ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿ ವಿವರ ಘೋಷಿಸದಿದ್ದರೆ ಅನರ್ಹತೆಗೆ ದಾರಿ

ಗ್ರಾಪಂ ಸದಸ್ಯರ ಅನರ್ಹತೆ ಕುರಿತ ಅರ್ಜಿ
Published 10 ಆಗಸ್ಟ್ 2023, 17:03 IST
Last Updated 10 ಆಗಸ್ಟ್ 2023, 17:03 IST
ಅಕ್ಷರ ಗಾತ್ರ

ಬೆಂಗಳೂರು: ‘ಚುನಾವಣೆಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ಕುಟುಂಬ ಮತ್ತು ಅವಲಂಬಿತರ ಆಸ್ತಿ ವಿವರಗಳನ್ನು ಘೋಷಿಸದೆ ಅಥವಾ ಮರೆ ಮಾಚಿದರೆ ಅದೂ ಕೂಡಾ ಭ್ರಷ್ಟಾಚಾರದ ಅಭ್ಯಾಸವಾಗುತ್ತದೆ. ಅಷ್ಟೇ ಅಲ್ಲ ಅದು ಅನರ್ಹತೆಗೂ ಕಾರಣವಾಗಲಿದೆ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಗ್ರಾಮ ಪಂಚಾಯ್ತಿ ಸದಸ್ಯರ ಅನರ್ಹತೆಗೆ ಸಂಬಂಧಿಸಿದ ಅರ್ಜಿಯೊಂದರ ವಿಚಾರಣೆ ವೇಳೆ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಕಲಬುರಗಿ ಪೀಠದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಯಾದಗಿರಿ ಜಲ್ಲೆಯ ವಡಗೇರಾದ ಗ್ರಾಮ ಪಂಚಾಯಿತಿ ಸದಸ್ಯೆ ಅಬೀದಾ ಬೇಗಂ ಎತ್ತಿದ್ದ ಕಾನೂನಾತ್ಮಕ ಅಂಶಗಳಿಗೆ ಉತ್ತರ ನೀಡಿರುವ ನ್ಯಾಯಪೀಠ, ‘ಅರ್ಜಿದಾರರು ಆಸ್ತಿ ವಿವರ ಸಲ್ಲಿಸದೇ ಇರುವುದು ಅವರಿಗೆ ಚುನಾವಣೆಯಲ್ಲಿ ಪೂರಕ ಪರಿಣಾಮ ಬೀರಿದೆಯೇ ಎಂಬುದನ್ನು ಹೇಳಲಾಗದು. ಆದರೆ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ-1993ರ ಅನ್ವಯ ಅಭ್ಯರ್ಥಿ ಆಸ್ತಿ ವಿವರ ಸಲ್ಲಿಸದೇ ಇರುವುದು ಕಲಂ 9(1)(ಬಿ) ಪ್ರಕಾರ ಅನರ್ಹತೆಗೆ ದಾರಿ ಮಾಡಿಕೊಡಲಿದೆ’ ಎಂದು
ಹೇಳಿದೆ.

ಅಬೀದಾ ಬೇಗಂ ಸದಸ್ಯತ್ವ ರದ್ದುಗೊಳಿಸಿದ ಜೆಎಂಎಫ್‌ಸಿ ನೀಡಿದ್ದ ಆದೇಶವನ್ನು ರದ್ದುಗೊಳಿಸಿದ ನ್ಯಾಯಪೀಠ, ‘ಈ ಪ್ರಕರಣದಲ್ಲಿ ಮೂಲ ಅರ್ಜಿದಾರರು ಗೆದ್ದ ಅಭ್ಯರ್ಥಿಯ ಅಯ್ಕೆಯನ್ನು ಅಸಿಂಧುಗೊಳಿಸುವುದು ಮಾತ್ರವಲ್ಲದೆ ತಮ್ಮನ್ನು ವಿಜಯಿ ಎಂದು ಘೋಷಿಸುವಂತೆ ಕೋರಿದ್ದಾರೆ. ಹಾಗಾಗಿ, ಎಲ್ಲ ಸ್ಪರ್ಧಿಗಳನ್ನೂ ಪ್ರತಿವಾದಿಗಳನ್ನಾಗಿ ಮಾಡಬೇಕಿತ್ತು. ಅವರ ಉಪಸ್ಥಿತಿಯಲ್ಲಿಯೇ ಯಾರು ವಿಜಯಿ ಎಂದು ಘೋಷಿಸಬೇಕಾಗುತ್ತದೆ. ಇಬ್ಬರೇ ಅಭ್ಯರ್ಥಿಗಳಿದ್ದಾಗ ಒಬ್ಬ ಅಭ್ಯರ್ಥಿ ಅನರ್ಹ ಎಂದು ಘೋಷಿಸಿದರೆ ಸಹಜವಾಗಿಯೇ ಮತ್ತೊಬ್ಬರು ಅರ್ಹರು ಅಥವಾ ವಿಜಯಿಯಾಗುತ್ತಾರೆ. ಆದರೆ, ಈ ಪ್ರಕರಣದಲ್ಲಿ ಇತರೆ ಸ್ಪರ್ಧಿಗಳಿದ್ದ ಕಾರಣ, ಯಾರು ವಿಜಯಿ ಎಂದು ನಿರ್ಣಯಿಸುವುದು ಕಷ್ಟಕರ’ ಎಂದು ಆದೇಶದಲ್ಲಿ ವಿವರಿಸಿದೆ.

ಪ್ರಕರಣವೇನು?: ‘ಅಬೀದಾ ಬೇಗಂ ಚುನಾವಣೆ ನಂತರ ತಮ್ಮ ಹಾಗೂ ಪತಿಯ ಆಸ್ತಿ ವಿವರ ಸಲ್ಲಿಸಿಲ್ಲ. ಹಾಗಾಗಿ, ಅವರನ್ನು ಅನರ್ಹಗೊಳಿಸಬೇಕು’ ಎಂದು ಮೊಹಮ್ಮದ್ ಇಸ್ಮಾಯಿಲ್,  ಕೋರ್ಟ್‌ನಲ್ಲಿ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು.

‘ಬೇಗಂ ಆಯ್ಕೆಯನ್ನು ಅಸಿಂಧುಗೊಳಿಸಿ ನನ್ನನ್ನೇ ವಿಜಯಿ ಅಭ್ಯರ್ಥಿ’ ಎಂದು ಘೋಷಿಸುವಂತೆ ಕೋರಿದ್ದರು. ಶಹಾಪೂರ ಜೆಎಫ್‌ಎಂಸಿ ನ್ಯಾಯಾಲಯ 2022ರ ಅಕ್ಟೋಬರ್ 31ರಂದು ಅಬೀದಾ ಬೇಗಂ ಆಯ್ಕೆಯನ್ನು ರದ್ದುಗೊಳಿಸಿತ್ತು.

ಇದನ್ನು ಪ್ರಶ್ನಿಸಿದ್ದ ಬೇಗಂ, ‘ಇಸ್ಮಾಯಿಲ್ ತಮ್ಮ ಅರ್ಜಿಯಲ್ಲಿ ಎಲ್ಲ ಸ್ಪರ್ಧಿಗಳನ್ನು ಪ್ರತಿವಾದಿಗಳನ್ನಾಗಿ ಮಾಡಿಲ್ಲ. ಇದು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ ಕಲಂ 15(2)(ಎ)ಗೆ ವಿರುದ್ಧವಾಗಿದೆ. ಆಸ್ತಿ ವಿವರ ಸಲ್ಲಿಸದೇ ಇರುವುದು ಭ್ರಷ್ಟಾಚಾರವಾಗುವುದಿಲ್ಲ ಮತ್ತು ಅದೇ ಕಾರಣಕ್ಕೆ ಅನರ್ಹಗೊಳಿಸಲಾಗದು’ ಎಂದು ಪ್ರತಿಪಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT