ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Madhya Pradesh Election Results: ಮಧ್ಯಪ್ರದೇಶದಲ್ಲಿ ಬಿಜೆಪಿ ‘ಚಮತ್ಕಾರ’

Published 3 ಡಿಸೆಂಬರ್ 2023, 22:49 IST
Last Updated 3 ಡಿಸೆಂಬರ್ 2023, 22:49 IST
ಅಕ್ಷರ ಗಾತ್ರ

ನವದೆಹಲಿ: ಪ್ರಬಲ ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿ ನಿಂತ ಬಿಜೆಪಿಯು ಹಿಂದಿ ಸೀಮೆಯ ಮಧ್ಯಪ್ರದೇಶದಲ್ಲಿ ‘ಚಮತ್ಕಾರ’ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಮಲ ‍ಪಡೆಯ ಅಶ್ವಮೇಧ ಯಾಗದ ಕುದುರೆಯು ‍ಪ್ರಚಂಡ ದಿಗ್ವಿಜಯ ಸಾಧಿಸಿದೆ. ರಾಜಕೀಯ ನಿವೃತ್ತಿಯ ಅಂಚಿನಲ್ಲಿರುವ ‘ಹಳೆ ಹುಲಿ’ಗಳಾದ ಕಮಲನಾಥ್‌–ದಿಗ್ವಿಜಯ್‌ ಸಿಂಗ್‌ ಅವರ ಮಾತು ನಂಬಿ ಅಮಿತ ವಿಶ್ವಾಸವಿಟ್ಟು ಕಣಕ್ಕೆ ಧುಮುಕಿದ್ದ ಕಾಂಗ್ರೆಸ್‌ ಅದಕ್ಕೆ ತಕ್ಕ ಬೆಲೆಯನ್ನೇ ತೆತ್ತಿದೆ.

19 ವರ್ಷಗಳ ಆಡಳಿತದ ಬಳಿಕ ಬಿಜೆಪಿ ಪಾಲಿಗೆ ಆಡಳಿತ ವಿರೋಧಿ ಭಾವನೆ ಬಹುದೊಡ್ಡ ಸವಾಲು ಆಗಿತ್ತು. ಇದರ ನಡುವೆಯೂ ರಾಷ್ಟ್ರೀಯ ನಾಯಕತ್ವ, ರಾಜಕೀಯ ಜಾಣ್ಮೆ, ಸಂಘಟನಾ ಸಾಮರ್ಥ್ಯ, ಸಮರತಂತ್ರ ಹಾಗೂ ಗೆಲುವಿನ ಹಸಿವನ್ನು ಅಗ್ನಿಪರೀಕ್ಷೆಗೆ ಒಡ್ಡಿದ ಬಿಜೆಪಿಯು ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. 

ಆಡಳಿತ ವಿರೋಧಿ ಭಾವನೆಯನ್ನು ಅಡಗಿಸುವಷ್ಟು ಪ್ರಖರ ಸಾಧನೆಯನ್ನು ಬಿಜೆಪಿ ಸರ್ಕಾರ ಮಾಡಿರಲಿಲ್ಲ. ಮೋದಿ ಅವರಂತಹ ಪ್ರಬಲ ವರ್ಚಸ್ಸು ಶಿವರಾಜ ಸಿಂಗ್ ಚೌಹಾಣ್ ಅವರಿಗೆ ಇಲ್ಲ. ಹಿಂದುತ್ವದ ಗಟ್ಟಿ ನೆಲದಲ್ಲಿ ಹೊಸ ಮುಖ್ಯಮಂತ್ರಿಯನ್ನು ಕಾಣುವ ಹಂಬಲದಲ್ಲಿ ಇಲ್ಲಿನ ಮತದಾರರು ಇದ್ದರು. ಇದರ ಸುಳಿವರಿತ ಬಿಜೆಪಿ ಹೈಕಮಾಂಡ್‌ ‘ಮುಖ್ಯಮಂತ್ರಿ ಅಭ್ಯರ್ಥಿ’ಯನ್ನು ಘೋಷಿಸುವ ಗೋಜಿಗೆ ಹೋಗಲಿಲ್ಲ. ಇದು ಫಲ ಕೊಟ್ಟಿತು. ಜತೆಗೆ, ಚೌಹಾಣ್‌ ಅವರೂ ಇದನ್ನು ಪ್ರತಿಷ್ಠೆಯನ್ನಾಗಿ ಸ್ವೀಕರಿಸಿದರು. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ದಿನಕ್ಕೈದು ರ‍್ಯಾಲಿಗಳಲ್ಲಿ ಭಾಗಿಯಾಗಿ ಮತದಾರರಲ್ಲಿ ವಿನೀತರಾಗಿ ಭಾವನಾತ್ಮಕವಾಗಿ ಮತ ಬೇಡಿದರು. ಮಹಿಳೆಯರ ಖಾತೆಗೆ ಪ್ರತಿ ತಿಂಗಳು ₹1,250 ವರ್ಗಾಯಿಸುವ ‘ಲಾಡ್ಲಿ ಬೆಹನಾ ಯೋಜನೆ’ಯೂ ಪಕ್ಷಕ್ಕೆ ಭಾರಿ ಅನುಕೂಲ ಮಾಡಿಕೊಟ್ಟಿತು. ಕಾಂಗ್ರೆಸ್‌ನ ‘ಗ್ಯಾರಂಟಿ’ಗಿಂತ ಬಿಜೆಪಿಯ ಈ ‘ಕಲ್ಯಾಣ’ ಯೋಜನೆ ಮಹಿಳೆಯರ ಮನ ಗೆದ್ದಿತು. ಚುನಾವಣೆಗೆ ಮುನ್ನ ಧಾರ್ಮಿಕ ಕೇಂದ್ರಗಳಿಗೆ ನೀಡಿದ ಭರಪೂರ ಅನುದಾನವೂ ಹಿಂದೂ ಮತಗಳ ಧ್ರುವೀಕರಣಕ್ಕೆ ಭಾರಿ ಕೊಡುಗೆ ನೀಡಿತು. 

ಬಿಜೆಪಿ ಶಾಸಕರ ಜನಪ್ರಿಯತೆ ನಶಿಸಿತ್ತು. ಹೊಸಬರಿಗೆ ಟಿಕೆಟ್ ನೀಡುವ ಮೂಲಕ ಈ ವ್ಯತಿರಿಕ್ತ ಅಂಶವನ್ನು ಪಕ್ಷ ಮೆಟ್ಟಿ ನಿಂತಿತು. ಪಕ್ಷದ ಪಾಲಿಗೆ ಕಷ್ಟಕರವಾಗಿದ್ದ ಕ್ಷೇತ್ರಗಳಲ್ಲೇ ಕೇಂದ್ರದ ಮೂವರು ಸಚಿವರು ಹಾಗೂ ಸಂಸದರನ್ನು ಹುರಿಯಾಳುಗಳನ್ನಾಗಿ ಮಾಡಿ ಪಕ್ಷ ಹೊಸ ಕಸರತ್ತು ಮಾಡಿತು. ಈ ಪ್ರಯೋಗ ಪಕ್ಷಕ್ಕೆ ಭರಪೂರ ಫಸಲನ್ನು ನೀಡಿತು. ಈ ಪ್ರಭಾವಿ ನಾಯಕರು ತಾವು ಗೆಲ್ಲುವುದರ ಜತೆಗೆ ಅಕ್ಕಪಕ್ಕದ ಕ್ಷೇತ್ರದ ಅಭ್ಯರ್ಥಿಗಳನ್ನೂ ‘ದಡ’ ಮುಟ್ಟಿಸಿದರು. ರಾಮಮಂದಿರ ಉದ್ಘಾಟನೆಯ ದಿನಾಂಕ ನಿಗದಿ ಮಾಡಿದ ತಂತ್ರ ಸಹ ಪಕ್ಷಕ್ಕೆ ಮತ ತಂದುಕೊಡುವಲ್ಲಿ ಯಶಸ್ವಿಯಾಯಿತು. ಉತ್ತರಪ್ರದೇಶದ ಅಂಚಿನ ಬುಂದೇಲ್‌ಖಂಡ ಭಾಗದಲ್ಲಿ ಇದೇ ಪ್ರಮುಖ ಚುನಾವಣಾ ವಿಷಯವಾಗಿತ್ತು. 

2018ರ ಚುನಾವಣೆಯಲ್ಲಿ ‘ಕೈ’ ಗೆಲುವಿಗೆ ದೊಡ್ಡ ಕೊಡುಗೆ ನೀಡಿದವರು ಜ್ಯೋತಿರಾದಿತ್ಯ ಸಿಂಧಿಯಾ. ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಸಿಂಧಿಯಾ ಅವರನ್ನು ಒಂದಾಗಿ ಹಣಿದವರು ಕಮಲನಾಥ್‌– ದಿಗ್ವಿಜಯ್‌ ಸಿಂಗ್‌ ಜೋಡಿ. ಗ್ವಾಲಿಯರ್‌–ಚಂಬಲ್‌ ಕಣಿವೆಯಲ್ಲಿ ವರ್ಚಸ್ಸು ಹೊಂದಿರುವ ನಾಯಕ ಅವರು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಮತಗಳನ್ನು ಬಿಜೆಪಿಗೆ ವರ್ಗಾಯಿಸುವಲ್ಲಿ ಅವರು ‘ಪ್ರಚಂಡ’ ಪಾತ್ರ ವಹಿಸಿದರು. 

ರಾಜ್ಯದಲ್ಲಿ ‘ಭಾರತ ಜೋಡೋ ಯಾತ್ರೆ’ಯ ಅಪಾರ ಯಶಸ್ಸಿನ ಬಳಿಕ ಮೇಲೆದ್ದ ಕಾಂಗ್ರೆಸ್‌ ಪಾಳಯವು ಚುನಾವಣೆಗೆ ಮುನ್ನವೇ ಭ್ರಮೆಯಲ್ಲಿ ತೇಲಾಡಿತು. ಕರ್ನಾಟಕದ ಮಾದರಿಯಲ್ಲೇ ‘ಗ್ಯಾರಂಟಿ’ಗಳು ಗೆಲುವಿನ ದಡ ಮುಟ್ಟಿಸಲಿದೆ ಎಂಬ ಹುಸಿ ನಂಬಿಕೆಯಲ್ಲೇ ರಾಜ್ಯ ನಾಯಕರು ಕಾಲಹರಣ ಮಾಡಿದರು. ಪಕ್ಷ ಸಂಘಟನೆಗಾಗಿ ನಾಲ್ಕೈದು ವರ್ಷಗಳಿಂದ ಒಂದಾಗಿ ಕೆಲಸ ಮಾಡಿದ್ದ ಕಮಲನಾಥ್‌ ಹಾಗೂ ದಿಗ್ವಿಜಯ್‌ ಸಿಂಗ್‌ ಅವರು ಚುನಾವಣೆ ಘೋಷಣೆಯಾದ ಬಳಿಕ ‘ಅಂತರ’ ಕಾಯ್ದುಕೊಂಡರು. ಕಮಲನಾಥ್‌ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದ್ದರಿಂದ ಸಿಂಗ್‌ ಮುನಿಸಿಕೊಂಡರು. ಚುನಾವಣೆ ವೇಳೆ ಪೂರ್ಣ ಮನಸ್ಸಿನಿಂದ ಕೆಲಸ ಮಾಡಲಿಲ್ಲ. ಕಾಂಗ್ರೆಸ್‌ ನಾಯಕರು ‘ಇಂಡಿಯಾ’ ಒಕ್ಕೂಟದ ಪಾಲುದಾರ ಪಕ್ಷಗಳನ್ನು ಹತ್ತಿರಕ್ಕೂ ಸೇರಿಸಿಕೊಳ್ಳಲಿಲ್ಲ.

ಬಿಜೆಪಿಗೆ ನಕಾರಾತ್ಮಕ ಆಗಬಹುದಾದ ಹಲವು ಅಂಶಗಳ ಬಗ್ಗೆ ಗಟ್ಟಿ ಧ್ವನಿಯಲ್ಲಿ ಮಾತನಾಡುವ ಛಾತಿಯನ್ನೂ ‘ಕೈ’ ನಾಯಕರು ತೋರಲಿಲ್ಲ. ಕಾಂಗ್ರೆಸ್‌ನ ‘ತಾರಾ’ ನಾಯಕರಾದ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಚಾರ ಭಾಷಣಗಳು ಹಾಗೂ ಭರವಸೆಗಳು ಯುವ ಮತದಾರರ ಮನ ಗೆಲ್ಲಲಿಲ್ಲ. ಹಿಂದಿ ಹೃದಯ ಭಾಗದಲ್ಲಿ ‘ಗೇಮ್‌ ಚೇಂಜರ್‌’ ಆಗಲಿದೆ ಎಂದು ‘ಕೈ’ ನಾಯಕರು ಭಾವಿಸಿದ್ದ ‘ಜಾತಿ ಗಣತಿ’ಯ ಮಾತಿಗೆ ಮತದಾರರು ಮರುಳಾಗಲಿಲ್ಲ. ಪರಿಣಾಮವಾಗಿ, ದಶಕಗಳ ಕಾಲ ರಾಜ್ಯವನ್ನು ಆಳಿದ್ದ ಒಂದು ಕಾಲದ ದೈತ್ಯ ಪಕ್ಷ ಇದೀಗ ಸೋತು ಸುಣ್ಣವಾಗಿ ಮಲಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT