದ್ದ ತುಂಗಭದ್ರಾ ನದಿ ನೀರಿನ ಮಟ್ಟ, ಮಂಗಳವಾರ ಮಧ್ಯಾಹ್ನದ ಹೊತ್ತಿಗೆ 9.50 ಮೀಟರ್‌ನಷ್ಟು ಏರಿಕೆ ಕಂಡುಬಂದಿದೆ.

ತುಂಗಭದ್ರಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಮಲೇಬೆನ್ನೂರಿನಲ್ಲಿ ಮಂಗಳವಾರ ಮೊದಲ ಬಾರಿಗೆ ಹೋಬಳಿ ವ್ಯಾಪ್ತಿಯ ನದಿ ಪಾತ್ರದ ಗ್ರಾಮಗಳಲ್ಲಿ ನೆರೆ ಪ್ರವಾಹ ಕಾಣಿಸಿಕೊಂಡಿದೆ.

ನದಿ ಪಾತ್ರದ ಅಕ್ಕಪಕ್ಕದ ನೂರಾರು ಎಕರೆ ಹೂವು, ಸೊಪ್ಪಿನ ತೋಟ ಹಾಗೂ ಕಳೆದ ವಾರ ನಾಟಿ ಮಾಡಿದ್ದ ಭತ್ತದ ಗದ್ದೆ ಪ್ರವಾಹದ ನೀರಿನಲ್ಲಿ ಸಂಪೂರ್ಣ ಕೊಚ್ಚಿಹೋಗಿದೆ.

ಜಿಲ್ಲೆಯ ಜೀವನಾಡಿ ಭದ್ರಾ ಜಲಾಶಯ 150 ಅಡಿಯ ಸನಿಹಕ್ಕೆ ಬಂದಿದೆ.

ಸಂತೇಬೆನ್ನೂರಿನ ಉಪ್ಪಾರ ಬೀದಿಯ ಹನುಮಂತಪ್ಪ ಅವರ ಮನೆಯ ಒಂದು ಭಾಗದ ಸಂಪೂರ್ಣ ಗೋಡೆ ನೆಲ ಕಚ್ಚಿದೆ. ಯಾವುದೇ ಅಪಾಯ ಸಂಭವಿಸಿಲ್ಲ. ₹1 ಲಕ್ಷ ಹಾನಿ ಸಂಭವಿಸಿದೆ. ಚನ್ನಗಿರಿ, ನ್ಯಾಮತಿಯಲ್ಲೂ ಮನೆ ಕುಸಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.