ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನಿಟ್ರ್ಯಾಪ್‌ ಜಾಲದಲ್ಲಿ 10 ಮಹಿಳೆಯರು: ಹತ್ತಾರು ಶಾಸಕರು, ಅಧಿಕಾರಿಗಳಿಗೆ ಬಲೆ?

ದೂರು ಕೊಡಲು ಹಿಂದೇಟು
Last Updated 7 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ಡಿಜಿಟಲ್‌ ಮೀಡಿಯಾದ ಆ್ಯಂಕರ್‌ಗಳಿಬ್ಬರು ಸೇರಿದಂತೆ 10 ಯುವತಿಯರನ್ನೊಳಗೊಂಡ ಮೂರ್ನಾಲ್ಕು ಪ್ರತ್ಯೇಕ ಗ್ಯಾಂಗ್‌ಗಳು ಕೆಲ ಶಾಸಕರು ಮತ್ತು ಅಧಿಕಾರಿಗಳನ್ನು ಹನಿಟ್ರ್ಯಾಪ್‌ ಬಲೆಗೆ ಕೆಡವಲು ಪ್ರಯತ್ನಿಸಿದ್ದ ಸಂಗತಿ ಬಯಲಿಗೆ ಬಂದಿದೆ.

ಗದಗ ಜಿಲ್ಲೆಯ ಶಾಸಕರೊಬ್ಬರನ್ನು ಹನಿಟ್ರ್ಯಾಪ್‌ ಮಾಡಿ, ಬ್ಲ್ಯಾಕ್‌ಮೇಲ್‌ ಮಾಡಿದ ಪ್ರಕರಣದಲ್ಲಿ ಕಿರುತೆರೆಯ ಇಬ್ಬರು ನಟಿಯರೂ ಸೇರಿದಂತೆ ಎಂಟು ಜನರನ್ನು ಬಂಧಿಸಲಾಗಿದೆ.

ಬಂಧಿತರ ವಿಚಾರಣೆ ವೇಳೆ ಬೇರೆ ಬೇರೆ ತಂಡಗಳು ಸಕ್ರಿಯವಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಆದರೆ, ಹನಿಟ್ರ್ಯಾಪ್‌ಗೆ ಒಳಗಾದವರು ದೂರು ಕೊಡಲು ಮುಂದೆ ಬರದಿರುವುದರಿಂದ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.

ಗದಗ, ಉಡು‍‍ಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಶಾಸಕರನ್ನು ಹನಿಟ್ರ್ಯಾಪ್‌ ಮಾಡಿದ ತಂಡವೇ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿತ್ರದುರ್ಗ, ಬೆಳಗಾವಿ ಹಾಗೂ ಬೀದರ್‌ ಜಿಲ್ಲೆಗಳ ಅರ್ಧ ಡಜನ್‌ಗೂ ಹೆಚ್ಚು ಶಾಸಕರಿಗೆ ಬಲೆ ಬೀಸಿತ್ತು. ತಂಡದ ಮಹಿಳೆಯರು ಮೊಬೈಲ್‌ ಫೋನ್‌ಗೆ ಬಹಳಷ್ಟು ಕರೆಗಳನ್ನು ಮಾಡಿದ್ದರು. ಅಶ್ಲೀಲ ಸಂಭಾಷಣೆಗಳ ವಿನಿಮಯವೂ ಆಗಿತ್ತು. ಗದಗ ಜಿಲ್ಲೆ ಶಾಸಕರ ಬ್ಲ್ಯಾಕ್‌ಮೇಲ್‌ ಪ್ರಕರಣ ಬಹಿರಂಗ ಆಗುತ್ತಿದ್ದಂತೆ, ಉಳಿದವರು ಹುಷಾರಾದರು ಎಂದೂ ಮೂಲಗಳು ಸ್ಪಷ್ಟಪಡಿಸಿವೆ.

ಹನಿಟ್ರ್ಯಾಪ್‌ ಗ್ಯಾಂಗ್‌ ಕೆಲವು ಶಾಸಕರಿಂದ ಭಾರಿ ಹಣ ಕಿತ್ತಿದೆ. ಎಲ್ಲ ಶ್ರೇಣಿಯ ಕೆಲವು ಅಧಿಕಾರಿಗಳು ಈ ಗ್ಯಾಂಗ್‌ಗಳ ಕಪಿಮುಷ್ಠಿಯಲ್ಲಿ ಸಿಲುಕಿದ್ದಾರೆ. ಅವರಿಂದ ಬಿಡಿಸಿಕೊಳ್ಳಲು ಹಣವನ್ನೂ ಕೊಟ್ಟಿದ್ದಾರೆ. ಮರ್ಯಾದೆಗೆ ಹೆದರಿ ಯಾರೂ ಬಾಯಿ ಬಿಡುತ್ತಿಲ್ಲ. ತನಿಖಾಧಿಕಾರಿಗಳ ಬಳಿ ಶಾಸಕರು ಮತ್ತು ಅಧಿಕಾರಿಗಳ ಹೆಸರಿರುವ ದೊಡ್ಡ ಪಟ್ಟಿಯೇ ಇದೆ ಎಂದು ಗೊತ್ತಾಗಿದೆ.

ಗದಗ ಜಿಲ್ಲೆಯ ಶಾಸಕರ ಎದುರಾಳಿ ಮಾತ್ರವಲ್ಲದೆ, ಇನ್ನೂ ಕೆಲ ಶಾಸಕರ ರಾಜಕೀಯ ಎದುರಾಳಿಗಳೂ ಹನಿಟ್ರ್ಯಾಪ್‌ ಗ್ಯಾಂಗ್‌ಗಳಿಗೆ ಹಣ ಕೊಟ್ಟು, ಹೇಗೆ ಬಲೆ ಬೀಸಬೇಕೆಂದು ಸಲಹೆ ನೀಡಿದ್ದರು ಎನ್ನಲಾಗಿದೆ. ಈ ಗ್ಯಾಂಗ್‌ಗಳಪ್ರತಿ ಸದಸ್ಯರ ಬಳಿ ಮೂರ್ನಾಲ್ಕು ಸಿಮ್‌ಗಳಿವೆ. ಒಮ್ಮೆ ಒಬ್ಬರಿಗೆ ಫೋನ್‌ ಮಾಡಿದರೆ ಪುನಃ ಅದೇ ನಂಬರ್‌ನಿಂದ ಮತ್ತೊಬ್ಬರಿಗೆ ಕರೆ ಮಾಡುವುದಿಲ್ಲ. ಹೀಗಾಗಿ, ಇಷ್ಟೊಂದು ಸಿಮ್‌ ಎಲ್ಲಿಂದ ಬಂತು ಎಂಬ ಬಗ್ಗೆಯೂತನಿಖೆನಡೆಯುತ್ತಿದೆ.

ಐಷಾರಾಮಿ ಜೀವನಕ್ಕಾಗಿ ದಂಧೆ

ಐಷಾರಾಮಿ ಜೀವನ ನಡೆಸುವುದಕ್ಕಾಗಿ ಕೆಲವು ಕಿರುತೆರೆ ನಟಿಯರು ಹನಿಟ್ರ್ಯಾಪ್‌ ದಂಧೆಗೆ ಇಳಿದಿದ್ದಾರೆ. ಅದರಲ್ಲಿ ಕೊಂಚ ಯಶಸ್ಸೂ ಕಂಡಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಶಾಸಕರು, ಅಧಿಕಾರಿಗಳ ಬಳಿ ಬೇಕಾದ ಕೆಲಸ ಮಾಡಿಸಿಕೊಂಡಿದ್ದಾರೆ. ಧಾರಾವಾಹಿ ನಿರ್ಮಿಸಬೇಕೆಂದು ಹಣ ಕೀಳಲಾಗಿದೆ.ಜೈಲು ಸೇರಿರುವ ಹನಿಟ್ರ್ಯಾಪ್‌ ಜಾಲದ ಪ್ರಮುಖ ಸದಸ್ಯನೊಬ್ಬ ಪರಪ್ಪನ ಅಗ್ರಹಾರದಲ್ಲಿ ಬೃಹತ್‌ ಮನೆ ಕಟ್ಟಿದ್ದಾನೆ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT