ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಟ್‌ ಪೂರೈಕೆ ಹಣ ಬಾಕಿ: BBMP ಮುಖ್ಯ ಆಯುಕ್ತರಿಗೆ ಹೈಕೋರ್ಟ್‌ ನೋಟಿಸ್‌

Published 30 ಅಕ್ಟೋಬರ್ 2023, 15:54 IST
Last Updated 30 ಅಕ್ಟೋಬರ್ 2023, 15:54 IST
ಅಕ್ಷರ ಗಾತ್ರ

ಬೆಂಗಳೂರು: ಸವಿತಾ ಸಮಾಜದ ಆರ್ಥಿಕ ಉತ್ತೇಜನಕ್ಕೆ ನೆರವಾಗುವ ಯೋಜನೆಯಡಿ ಪೂರೈಸಲಾಗಿದ್ದ 98 ಕಿಟ್‌ಗಳ ₹ 6 ಲಕ್ಷಕ್ಕೂ ಹೆಚ್ಚಿನ ಬಾಕಿ ಪಾವತಿ ಮಾಡದ ಆರೋಪದಡಿ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಈ ಕುರಿತಂತೆ ಮೆಸರ್ಸ್‌ ಮ್ಯಾಕ್ಸ್‌ ಟ್ರೇಡರ್ಸ್‌ ಮಾಲೀಕರಾದ ಪ್ರಿಯಾ ಬಿರಾದಾರ ಸಲ್ಲಿಸಿರುವ ಸಿವಿಲ್‌ ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ, ಕಲ್ಯಾಣ ವಿಭಾಗದ ವಿಶೇಷ ಆಯುಕ್ತ, ಜಂಟಿ ಆಯುಕ್ತ ಸೇರಿದಂತೆ ಒಟ್ಟು ಆರು ಜನ ಪ್ರತಿವಾದಿಗಳಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.

ಪ್ರಕರಣವೇನು?: ಹಿಂದುಳಿದ ವರ್ಗಗಳ ಆರ್ಥಿಕ ಉತ್ತೇಜನಕ್ಕೆ ನೆರವಾಗುವ ಯೋಜನೆಯಡಿ ಕರೆಯಲಾಗಿದ್ದ ಕಿಟ್‌ ಪೂರೈಕೆ ಟೆಂಡರ್‌ ಪ್ರಕ್ರಿಯೆಯಲ್ಲಿ ಮ್ಯಾಕ್ಸ್‌ ಟ್ರೇಡರ್ಸ್‌ ಪಾಲ್ಗೊಂಡಿತ್ತು. ಪ್ರತಿಯೊಂದು ಕಿಟ್‌ನ ಮೌಲ್ಯ ₹ 6,786ಕ್ಕೆ ನಿಗದಿಯಾಗಿ ಅದರಂತೆ ಬಿಬಿಎಂಪಿಗೆ 98 ವೃತ್ತಿಪರ ಕಿಟ್‌ಗಳನ್ನು ಪೂರೈಸಿತ್ತು. ಈ 98 ಕಿಟ್‌ಗಳ ಬಾಕಿ ಮೊತ್ತವಾದ ₹ 6.60 ಲಕ್ಷವನ್ನು ಬಿಬಿಎಂಪಿ ಕಂಪನಿಗೆ ಪಾವತಿ ಮಾಡಿರಲಿಲ್ಲ. 

ಈ ಕುರಿತಂತೆ ಕಂಪನಿ ಹೈಕೋರ್ಟ್‌ ಮೆಟ್ಟಿಲೇರಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಸ್‌.ಜಿ.ಪಂಡಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಅರ್ಜಿದಾರರ ಮನವಿಯನ್ನು ಎರಡು ತಿಂಗಳಲ್ಲಿ ಪರಿಗಣಿಸುವಂತೆ ಆದೇಶಿಸಿತ್ತು. ‘ಏಕಸದಸ್ಯ ನ್ಯಾಯಪೀಠದ ಆದೇಶ ಪಾಲನೆ ಮಾಡಿಲ್ಲ’ ಎಂದು ಆಕ್ಷೇಪಿಸಿ ಕಂಪನಿ ಈ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT