ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾರತಮ್ಯ ನಿವಾರಣೆಗೆ ಉನ್ನತಾಧಿಕಾರ ಸಮಿತಿ: ಸಿಎಂ ಸಿದ್ದರಾಮಯ್ಯ

₹35,433 ಕೋಟಿ ಖರ್ಚು; ಪ್ರಗತಿ ಕಾಣದ ಹಿಂದುಳಿದ ತಾಲ್ಲೂಕುಗಳು– ಮುಖ್ಯಮಂತ್ರಿ ಬೇಸರ
Published 15 ಡಿಸೆಂಬರ್ 2023, 15:41 IST
Last Updated 15 ಡಿಸೆಂಬರ್ 2023, 15:41 IST
ಅಕ್ಷರ ಗಾತ್ರ

ವಿಧಾನಸಭೆ/ವಿಧಾನಪರಿಷತ್: ನಂಜುಂಡಪ್ಪ ವರದಿಯ ಅನುಷ್ಠಾನದ ಬಳಿಕವೂ ತಾಲ್ಲೂಕುಗಳು ಹಿಂದುಳಿದಿರುವಿಕೆಗೆ ಕಾರಣ ಹುಡುಕಿ, ಅಧ್ಯಯನ ವರದಿ ಪಡೆಯಲು ಅರ್ಥಶಾಸ್ತ್ರಜ್ಞರೊಬ್ಬರ ಅಧ್ಯಕ್ಷತೆಯಲ್ಲಿ ಉನ್ನತಾಧಿಕಾರ ಸಮಿತಿ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು. 

ಉತ್ತರ ಕರ್ನಾಟಕದ ಮೇಲಿನ ಚರ್ಚೆಗೆ ಶುಕ್ರವಾರ ಉಭಯ ಸದನಗಳಲ್ಲಿ ಸುದೀರ್ಘ ಉತ್ತರ ನೀಡಿದ ಅವರು, ಆರು ತಿಂಗಳ ಕಾಲಮಿತಿಯಲ್ಲಿ ವರದಿ ಪಡೆದು ಜಿಲ್ಲೆ– ಜಿಲ್ಲೆಗಳ ಮತ್ತು ತಾಲ್ಲೂಕು– ತಾಲ್ಲೂಕುಗಳ ನಡುವೆ ಇರುವ ತಾರತಮ್ಯ ನಿವಾರಣೆಗೆ ದೃಢ ಹೆಜ್ಜೆ ಇಡಲಾಗುವುದು ಎಂದು ಹೇಳಿದರು. 

ಎಸ್‌.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ಪ್ರಾದೇಶಿಕ ತಾರತಮ್ಯ ನಿವಾರಣೆಗೆ ಡಾ.ಡಿ.ಎಂ.ನಂಜುಡಪ್ಪ ಅವರ ನೇತೃತ್ವದ ಸಮಿತಿ ರಚಿಸಲಾಗಿತ್ತು. ನಂಜುಂಡಪ್ಪ ವರದಿ ಸಲ್ಲಿಕೆಯಾಗಿ 21 ವರ್ಷಗಳಾದವು. ಈ ವರದಿಯನ್ನು ಆಧರಿಸಿ ಹಿಂದುಳಿದ 114 ತಾಲ್ಲೂಕುಗಳ ತಾರತಮ್ಯ ನಿವಾರಣೆ ಮತ್ತು ಅಭಿವೃದ್ಧಿಗಾಗಿ ಈವರೆಗೆ ₹46,453 ಕೋಟಿ ಹಂಚಿಕೆ ಮಾಡಲಾಗಿತ್ತು. ಇದರಲ್ಲಿ ₹35,433 ಕೋಟಿಗಳು ಖರ್ಚಾಗಿದೆ. ಆದರೆ ಈ ತಾಲ್ಲೂಕುಗಳಲ್ಲಿ ತಾರತಮ್ಯ ನಿವಾರಣೆ ಆಗಿಲ್ಲ. ಬದಲಿಗೆ ಹಿಂದುಳಿದ ತಾಲ್ಲೂಕುಗಳ ಸಂಖ್ಯೆ ಹೆಚ್ಚಾಗಿದೆ. ವರದಿ ನೀಡಿದ ಸಂದರ್ಭ 175 ತಾಲ್ಲೂಕುಗಳಿದ್ದವು. ಈಗ 236 ತಾಲ್ಲೂಕುಗಳಾಗಿವೆ. ಇಂದಿನ ಕಾಲಘಟ್ಟಕ್ಕೆ ಅನುಗುಣವಾಗಿ ತಾರತಮ್ಯ ನಿವಾರಣೆಗೆ ಉನ್ನತಾಧಿಕಾರ ಸಮಿತಿ ರಚಿಸಲಾಗುವುದು ಎಂದು ವಿವರಿಸಿದರು.

ಇಷ್ಟು ದೊಡ್ಡ ಪ್ರಮಾಣದ ಹಣ ಖರ್ಚು ಮಾಡಿದರೂ ಯಾದಗಿರಿ 30, ಕಲಬುರ್ಗಿ 29, ರಾಯಚೂರು28, ಹಾವೇರಿ 27, ದಾವಣಗೆರೆ 26, ಕೊಪ್ಪಳ 25, ಚಿತ್ರದುರ್ಗ 24, ವಿಜಯಪುರ 23, ಬೀದರ್‌ 22, ಚಾಮರಾಜನಗರ 21 ನೇ ಸ್ಥಾನಗಳಲ್ಲಿವೆ. ಇವುಗಳಲ್ಲಿ ಹಳೇ ಮೈಸೂರು ಭಾಗದ ಜಿಲ್ಲೆಗಳೂ ಇವೆ. ರಾಜ್ಯದ ಸರಾಸರಿ ತಲಾ ಆದಾಯ ₹2.66 ಲಕ್ಷ ಇದ್ದರೆ, ಹಿಂದುಳಿದ ಜಿಲ್ಲೆಗಳಲ್ಲಿ ₹1.5 ಲಕ್ಷ ಇದೆ ಎಂದರು.

‘ಈ ತಾರತಮ್ಯ ನಿವಾರಣೆಗೆ ಮತ್ತು ಸಮಗ್ರ ಕರ್ನಾಟಕದ ಹಾಗೂ ಎಲ್ಲ ಕನ್ನಡಿಗರ ಅಭಿವೃದ್ಧಿ ಆಗಬೇಕು. ಇದರಿಂದ ಇಡೀ ರಾಜ್ಯದ ಜಿಡಿಪಿ ಹೆಚ್ಚಾಗಲು ಸಾಧ್ಯ. ಪ್ರದೇಶ, ಭಾಷೆ, ಜಾತಿ, ಧರ್ಮ, ಸಂಸ್ಕೃತಿ ತಾರತಮ್ಯ ಮಾಡದೇ ಎಲ್ಲರ ಬೆಳವಣಿಗೆಯೇ ನಮ್ಮ ಸರ್ಕಾರದ ಉದ್ದೇಶ’ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT