ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನ್ಯಾಯಾಲಯ ಬಗ್ಗೆ ಉಪೇಕ್ಷೆಯಿಂದ ಮಾತನಾಡಿದ ಸ್ವಾಮೀಜಿಗೆ ಹೈಕೋರ್ಟ್‌ ತರಾಟೆ

Published 20 ಡಿಸೆಂಬರ್ 2023, 23:30 IST
Last Updated 20 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಮತ್ತು ನ್ಯಾಯಮೂರ್ತಿಗಳ ಬಗ್ಗೆ ಉಪೇಕ್ಷೆಯಿಂದ ಮಾತನಾಡಿದ್ದಾರೆ’ ಎಂಬ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ರಾಮಲಿಂಗೇಶ್ವರ ಮಠದ ಪೀಠಾಧಿಪತಿ ನೀಲಕಂಠ ಸಾರಂಗ ದೇಶಿಕೇಂದ್ರ ಸ್ವಾಮೀಜಿಯನ್ನು ಹೈಕೋರ್ಟ್‌ ತೀವ್ರ ತರಾಟೆಗೆ ತೆಗೆದುಕೊಂಡಿತು.

‘ನಿಮ್ಮಂಥ ಶ್ರೇಷ್ಠ ಸ್ಥಾನದಲ್ಲಿರುವ ಸ್ವಾಮೀಜಿಗಳು ನ್ಯಾಯಾಧೀಶರು, ನ್ಯಾಯಾಲಯದ ಬಗ್ಗೆ ಗೌರವ ಬರುವ ರೀತಿಯಲ್ಲಿ ನಡೆದುಕೊಳ್ಳಬೇಕು, ಇಲ್ಲವಾದಲ್ಲಿ ನಮ್ಮ ಕೆಲಸ ನಾವು ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿತು.

ಸ್ವಾಮೀಜಿ ವಿರುದ್ಧ ದಾಖಲಾಗಿದ್ದ ನ್ಯಾಯಾಂಗ ನಿಂದನೆ ಮೊಕದ್ದಮೆ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠ, ಸ್ವಾಮೀಜಿ ಸಲ್ಲಿಸಿದ್ದ ಕ್ಷಮೆ ಯಾಚನೆ ಪರಿಶೀಲಿಸಿ, ‘ಸಾಮಾನ್ಯ ಮನುಷ್ಯ ನ್ಯಾಯಾಲಯದ ಬಗ್ಗೆ ಹಗುರವಾಗಿ ಮಾತನಾಡಿದ್ದಾನೆ ಎಂದರೆ ನಾವು ಅರ್ಥ ಮಾಡಿಕೊಳ್ಳುತ್ತಿದ್ದೆವು. ಆದರೆ, ನಿಮ್ಮಂಥವರೇ ನ್ಯಾಯಾಲಯ ಮತ್ತು ನ್ಯಾಯಮೂರ್ತಿಗಳನ್ನು ಹೀಗಳೆದರೆ ನ್ಯಾಯಾಂಗ ಹೇಗೆ ಕಾರ್ಯ ನಿರ್ವಹಿಸಬೇಕು’ ಎಂದು ಖಾರವಾಗಿ ಪ್ರಶ್ನಿಸಿತು.

‘ಎಲ್ಲರೂ ನ್ಯಾಯಾಂಗ, ಕೋರ್ಟ್‌ಗೆ ಗೌರವ ನೀಡಬೇಕೆ ವಿನಾ ಅದರೊಳಗಿನ ಯಾವುದೇ ಒಬ್ಬ ವ್ಯಕ್ತಿಗಲ್ಲ. ನಾವು ಸಂಸ್ಥೆಯ ಬಗ್ಗೆ ಕಾಳಜಿ ಹೊಂದಿದ್ದೇವೆ. ಸಂಸ್ಥೆ ಎಂಬುದು ಶತಮಾನ ಕಳೆದರೂ ಇರುತ್ತದೆ. ಹೀಗಾಗಿ, ಅದನ್ನು ಗೌರವಿಸುವ ಭಾವನೆ ಹೊಂದಿರಬೇಕು’ ಎಂದು ಕಿವಿಮಾತು ಹೇಳಿತು. ಅಂತಿಮವಾಗಿ ಸ್ವಾಮೀಜಿಯವರ ಕ್ಷಮೆಯನ್ನು ಮಾನ್ಯ ಮಾಡಿ ನ್ಯಾಯಾಂಗ ನಿಂದನೆ ಕೈಬಿಟ್ಟಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT