ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಂಬದ್ಧ ಭಾಷಾ ಬಳಕೆ ಸಲ್ಲ: ಸಂಸದ ಅನಂತಕುಮಾರ್‌ಗೆ ಹೈಕೋರ್ಟ್‌ ಎಚ್ಚರಿಕೆ

Published 16 ಫೆಬ್ರುವರಿ 2024, 14:32 IST
Last Updated 16 ಫೆಬ್ರುವರಿ 2024, 14:32 IST
ಅಕ್ಷರ ಗಾತ್ರ

ಬೆಂಗಳೂರು: ’ಭಾಷಾ ಪ್ರಯೋಗ ಹಿಡಿತದಲ್ಲಿರಬೇಕು ಎಂದು ನ್ಯಾಯಮೂರ್ತಿಗಳು ಎಚ್ಚರಿಸಿದ್ದಾರೆ ಎಂದು ನಿಮ್ಮ ಅರ್ಜಿದಾರ ಸಂಸದ ಅನಂತಕುಮಾರ ಹೆಗಡೆಯವರಿಗೆ ತಿಳಿಸಿ’ ಎಂದು ಹೆಗಡೆ ಪರ ವಕೀಲರಿಗೆ ಹೈಕೋರ್ಟ್‌, ಮೌಖಿಕವಾದ ಖಡಕ್‌ ಎಚ್ಚರಿಕೆ ನೀಡಿದೆ.

‘ನನ್ನ ವಿರುದ್ಧ ಕುಮಟಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸಬೇಕು’ ಎಂದು ಕೋರಿ ಸಂಸದ ಅನಂತಕುಮಾರ ಹೆಗಡೆ ಸಲ್ಲಿಸಿರುವ ರಿಟ್‌ ಅರ್ಜಿಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ’ಯ ಹೈಕೋರ್ಟ್‌ನ ವಿಶೇಷ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರು ಶುಕ್ರವಾರ ವಿಚಾರಣೆ ನಡೆಸಿದರು.

ವಿಚಾರಣೆ ವೇಳೆ ಅರ್ಜಿದಾರರ ಪರ ಪವನಚಂದ್ರ ಶೆಟ್ಟಿ ವಾದ ಆಲಿಸಿದ ನ್ಯಾಯಪೀಠ, ‘ನಾವು ಅವರ ನೀತಿಗಳನ್ನು ಇಷ್ಟಪಡಬಹುದು ಅಥವಾ ಇಲ್ಲದಿರಬಹುದು. ಆದರೆ, ಅವರು ನಮ್ಮ ಮುಖ್ಯಮಂತ್ರಿ ಎಂಬುದನ್ನು ಮರೆಯಬೇಡಿ. ಏಕವಚನದಲ್ಲಿ ಮಾತನಾಡುವುದು ಶೋಭೆ ತರುವ ವಿಚಾರವಲ್ಲ. ಅವರಾಗಲಿ, ನೀವಾಗಲಿ ಯಾರೂ ಏಕವಚನದಲ್ಲಿ ಮಾತನಾಡಬಾರದು. ಚುನಾವಣೆಯಲ್ಲಿ ಒಂದು ಪಕ್ಷ ಬರುತ್ತದೆ, ಇನ್ನೊಂದು ಪಕ್ಷ ಹೋಗುತ್ತದೆ. ಪ್ರಜಾಪ್ರಭುತ್ವ ಕೆಲಸ ಮಾಡುವುದೇ ಹೀಗೆ’ ಎಂದರು.

‘ಅರ್ಜಿದಾರರು ಉತ್ತಮ‌ ವಾಗ್ಮಿ ಇರಬಹುದು. ಹಾಗೆಂದ ಮಾತ್ರಕ್ಕೆ ಅಸಂಬದ್ಧ ಪದಗಳ ಪ್ರಯೋಗ ಸಲ್ಲದು. ಭಾಷಾ ಬಳಕೆಯಲ್ಲಿ ಎಲ್ಲರೂ ನಿಗಾ ವಹಿಸಬೇಕು. ಒಳ್ಳೆಯ ಭಾಷೆ ಪ್ರಯೋಗ ಮಾಡುವ ಮೂಲಕ ಗೌರವಯುತವಾಗಿ ನಡೆದುಕೊಳ್ಳುವಂತೆ ನಿಮ್ಮ ಅರ್ಜಿದಾರರಿಗೆ ತಿಳಿವಳಿಕೆ‌ ಹೇಳಿ’ ಎಂದು ತಾಕೀತು ಮಾಡಿದರು. ಅಂತಿಮವಾಗಿ, ‘ಅನಂತಕುಮಾರ ಹೆಗಡೆ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಯಾವುದೇ ಬಲವಂತದ ಕ್ರಮಕ್ಕೆ ಮುಂದಾಗಬಾರದು’ ಎಂದು ಸರ್ಕಾರಕ್ಕೆ ಆದೇಶಿಸಿ ವಿಚಾರಣೆ ಮುಂದೂಡಿದರು.

ಪ್ರಕರಣವೇನು?: ‘ಹಿಂದೂ ಮುಸ್ಲಿಂ ಸಮುದಾಯಗಳ ಮಧ್ಯೆ ಕೋಮು ಸೌಹಾರ್ದತೆ ಕದಡುವ ಮತ್ತು ಮುಖ್ಯಮಂತ್ರಿಗಳ ಬಗ್ಗೆ ಕೇವಲವಾದ ಪದಗಳನ್ನು ಬಳಸಿ ಭಾಷಣ ಮಾಡಿದ್ದಾರೆ’ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೆನರಾ ಲೋಕಸಭಾ ಕ್ಷೇತ್ರದ ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಕುಮಟಾ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT