ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟಾಕಿ ಮಳಿಗೆ ಜಪ್ತಿ: ಬೀಗ ತೆರವಿಗೆ ಹೈಕೋರ್ಟ್‌ ಆದೇಶ

Published 10 ನವೆಂಬರ್ 2023, 15:51 IST
Last Updated 10 ನವೆಂಬರ್ 2023, 15:51 IST
ಅಕ್ಷರ ಗಾತ್ರ

ಬೆಂಗಳೂರು: ‘ನಿಯಮ ಉಲ್ಲಂಘನೆ ಆರೋಪದಡಿ ಜಪ್ತಿ ಮಾಡಿದ ಅರ್ಜಿದಾರರ ಪಟಾಕಿ ದಾಸ್ತಾನು ಮಳಿಗೆಗಳಿಗೆ ಹಾಕಲಾಗಿರುವ ಬೀಗವನ್ನು, ದೀಪಾವಳಿ ಸಮೀಪಿಸುತ್ತಿರುವುದರಿಂದ ಕೂಡಲೇ ತೆರವುಗೊಳಿಸಬೇಕು‘ ಎಂದು ಹೈಕೋರ್ಟ್‌ ಆದೇಶಿಸಿದೆ.

ಏತನ್ಮಧ್ಯೆ, ‘ಬೀಗ ತೆರವುಗೊಳಿಸುವ ಮಳಿಗೆಗಳು ಸ್ಫೋಟಕ ಕಾಯ್ದೆ ಮತ್ತು ಅದಕ್ಕನುಗುಣವಾದ ನಿಯಮಗಳನ್ನು ಪಾಲನೆ ಮಾಡಿದ್ದರೆ ಮಾತ್ರವೇ ಮಾರಾಟಕ್ಕೆ ಅವಕಾಶ ನೀಡಬೇಕು’ ಎಂದು ಸಂಬಂಧಿಸಿದ ಜಿಲ್ಲಾಡಳಿತಕ್ಕೆ ನಿರ್ದೇಶಿಸಿದೆ.

‘ಜಪ್ತಿ ಮಾಡಲಾಗಿರುವ ನಮ್ಮ ಪಟಾಕಿ ದಾಸ್ತಾನು ಮಳಿಗೆಗಳ ತೆರವಿಗೆ ನಿರ್ದೇಶಿಸಬೇಕು’ ಎಂದು ಕೋರಿ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆ ಬಾಗೇಪಲ್ಲಿಯ ಎನ್‌.ಮಹದೇಶನ್‌ ಸೇರಿದಂತೆ ಒಟ್ಟು 22 ಜನ ಪಟಾಕಿ ಮಾರಾಟ ಪರವಾನಗಿದಾರರು ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿ ಈ ಕುರಿತಂತೆ ಮಧ್ಯಂತರ ಆದೇಶ ನೀಡಿತು.

ವಿಚಾರಣೆ ವೇಳೆ ಪ್ರಕರಣದ ಪ್ರತಿವಾದಿಯಾದ ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷಾ ಸಂಸ್ಥೆ ಮುಖ್ಯ ನಿಯಂತ್ರಕರ ಪರವಾಗಿ, ಕೇಂದ್ರ ಸರ್ಕಾರದ ಡೆಪ್ಯುಟಿ ಸಾಲಿಸಿಟರ್‌ ಜನರಲ್‌ ಶಾಂತಿಭೂಷಣ್‌ ಹಾಜರಾಗಿ, ‘600 ಕೆ.ಜಿ ತೂಕದವರೆಗೂ ಪಟಾಕಿ ದಾಸ್ತಾನು ಮಾಡಲು ಪರವಾನಗಿ ನೀಡಲು ಜಿಲ್ಲಾಧಿಕಾರಿಗೆ ಅಧಿಕಾರವಿದೆ. ಆದರೆ, ಬಹಳಷ್ಟು ಪ್ರಕರಣಗಳಲ್ಲಿ ಈ ಮಿತಿಯನ್ನು ಮೀರಿ ಕಾನೂನು ಬಾಹಿರವಾಗಿ ಪರವಾನಗಿ ನೀಡಲಾಗಿದೆ’ ಎಂಬ ಅಂಶವನ್ನು ಪುನರುಚ್ಚರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯ ಸರ್ಕಾರದ ಪರ ವಕೀಲ ಕೆ.ಎಸ್‌.ಹರೀಶ್‌, ‘ಕಂದಾಯ, ಅಗ್ನಿ ಶಾಮಕ ಮತ್ತು ಪೊಲೀಸ್‌ ಇಲಾಖೆಗಳ ಸಹಯೋಗದಲ್ಲೇ ಸಮಗ್ರ ಪರಿಶೀಲನೆ ನಡೆಸಿ ನಿರಾಕ್ಷೇಪಣಾ ಪತ್ರ ನೀಡಲಾಗಿದೆ’ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.

ಇದಕ್ಕೆ ಅರ್ಜಿದಾರರ ಪರ ವಕೀಲ ಬಿ.ಬಿ.ಸಾಗರ್‌, ‘ದೀಪಾವಳಿ ಹಬ್ಬ ಆರಂಭವಾಗುತ್ತಿದ್ದು, ಜಪ್ತಿ ಮಾಡಿದ ಮಳಿಗೆಗಳ ಬೀಗ ತೆರೆಯಲು ನಿರ್ದೇಶಿಸಬೇಕು’ ಎಂದು ಕೋರಿದರು. ಇದನ್ನು ಮನ್ನಿಸಿದ ನ್ಯಾಯಪೀಠ ‘ಜಪ್ತಿ ಮಾಡಲಾಗಿರುವ ಅರ್ಜಿದಾರರ ದಾಸ್ತಾನು ಮಳಿಗೆಗಳ ಬೀಗಗಳನ್ನು ಕೂಡಲೇ ತೆರೆಯಬೇಕು. ಸ್ಫೋಟಕ ಕಾಯ್ದೆ-1984ರ ನಿಯಮಗಳನ್ನು ಮೀರದಂತೆ ಷರತ್ತುಗಳನ್ನು ಪಾಲನೆ ಮಾಡುವವರಿಗೆ ಮಾತ್ರವೇ ಪಟಾಕಿ ಮಾರಾಟಕ್ಕೆ ಅವಕಾಶ ಕಲ್ಪಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು’ ಎಂದು ಆದೇಶಿಸಿತು.

ಅರ್ಜಿದಾರರು ಷರತ್ತುಗಳನ್ನು ಅನುಪಾಲನೆ ಮಾಡಿದ ಬಗ್ಗೆ ಮತ್ತು ಅರ್ಜಿಗೆ ಸಂಬಂಧಿಸಿದಂತೆ ಮೂರು ವಾರಗಳಲ್ಲಿ ಸಂಪೂರ್ಣ ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿತು.

ಪ್ರಕರಣವೇನು?: ಆನೇಕಲ್ ತಾಲ್ಲೂಕಿನ ಬಾಲಾಜಿ ಟ್ರೇಡರ್ಸ್‌ನಲ್ಲಿ 2023ರ ಅಕ್ಟೋಬರ್ 7ರಂದು ಪಟಾಕಿ ದಾಸ್ತಾನಿಗೆ ಬೆಂಕಿ ಬಿದ್ದ ಪರಿಣಾಮ 14 ಜನರು ಸ್ಥಳದಲ್ಲೇ ಮೃತಪಟ್ಟ ಹಿನ್ನೆಲೆಯಲ್ಲಿ ಸಿಐಡಿ ತನಿಖೆಗೆ ಆದೇಶಿಸಲಾಗಿತ್ತು. ಬೆಂಗಳೂರು ನಗರ ಪೊಲೀಸ್ ಕಮಿಷನರ್‌, ಬೆಂಗಳೂರು ಉತ್ತರ ತಾಲ್ಲೂಕು ತಹಶೀಲ್ದಾರ್, ಅತ್ತಿಬೆಲೆ, ಸೂರ್ಯನಗರ ಮತ್ತು ಹೆಬ್ಬಗೋಡಿ ಪೊಲೀಸ್‌ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್‌ಗಳ ಜಂಟಿ ಸಮಿತಿಯ ಆಶ್ರಯದಲ್ಲಿ ಅಧಿಕೃತ ಮತ್ತು ಅನಧಿಕೃತ ಪರವಾನಗಿ ಹೊಂದಿದ ಪಟಾಕಿ ಮಾರಾಟ ಮಳಿಗೆಗಳ ಪರಿಶೀಲನೆ ನಡೆಸಲಾಗಿತ್ತು. ಈ ವೇಳೆ ನಿಯಮ ಉಲ್ಲಂಘಿಸಿದ ಮಾರಾಟ ಮಳಿಗೆಗಳನ್ನು ಜಪ್ತಿ ಮಾಡಿ ಬೀಗ ಹಾಕಲಾಗಿತ್ತು. ಇವುಗಳ ತೆರವು ಕೋರಿ ಅರ್ಜಿದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

‘ನಮ್ಮ ಮಳಿಗೆಗಳಿಗೆ ಬೀಗ ಹಾಕಿರುವುದು ಕಾನೂನುಬಾಹಿರ ಮತ್ತು ಅಸಾಂವಿಧಾನಿಕ. ಹಾಗಾಗಿ, ನಮಗೆ ಮಾರಾಟ ಮಾಡಲು ಅನುವಾಗುವಂತೆ ಬೀಗ ತೆರವಿಗೆ ನಿರ್ದೇಶಿಸಬೇಕು’ ಎಂದು ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT