ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ಯಾಯ ಆರೋಪ ಎಷ್ಟು ಸರಿ: ಎಚ್‌ಡಿಡಿ

ವಿಧಾನಸಭೆಯಲ್ಲಿ ಸುದೀರ್ಘ ಚರ್ಚೆಗೆ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಒತ್ತಾಯ
Last Updated 15 ಜುಲೈ 2018, 19:17 IST
ಅಕ್ಷರ ಗಾತ್ರ

ಹುಬ್ಬಳ್ಳಿ/ ಬೆಳಗಾವಿ: ‘ರಾಜ್ಯದಲ್ಲಿ 25 ವರ್ಷ ಲಿಂಗಾಯತ ಸಮುದಾಯದ ಮುಖ್ಯಮಂತ್ರಿಗಳು ಆಧಿಕಾರದಲ್ಲಿದ್ದರು. ಹೀಗಿದ್ದೂ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಹೇಳುವುದು ಎಷ್ಟು ಸರಿ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಖಾರವಾಗಿ ಪ್ರಶ್ನಿಸಿದರು.

ಉತ್ತರ ಕರ್ನಾಟಕಕ್ಕೆ ಬಜೆಟ್‌ನಲ್ಲಿ ಅನ್ಯಾಯವಾಗಿದೆ ಎಂದು ಆಕ್ಷೇಪಗಳು ಕೇಳಿಬರುತ್ತಿರುವ ಸಮಯದಲ್ಲೇ ದೇವೇಗೌಡರು ಈ ಹೇಳಿಕೆ ನೀಡಿದ್ದಾರೆ. ‘ಈ ಭಾಗದ ಅಭಿವೃದ್ಧಿಯಾಗಿಲ್ಲ ಎಂದಾದರೆ ಇಲ್ಲಿಯವರೆಗೆ ಈ ಭಾಗಕ್ಕೆ ಹಂಚಿಕೆಯಾದ ಅನುದಾನವು ರಾಜಕಾರಣಿಗಳ ಮನೆಗೆ ಹೋಗಿದೆಯೇ’ ಎಂದು ತೀಕ್ಷ್ಣವಾಗಿ ಕೇಳಿದರು.

ಉತ್ತರ ಕರ್ನಾಟಕಕ್ಕೆ, ಯಾವ ಮುಖ್ಯಮಂತ್ರಿ ಕಾಲದಲ್ಲಿ ಎಷ್ಟು ಅನುದಾನ ಹಂಚಿಕೆಯಾಗಿದೆ ಎಂಬ ಬಗ್ಗೆ ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಮೂರು ದಿನಗಳ ಕಾಲ ಚರ್ಚೆಯಾಗಲಿ ಎಂದು ಭಾನುವಾರ ಇಲ್ಲಿ ಸವಾಲು ಹಾಕಿದರು.

ಉತ್ತರ ಕರ್ನಾಟಕಕ್ಕೆ ತಾರತಮ್ಯ ಮುಂದುವರಿದರೆ ಪ್ರತ್ಯೇಕ ರಾಜ್ಯ ಬೇಡಿಕೆ ಅನಿವಾರ್ಯವಾದೀತು ಎಂದು ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಶನಿವಾರ ಎಚ್ಚರಿಕೆ ನೀಡಿದ್ದರು. ಬಜೆಟ್‌ ವಿಷಯದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಎಚ್‌.ಕೆ.ಪಾಟೀಲ ಅವರೂ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು.

ಹುಬ್ಬಳ್ಳಿ, ಧಾರವಾಡ ಹಾಗೂ ಬೆಳಗಾವಿಯಲ್ಲಿ ಪ್ರತ್ಯೇಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವೇಗೌಡ ಅವರು, ‘ಲಿಂಗಾಯತ ಮುಖ್ಯಮಂತ್ರಿಗಳಾದ ಎಸ್‌. ನಿಜಲಿಂಗಪ್ಪ, ವೀರೇಂದ್ರ ಪಾಟೀಲ, ಎಸ್‌.ಆರ್. ಬೊಮ್ಮಾಯಿ, ಬಿ.ಎಸ್‌. ಯಡಿಯೂರಪ್ಪ, ಜಗದೀಶ ಶೆಟ್ಟರ್‌ ರಾಜ್ಯವನ್ನು 25 ವರ್ಷ ಆಳಿದ್ದಾರೆ’ ಎಂದು ನೆನಪಿಸಿದರು.

‘ರಾಮಕೃಷ್ಣ ಹೆಗಡೆ ಹಾಗೂ ದೇವರಾಜ ಅರಸು ತಲಾ ಎಂಟು ವರ್ಷ, ಎಸ್.ಎಂ.ಕೃಷ್ಣ ಹಾಗೂ ಸಿದ್ದರಾಮಯ್ಯ ತಲಾ 5 ವರ್ಷ ರಾಜ್ಯವನ್ನು ಆಳಿದ್ದಾರೆ. ಬಂಗಾರಪ್ಪ ಮತ್ತು ವೀರಪ್ಪ ಮೊಯಿಲಿ ಸೇರಿ 4 ವರ್ಷ ಆಳಿದ್ದಾರೆ. ಸದಾನಂದ ಗೌಡ 10 ತಿಂಗಳು, ದೇವೇಗೌಡರ ಮಗ (ಎಚ್‌.ಡಿ.ಕುಮಾರಸ್ವಾಮಿ) ಆಗ 20 ತಿಂಗಳು ಹಾಗೂ ಈಗ 2 ತಿಂಗಳು ಮೈತ್ರಿ ಕೂಟದಲ್ಲಿ ಆಳಿದ್ದಾರೆ. ಈ ಭಾಗಕ್ಕೆ ಅವರೂ ಏನೂ ಮಾಡಲಿಲ್ಲ; ನಾನೂ ಏನೂ ಮಾಡಲಿಲ್ಲ ಅಲ್ಲವೇ?’ ಎಂದು ಮಾರ್ಮಿಕವಾಗಿ ಕೇಳಿದರು.

1956ರಿಂದ ಈವರೆಗೆ ಉತ್ತರ ಕರ್ನಾಟಕಕ್ಕೆ ನೀಡಿರುವ ಅನುದಾನದ ಬಗ್ಗೆ ಶ್ವೇತಪತ್ರ ಹೊರಡಿಸುವಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಸೂಚಿಸುವುದಾಗಿಯೂ ಅವರು ಹೇಳಿದರು.

‘ಸಮ್ಮಿಶ್ರ ಸರ್ಕಾರ ಮಾಡಿರುವ ಸಾಲ ಮನ್ನಾದ ಲಾಭ ಶೇ 34ರಷ್ಟು ಒಕ್ಕಲಿಗರಿಗೆ ಹೋಗಿದೆ ಎಂದು ಟೀಕಿಸುವವರದ್ದು ನಾಲಿಗೆಯೇನ್ರಿ?’ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ‘ಸಾಲ ಮನ್ನಾದಿಂದ ಮೈಸೂರು ಭಾಗ ಅಥವಾ ಒಕ್ಕಲಿಗರಿಗೆ ಮಾತ್ರ ಅನುಕೂಲವಾಗಿದೆ ಎನ್ನುವುದು ಸರಿ ಅಲ್ಲ. ಬೆಳಗಾವಿಗೆ ಹೆಚ್ಚು ಅನುಕೂಲವಾಗಿದೆ. ಉತ್ತರ ಕರ್ನಾಟಕ ನಿರ್ಲಕ್ಷ್ಯ ಮಾಡಿಲ್ಲ’ ಎಂದರು.

ರಾಜೀನಾಮೆ ನೀಡುವುದಿಲ್ಲ: 'ಈ ಸಮ್ಮಿಶ್ರ ಸರ್ಕಾರ ಎಷ್ಟು ದಿನ ಬರುವುದೋ, ಕುಮಾರಸ್ವಾಮಿ ಯಾವಾಗ ರಾಜೀನಾಮೆ ನೀಡುತ್ತಾರೋ ಎಂದು ಬಿಜೆಪಿಯವರ ಜತೆ ಮಾಧ್ಯಮದವರೂ ಕಾಯುತ್ತಿದ್ದಾರೆ. ಆದರೆ, ಕುಮಾರಸ್ವಾಮಿ ರಾಜೀನಾಮೆ ನೀಡುವುದಿಲ್ಲ' ಎಂದರು.

ತೃತೀಯ ರಂಗ ಮೂರ್ತ ಸ್ವರೂಪಕ್ಕೆ ಬಂದಿಲ್ಲ: ‘ದೇಶದ ಒಂದೊಂದು ರಾಜ್ಯದಲ್ಲಿ ಒಂದೊಂದು ಪ್ರಾದೇಶಿಕ ಪಕ್ಷಗಳ ಶಕ್ತಿ ಹೆಚ್ಚಿದೆ. ಬಿಜೆಪಿ ಜತೆ ಕೆಲವು, ಕಾಂಗ್ರೆಸ್‌ ಜತೆ ಇನ್ನು ಕೆಲವು ಪಕ್ಷಗಳು ಗುರುತಿಸಿಕೊಂಡಿವೆ. ಇನ್ನು ಕೆಲವು ಯಾರೊಂದಿಗೂ ಗುರುತಿಸಿಕೊಂಡಿಲ್ಲ. ಹೀಗಾಗಿ ಚುನಾವಣೆಗೂ ಮೊದಲು ತೃತೀಯರಂಗದ ಸ್ಪಷ್ಟ ಚಿತ್ರಣ ಸಿಗುವುದು ಕಷ್ಟ’ ಎಂದು ದೇವೇಗೌಡ ಹೇಳಿದರು.

‘ರಾಜಕೀಯವಾಗಿ ನನಗೆ ಹಿರಿತನವಿದ್ದರೂ ತೃತೀಯ ರಂಗದ ನೇತೃತ್ವ ವಹಿಸಿಕೊಳ್ಳುವಷ್ಟು ಶಕ್ತಿ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ ಜೊತೆ ಸೇರಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿರುವುದರಿಂದ ಕಾಂಗ್ರೆಸ್‌ ಬಿಟ್ಟು ಬೇರೆಡೆ ಹೋಗಲು ಆಗುವುದಿಲ್ಲ’ ಎಂದರು.

’ರಾಜ್ಯದ ಸಮಸ್ಯೆ ನೋಡಿ ಕಣ್ಣೀರಿಟ್ಟರು...’

ಬೆಳಗಾವಿ: ‘ರಾಜ್ಯದಲ್ಲಿರುವ ಸಮಸ್ಯೆಗಳನ್ನು ನೋಡಿ ಮುಖ್ಯಮಂತ್ರಿ ಕುಮಾರಸ್ವಾಮಿ ನೋವಿನಿಂದ ಕಣ್ಣೀರಿಟ್ಟಿದ್ದಾರೆ’ ಎಂದು ಎಚ್‌.ಡಿ. ದೇವೇಗೌಡ ತಿಳಿಸಿದರು.

‘ಬೆಂಗಳೂರಿನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ನಾನೂ ಇದ್ದೆ. ಕರಾವಳಿಯವರು ಕುಮಾರಸ್ವಾಮಿ ತಮ್ಮ ಮುಖ್ಯಮಂತ್ರಿಯಲ್ಲ ಎಂದು ಹೇಳಿದ್ದಾಗಿ ಮಾಧ್ಯಮದಲ್ಲಿ ಪ್ರಸಾರವಾಗಿದ್ದನ್ನು ಉಲ್ಲೇಖಿಸಿ, ಅವರು ಕಣ್ಣೀರು ಹಾಕಿದರು’ ಎಂದು ಹೇಳಿದರು.

ಪತ್ರಕ್ಕೆ ಮಹತ್ವ ಬೇಡ

ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಮುಖ್ಯಮಂತ್ರಿಗೆ ಪದೇ ಪದೇ ಪತ್ರ ಬರೆಯುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿ– ಜೆಡಿಎಸ್‌ ಸಮ್ಮಿಶ್ರ ಸರ್ಕಾರವಿದ್ದಾಗ ನನ್ನ ಮಗನಿಗೆ (ಕುಮಾರಸ್ವಾಮಿ) ನಾನೇ ಪತ್ರ ಬರೆದಿರಲಿಲ್ಲವೇ, ಧರಣಿಯನ್ನೇ ನಡೆಸಿರಲಿಲ್ಲವೇ?’ ಎಂದು ಕೇಳಿ ನಕ್ಕರು. ‘ಪತ್ರದ ವಿಚಾರಕ್ಕೆ ಅಷ್ಟೊಂದು ಮಹತ್ವ ಕೊಡಬೇಕಾಗಿಲ್ಲ’ ಎಂದೂ ಹೇಳಿದರು.


‘ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಶೀಘ್ರವೇ ತೀರ್ಪು ಹೊರಬೀಳುವ ಸಾಧ್ಯತೆ ಇದೆ. ನಮಗೆ ಎಷ್ಟು ನೀರು ಹಂಚಿಕೆ ಮಾಡಲಾಗುತ್ತದೆ ಎನ್ನುವುದನ್ನು ನೋಡಬೇಕಾಗುತ್ತದೆ. ಒಂದು ವೇಳೆ ರಾಜ್ಯಕ್ಕೆ ಅನ್ಯಾಯವಾದರೆ ಹೋರಾಟ ನಡೆಸಲಾಗುವುದು’ ಎಂದರು.

ಚರ್ಚೆಗೆ ಸಿದ್ಧ: ಕೋನರಡ್ಡಿ

ಬೆಳಗಾವಿ: ‘ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ, ಹುಬ್ಬಳ್ಳಿಗೆ ಕಾನೂನು ವಿಶ್ವವಿದ್ಯಾಲಯ, ಧಾರವಾಡದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಯಾದುದು ಕುಮಾರಸ್ವಾಮಿ ಅವರಿಂದಲೇ. ದೊಡ್ಡ ಪ್ರಮಾಣದಲ್ಲಿ ರೈತರ ಸಾಲ ಮನ್ನಾ ಮಾಡಿದ್ದರಿಂದ, ರೈತರು ಜೆಡಿಎಸ್ ಕಡೆ ಹೋಗಿ ಬಿಡುತ್ತಾರೆ ಎಂಬ ಆತಂಕ ಬಿಜೆಪಿಯವರದು. ಹೀಗಾಗಿ ಅವರು ಅಪಪ್ರಚಾರ ನಡೆಸುತ್ತಿದ್ದಾರೆ’ ಎಂದು ಜೆಡಿಎಸ್‌ ಮುಖಂಡ ಎನ್‌.ಎನ್‌.ಕೋನರಡ್ಡಿಬೆಳಗಾವಿಯಲ್ಲಿ ಹೇಳಿದರು.

‘ಉತ್ತರ ಕರ್ನಾಟಕಕ್ಕೆ ಏನು ಕೊಟ್ಟಿದ್ದೇವೆ ಎನ್ನುವ ಬಹಿರಂಗ ಚರ್ಚೆಗೆ ಸಿದ್ಧವಾಗಿದ್ದೇವೆ. ಸಾಲ ಮನ್ನಾ ಮಾಡಲು ಕೇಂದ್ರದಿಂದ ಸಾಧ್ಯವಾಗಿಲ್ಲವೇಕೆ ಎಂದು ಪಕ್ಷದ ಕಾರ್ಯಕರ್ತರು ಬಿಜೆಪಿಯವರನ್ನು ಪ್ರಶ್ನಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT