ಬೆಂಗಳೂರು: ಸಚಿವ ಶಿವಾನಂದ ಎಸ್.ಪಾಟೀಲ್ ದಾಖಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾರಿ ಮಾಡಿದ್ದ ಷೋಕಾಸ್ ನೋಟಿಸ್‌ಗೆ ಹೈಕೋರ್ಟ್ ತಡೆ ನೀಡಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ (42ನೇ ಎಸಿಎಂಎಂ) ಜಾರಿಗೊಳಿಸಿದ್ದ ಷೋಕಾಸ್ ನೋಟಿಸ್ ಪ್ರಶ್ನಿಸಿ ಯತ್ನಾಳ್ ಸಲ್ಲಿಸಿದ್ದ ಅರ್ಜಿಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಗುರುವಾರ ವಿಚಾರಣೆ ನಡೆಸಿದರು.
ದೂರುದಾರ ಸಚಿವ ಶಿವಾನಂದ ಎಸ್.ಪಾಟೀಲ್ ಅವರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿತು. ಯತ್ನಾಳ್ ಪರ ಹೈಕೋರ್ಟ್ ವಕೀಲ ವೆಂಕಟೇಶ್ ಪಿ.ದಳವಾಯಿ ವಾದ ಮಂಡಿಸಿದರು.
ಪ್ರಕರಣವೇನು?: ‘ಇತ್ತೀಚಿನ ಲೋಕಸಭೆ ಚುನಾವಣಾ ರ್‍ಯಾಲಿ ಸಂದರ್ಭದಲ್ಲಿ ಬಸನಗೌಡ ಪಾಟೀಲ ಯತ್ನಾಳ್ ನನ್ನ ವಿರುದ್ಧ ಮಾನಹಾನಿ ಹೇಳಿಕೆ ನೀಡಿದ್ದಾರೆ’ ಎಂದು ಆರೋಪಿಸಿ ಶಿವಾನಂದ ಎಸ್.ಪಾಟೀಲ್ ಯತ್ನಾಳ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಇದನ್ನು ವಿಚಾರಣೆಗೆ ಪರಿಗಣಿಸಿದ್ದ ವಿಚಾರಣಾ ನ್ಯಾಯಾಲಯ ಯತ್ನಾಳ್ ಅವರಿಗೆ ಷೋಕಾಸ್ ನೋಟಿಸ್ ಜಾರಿಗೊಳಿಸುವಂತೆ 2024ರ ಜುಲೈ 16ರಂದು ಆದೇಶಿಸಿತ್ತು.