ನವದೆಹಲಿ: ಪಶ್ಚಿಮ ಘಟ್ಟದ 108 ಕಿ.ಮೀ. ದಟ್ಟ ಕಾನನಗಳ ನಡುವೆ ಸಾಗುವ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ನಿರ್ಮಾಣಕ್ಕೆ ₹16,435 ಕೋಟಿ ವೆಚ್ಚವಾಗಲಿದೆ ಎಂದು ರೈಲ್ವೆ ಇಲಾಖೆ ಅಂದಾಜಿಸಿದೆ.

ನೈರುತ್ಯ ರೈಲ್ವೆಯು ಪರಿಸರ ಪರಿಣಾಮಗಳ ಸಮೀಕ್ಷೆ ನಡೆಸಿ ಯೋಜನೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿ ರೈಲ್ವೆ ಇಲಾಖೆಗೆ ಸಲ್ಲಿಸಿದೆ. ಪರಿಸರವಾದಿಗಳ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಯೋಜನೆಯ ವಿನ್ಯಾಸ ಬದಲಿಸಲಾಗಿದ್ದು, ವಿದ್ಯುದ್ದೀಕರಣದ ಜೋಡಿ ಹಳಿ ನಿರ್ಮಾಣ ಮಾಡಲಾಗುತ್ತದೆ.

ಯೋಜನೆಯ ಸಮಗ್ರ ಪರಿಣಾಮದ ಮೌಲ್ಯಮಾಪನ ನಡೆಸಿ ವರದಿ ಸಲ್ಲಿಸುವಂತೆ ಡೆಹ್ರಾಡೂನ್ನ ರಾಷ್ಟ್ರೀಯ ವನ್ಯಜೀವಿ ಸಂಸ್ಥೆಗೆ ರೈಲ್ವೆ ಇಲಾಖೆ ಸೂಚಿಸಿದೆ. ಸಂಸ್ಥೆಯು ಮುಂದಿನ ವರ್ಷ ಜೂನ್ ತಿಂಗಳಲ್ಲಿ ವರದಿ ಸಲ್ಲಿಸುವ ನಿರೀಕ್ಷೆ ಇದೆ. ಸಂಸ್ಥೆಯು ವರದಿ ಸಲ್ಲಿಸಿದ ಬಳಿಕ ಡಿಪಿಆರ್ನಲ್ಲಿ ಇನ್ನಷ್ಟು ಪರಿಷ್ಕರಣೆ ಮಾಡಲಾಗುತ್ತದೆ. ಆ ಬಳಿಕ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಡಿಪಿಆರ್ ಸಲ್ಲಿಸಲಾಗುತ್ತದೆ. ಅಲ್ಲಿ ಅನುಮೋದನೆ ಸಿಕ್ಕ ನಂತರ ಕಾಮಗಾರಿ ನಡೆಸಲಾಗುತ್ತದೆ ಎಂದು ರೈಲ್ವೆ ಸಚಿವಾಲಯದ ಮೂಲಗಳು ತಿಳಿಸಿವೆ.

ಕರಾವಳಿ ಕರ್ನಾಟಕ ಹಾಗೂ ಕೇಂದ್ರ ಕರ್ನಾಟಕ ನಡುವೆ ತಡೆರಹಿತ ಸಂಪರ್ಕಕ್ಕೆ ಅನುವು ಮಾಡಿಕೊಡುವ ಯೋಜನೆಯ ಅನುಷ್ಠಾನದಲ್ಲಿ ಸಹಭಾಗಿತ್ವ ವಹಿಸಲು ಜಿಂದಾಲ್ ಕಂಪನಿ ಉತ್ಸುಕತೆ ತೋರಿದೆ. ಈ ಸಂಬಂಧ ರೈಲ್ವೆ ಸಚಿವಾಲಯದೊಂದಿಗೆ ಸಂಸ್ಥೆ ಮಾತುಕತೆ ನಡೆಸಿದೆ ಎಂದು ಮೂಲಗಳು ಹೇಳಿವೆ.

ಯೋಜನೆಯ ತ್ವರಿತ ಅನುಷ್ಠಾನಕ್ಕೆ ಸಮಾಲೋಚಕರ ನೇಮಕ ಸೇರಿದಂತೆ ವಿವಿಧ ಉಪಕ್ರಮಗಳನ್ನು ಕೈಗೊಳ್ಳುವಂತೆ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಒತ್ತಡ ಹೇರಿದ್ದಾರೆ.

ಸಮಗ್ರ ಸಾರಿಗೆ ಯೋಜನೆ ವರದಿ ಸಲ್ಲಿಕೆ:

ಇನ್ನೊಂದೆಡೆ, ರಾಷ್ಟ್ರೀಯ ವನ್ಯಜೀವಿ ಮಂಡಳಿಯ ನಿರ್ದೇಶನದ ಹಿನ್ನೆಲೆಯಲ್ಲಿ ಸಮಗ್ರ ಸಾರಿಗೆ ಯೋಜನೆ ಸಿದ್ಧಪಡಿಸಲು ಐಡೆಕ್ ಸಂಸ್ಥೆಗೆ ರಾಜ್ಯ ಸರ್ಕಾರ ಸೂಚಿಸಿತ್ತು. ಸಂಸ್ಥೆಯು ಲೋಕೋಪಯೋಗಿ ಇಲಾಖೆಗೆ ವರದಿ ಸಲ್ಲಿಸಿತ್ತು. ಈ ವರದಿಯಲ್ಲಿ ಕೆಲವೊಂದು ಬದಲಾವಣೆ ಮಾಡುವಂತೆ ನೈರುತ್ಯ ರೈಲ್ವೆ ಸೂಚಿಸಿತ್ತು. ಪರಿಷ್ಕೃತ ವರದಿಯನ್ನು ಐಡೆಕ್ ಸಂಸ್ಥೆಯು ಮೂಲಸೌಕರ್ಯ ಇಲಾಖೆಗೆ ಇತ್ತೀಚೆಗೆ ಸಲ್ಲಿಸಿದೆ.

ವಿನ್ಯಾಸ ಬದಲಿಸಲು ಸೂಚಿಸಿದ್ದ ವನ್ಯಜೀವಿ ಮಂಡಳಿ:

ಈ ಯೋಜನೆಯಿಂದಾಗಿ ಎರಡು ಲಕ್ಷ ಮರಗಳ ಹನನವಾಗಲಿದೆ ಎಂದು ಪರಿಸರವಾದಿಗಳು ಕಳವಳ ವ್ಯಕ್ತಪಡಿಸಿದ್ದರು. ಯೋಜನೆಗೆ ವನ್ಯಜೀವಿ ಅನುಮೋದನೆ ನೀಡುವಂತೆ ಕರ್ನಾಟಕ ಸರ್ಕಾರವು ಕೇಂದ್ರ ಪರಿಸರ ಸಚಿವಾಲಯಕ್ಕೆ 2017ರಲ್ಲಿ ಪ್ರಸ್ತಾವ ಸಲ್ಲಿಸಿತ್ತು. ಈ ಮಾರ್ಗ ನಿರ್ಮಾಣಕ್ಕೆ 595.64 ಹೆಕ್ಟೇರ್ ಅರಣ್ಯ ಬಳಕೆಯಾಗಲಿದೆ ಎಂದು ರಾಜ್ಯ ಸರ್ಕಾರ ಪ್ರಸ್ತಾಪಿಸಿತ್ತು. ಶರಾವತಿ ವನ್ಯಜೀವಿ ಧಾಮ, ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಈ ಮಾರ್ಗ ಹಾದು ಹೋಗಲಿದೆ ಎಂದೂ ಉಲ್ಲೇಖಿಸಿತ್ತು.

ಈ ಮಾರ್ಗ ನಿರ್ಮಾಣಕ್ಕೆ ಕೇಂದ್ರ ಪರಿಸರ ಇಲಾಖೆಯ ತಜ್ಞರ ಸಮಿತಿಯ ಶಿಫಾರಸಿನ ಪ್ರಕಾರವೇ ರೈಲ್ವೆ ಇಲಾಖೆ ಹೊಸ ಪ್ರಸ್ತಾವನೆ ಸಲ್ಲಿಸಬೇಕು ಎಂದು ರಾಷ್ಟ್ರೀಯ ವನ್ಯಜೀವಿ ಮಂಡಳಿ ತಾಕೀತು ಮಾಡಿತ್ತು.

ದಟ್ಟ ಅರಣ್ಯಗಳ ನಡುವೆ ಸಾಗುವ ಈ ಯೋಜನೆಗೆ ಈಗಿನ ಸ್ವರೂಪದಲ್ಲಿ ಯೋಜನೆಗೆ ಒಪ್ಪಿಗೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದ ತಜ್ಞರ ಸಮಿತಿ, ಪರಿಸರಕ್ಕೆ ಹಾನಿಯಾಗದಂತೆ ಯೋಜನೆ ಅನುಷ್ಠಾನಕ್ಕೆ ರೈಲ್ವೆ ಇಲಾಖೆಯು ಹೊಸ ಪ್ರಸ್ತಾವನೆ ಸಿದ್ಧಪಡಿಸುವಂತೆ ಸಲಹೆ ನೀಡಿತ್ತು. ಈ ಯೋಜನೆ ಅನುಷ್ಠಾನ ಮಾಡಿದರೆ ಅಪಾರ ಪ್ರಮಾಣದ ಕಾಡು ನಾಶವಾಗಲಿದೆ ಎಂದು 2022ರ ಹುಲಿ ಗಣತಿ ವರದಿಯಲ್ಲೂ ಎಚ್ಚರಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.