ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಡೀಪ್‌ಫೇಕ್‌’ ಗಂಭೀರವಾಗಿ ಪರಿಗಣಿಸಲು ಗೃಹಸಚಿವ ಜಿ.ಪರಮೇಶ್ವರ್‌ ಸೂಚನೆ

Published 17 ನವೆಂಬರ್ 2023, 14:13 IST
Last Updated 17 ನವೆಂಬರ್ 2023, 14:13 IST
ಅಕ್ಷರ ಗಾತ್ರ

ಚಿತ್ರದುರ್ಗ: ಡೀಪ್‌ಫೇಕ್‌ ತಂತ್ರಜ್ಞಾನದ ಬಳಸಿ ಮಹಿಳೆಯರನ್ನು ಅಶ್ಲೀಲವಾಗಿ ಚಿತ್ರಿಸಿ ಮಾನ ಕಳೆಯುವ ಪ್ರಕರಣಗಳು ವರದಿಯಾಗುತ್ತಿವೆ. ಇಂತಹ ದೂರುಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಎಫ್‌ಐಆರ್‌ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಗೃಹಸಚಿವ ಜಿ.ಪರಮೇಶ್ವರ್‌ ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಪೊಲೀಸ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಕಾನೂನು ಸುವ್ಯವಸ್ಥೆ ಕಾಪಾಡುವುದು, ಅಪರಾಧ ಪ್ರಕರಣಗಳನ್ನು ಮಟ್ಟಹಾಕುವುದು, ರೌಡಿಗಳ ಹಾವಳಿಗೆ ಕಡಿವಾಣ, ಸೈಬರ್ ಕ್ರೈಂ, ಡ್ರಗ್ಸ್ ಪ್ರಕರಣಗಳ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಿದರು.

‘ಧರ್ಮ, ಜಾತಿ ಹೆಸರಿನಲ್ಲಿ ಅವಹೇಳನಕಾರಿ ಸಂದೇಶನಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗುತ್ತಿದೆ. ಕಿಡಿಗೇಡಿಗಳ ಈ ಕೃತ್ಯದಿಂದ ಗಲಭೆ ಉಂಟಾಗುವ ಸಾಧ್ಯತೆಗಳು ಹೆಚ್ಚು. ಸಾಮಾಜಿಕ ಜಾಲತಾಣದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ನಗರ ಪ್ರದೇಶದಲ್ಲಿ ಸೈಬರ್‌ ಕ್ರೈಂ ಹೆಚ್ಚಾಗುತ್ತಿದ್ದು, ತಾಂತ್ರಿಕ ಪದವೀಧರರ ನೆರವು ಪಡೆದು ಮಟ್ಟಹಾಕಬೇಕು’ ಎಂದು ತಾಕೀತು ಮಾಡಿದರು.

ಜನಸ್ನೇಹಿ ಪೊಲೀಸ್‌ ಠಾಣೆ: ‘ದೂರು ನೀಡಲು ಪೊಲೀಸ್ ಠಾಣೆಗೆ ಬರುವ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಬೇಕು. ಠಾಣೆಯಲ್ಲಿ ಜನಸ್ನೇಹಿ ವಾತಾವರಣ ನಿರ್ಮಾಣ ಮಾಡಬೇಕು. ಸಹಾಯ ಘಟಕ, ಸಿ.ಸಿ.ಟಿ.ವಿ ಕ್ಯಾಮೆರಾವನ್ನು ಕಡ್ಡಾಯವಾಗಿ ಅಳವಡಿಸಬೇಕು’ ಎಂದು ಹೇಳಿದರು.

‘ಮನೆ ಕಳ್ಳತನ, ಸುಲಿಗೆ, ದರೋಡೆ ಪ್ರಕರಣಗಳನ್ನು ಮಟ್ಟ ಹಾಕಲು ಗಮನ ಕೊಡಬೇಕು. ಆರೋಪಿಗಳ ಚಲವಲನದ ಮೇಲೆ‌ ನಿಗಾವಹಿಸಲು ಪೊಲೀಸರು ಗಸ್ತು ತಿರುಗಬೇಕು. ಪೆಡ್ಲರ್‌ಗಳು ಹೊರ ರಾಜ್ಯಗಳಿಂದ ಡ್ರಗ್ಸ್ ಸರಬರಾಜು ಮಾಡುತ್ತಿರುತ್ತಾರೆ. ಸಂಶಯಾಸ್ಪದ ವ್ಯಕ್ತಿಗಳ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಆಂಧ್ರಪ್ರದೇಶದ ಗಡಿಗಳಲ್ಲಿ ತಪಾಸಣೆ ನಡೆಸಬೇಕು’ ಎಂದು ನಿರ್ದೇಶನ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಡಿಐಜಿ ತ್ಯಾಗರಾಜ್, ಜಿಲ್ಲಾಧಿಕಾರಿ ದಿವ್ಯಾ ಪ್ರಭು, ಜಿಲ್ಲಾ‌ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್‌ ಮೀನಾ ಇದ್ದರು.

ಇಬ್ಬರು ಎಎಸ್‌ಪಿ ನಿಯೋಜನೆ

ಪ್ರತಿ ಜಿಲ್ಲೆಗೆ ಇಬ್ಬರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳನ್ನು ನಿಯೋಜಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ. ಶಾಂತಿ ಸುವಸ್ಥೆ ಕಾಪಾಡಲು ಒಬ್ಬರು ಅಪರಾಧ ವಿಭಾಗಕ್ಕೆ ಮೊತ್ತೊಬ್ಬರು ಎಎಸ್‌ಪಿಯನ್ನು ನಿಯೋಜಿಸಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ ತಿಳಿಸಿದರು. ‘ಹೆಚ್ಚು ಅಪಘಾತಗಳು ಸಂಭವಿಸುವ (ಬ್ಲಾಕ್ ಸ್ಪಾಟ್) ಸ್ಥಳಗಳನ್ನು ಗುರುತಿಸಿ ಕಾರಣಗಳನ್ನು ಪತ್ತೆ ಹಚ್ಚಬೇಕು. ರಸ್ತೆಗಳಲ್ಲಿ ಸೂಚನಾಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಅಗತ್ಯ ಸ್ಥಳಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಲು ಮುಂದಾಗಬೇಕು. ಹೆದ್ದಾರಿ ಗಸ್ತು ಅಚ್ಚುಕಟ್ಟಾಗಿ ನಡೆಸಬೇಕು’ ಎಂದು ತಾಕೀತು ಮಾಡಿದರು.

‘ರಾಜಿ ಮಾಡಿಸುವುದನ್ನು ಬಿಡಿ’

‘ಶೋಷಿತ ಸಮುದಾಯದ ಮೇಲೆ ದೌರ್ಜನ್ಯ ನಡೆದ ಪ್ರಕರಣಗಳನ್ನು ಠಾಣೆ ಮಟ್ಟದಲ್ಲಿ ರಾಜಿ ಮಾಡಿಸುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ಆರೋಪಿಗಳು ಕಾನೂ‌ನು ಪರಿದಿಯಿಂದ ತಪ್ಪಿಸಿಕೊಳ್ಳಬಾರದು. ಸೂಕ್ತ ಸಾಕ್ಷ್ಯಧಾರಗಳನ್ನು ಕಲೆ ಹಾಕಿ ಶಿಕ್ಷೆ ಆಗುವಂತೆ ತನಿಖಾಧಿಕಾರಿಗಳು ನೋಡಿಕೊಳ್ಳಬೇಕು. ಹಿರಿಯ ಅಧಿಕಾರಿಗಳು ಆಗಾಗ ತನಿಖೆಯನ್ನು ಪರಿಶೀಲಿಸಿ ಮಾರ್ಗದರ್ಶನ‌ ನೀಡಬೇಕು’ ಎಂದು ಗೃಹ ಸಚಿವ ಪರಮೇಶ್ವರ್‌ ಹೇಳಿದರು. ‘ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯ ಪ್ರಮಾಣ ತೀರಾ ಕಡಿಮೆ ಇದೆ. ಶಿಕ್ಷೆಯ ಪ್ರಮಾಣದಲ್ಲಿ ಕರ್ನಾಟಕ ಇಡೀ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಶೋಷಿತ ಸಮುದಾಯಗಳ‌ನ್ನು ರಕ್ಷಣೆ ಮಾಡುವ ಜವಾಬ್ದಾರಿ ಪೊಲೀಸರ ಮೇಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT