ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ವಿಶ್ವವಿದ್ಯಾಲಯ | ಲೋಕನಾಥ್ ಕುಲಪತಿ ಹುದ್ದೆ ಅಬಾಧಿತ: ಮೇಲ್ಮನವಿ ಪುರಸ್ಕೃತ

Published 23 ಫೆಬ್ರುವರಿ 2024, 12:39 IST
Last Updated 23 ಫೆಬ್ರುವರಿ 2024, 12:39 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್‌.ಕೆ.ಲೋಕನಾಥ್ ಅವರ ನೇಮಕಾತಿ ರದ್ದುಪಡಿಸಿದ್ದ ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ರದ್ದುಪಡಿಸಿದೆ. ಇದರಿಂದಾಗಿ ಲೋಕನಾಥ್ ಕುಲಪತಿಯಾಗಿ ಮುಂದುವರಿಯುವುದು ಅಬಾಧಿತವಾದಂತಾಗಿದೆ.

‘ಏಕಸದಸ್ಯ ನ್ಯಾಯಪೀಠದ ಆದೇಶವನ್ನು ರದ್ದುಪಡಿಸಬೇಕು’ ಎಂದು ಕೋರಿ ಪ್ರೊ.ಎನ್‌.ಕೆ.ಲೋಕನಾಥ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಎಸ್‌.ದಿನೇಶ್‌ ಕುಮಾರ್ ಹಾಗೂ ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ ಅವರಿದ್ದ ವಿಭಾಗೀಯ ನ್ಯಾಯಪೀಠ ಪುರಸ್ಕರಿಸಿ ಆದೇಶಿಸಿದೆ.

ಪ್ರಕರಣವೇನು?: ಮೈಸೂರು ವಿವಿ ಕುಲಪತಿ ಹುದ್ದೆಗೆ ಲೋಕನಾಥ್‌ ಅವರನ್ನು ನೇಮಕ ಮಾಡಿ 2023ರ ಮಾರ್ಚ್ 23ರಂದು ರಾಜ್ಯಪಾಲರು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಪ್ರೊ.ಶರತ್ ಅನಂತಮೂರ್ತಿ ಮತ್ತು ಡಾ.ಜಿ.ವೆಂಕಟೇಶ್‌ ಕುಮಾರ್‌ ಹೈಕೋರ್ಟ್‌ನಲ್ಲಿ ಪ್ರತ್ಯೇಕ ರಿಟ್‌ ಅರ್ಜಿಗಳನ್ನು ದಾಖಲಿಸಿದ್ದರು.

‘ಕುಲ‍‍ಪತಿ ನೇಮಕಾತಿ ಪ್ರಕ್ರಿಯೆಯಲ್ಲಿ, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಕಾಯ್ದೆ–2000 ಮತ್ತು ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ನಿಯಮಗಳನ್ನು ಅನುಸರಿಸಿಲ್ಲ’ ಎಂದು ಆಕ್ಷೇಪಿಸಿದ್ದರು.

ಈ ಅರ್ಜಿಗಳ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎನ್‌.ಎಸ್‌.ಸಂಜಯಗೌಡ ಅವರಿದ್ದ ಏಕಸದಸ್ಯ ನ್ಯಾಯಪೀಠ, ನೇಮಕಾತಿ ರದ್ದುಗೊಳಿಸಿ 2023ರ ಸೆಪ್ಟೆಂಬರ್ 12ರಂದು ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಲೋಕನಾಥ್‌ ವಿಭಾಗೀಯ ನ್ಯಾಯಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಈ ಮೊದಲು ಈ ಮೇಲ್ಮನವಿ ವಿಚಾರಣೆ ನಡೆಸಿದ್ದ ಈ ಹಿಂದಿನ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ (ಈಗ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ) ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠ  ಏಕಸದಸ್ಯ ನ್ಯಾಯಪೀಠದ ಆದೇಶಕ್ಕೆ ಮಧ್ಯಂತರ ತಡೆ ನೀಡಿತ್ತು.

ಮೇಲ್ಮನವಿ ವಿಚಾರಣೆಯಲ್ಲಿ ಅರ್ಜಿದಾರರ ಪರ ವಾದ ಮಂಡಿಸಿದ್ದ ಹಿರಿಯ ವಕೀಲರಾದ ಅಶೋಕ ಹಾರನಹಳ್ಳಿ, ಉದಯ ಹೊಳ್ಳ ಮತ್ತು ಅಭಿಷೇಕ್‌ ಕುಮಾರ್‌, ‘ನೇಮಕಾತಿ ಪ್ರಕ್ರಿಯೆ ಸರಿಯಿಲ್ಲ ಎಂಬ ಏಕೈಕ ತಕರಾರನ್ನೇ ನೆಪವಾಗಿರಿಸಿಕೊಂಡ ಏಕಸದಸ್ಯ ನ್ಯಾಯಪೀಠ ನೇಮಕಾತಿ ರದ್ದುಪಡಿಸಿರುವುದು ಅರ್ಜಿದಾರರಿಗೆ ಉಂಟು ಮಾಡಿರುವ ಅನ್ಯಾಯ. ಅಂತೆಯೇ, ದಶಕದ ಹಿಂದಿನ ನಿವೇಶನಕ್ಕೆ ಸಂಬಂಧಿಸಿದ ತಗಾದೆಯೊಂದರಲ್ಲಿ ಲೋಕನಾಥ್‌ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಅನ್ನು ಕೋರ್ಟ್‌ ಈಗಾಗಲೇ ರದ್ದುಪಡಿಸಿದೆ. ಅರ್ಜಿದಾರರ ವಿರುದ್ಧ ದುರುದ್ದೇಶಪೂರ್ವಕ ಆರೋಪಗಳನ್ನು ಮಾಡಲಾಗಿದೆ. ಆದ್ದರಿಂದ, ಏಕಸದಸ್ಯ ನ್ಯಾಯಪೀಠದ ಆದೇಶವನ್ನು ರದ್ದುಪಡಿಸಬೇಕು’ ಎಂದು ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT