ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಡಾ ಹಗರಣ ಸಾಬೀತಾದರೆ, ಬೊಮ್ಮಾಯಿ ಜೈಲಿಗೆ ಹೋಗಬೇಕಾಗುತ್ತದೆ: ಚಲುವರಾಯಸ್ವಾಮಿ

Published : 5 ಆಗಸ್ಟ್ 2024, 7:52 IST
Last Updated : 5 ಆಗಸ್ಟ್ 2024, 7:52 IST
ಫಾಲೋ ಮಾಡಿ
Comments

ಮಂಡ್ಯ: ’ಮೈಸೂರಿನ ’ಮುಡಾ’ ಹಗರಣಕ್ಕೂ ಸಿದ್ದರಾಮಯ್ಯನವರಿಗೂ ಸಂಬಂಧವೇ ಇಲ್ಲ. ಹಗರಣ ನಡೆದಿರುವುದು ಸಾಬೀತಾದರೆ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಅಂದಿನ ಮುಡಾ ಅಧ್ಯಕ್ಷ ಮೊದಲು ಜೈಲಿಗೆ ಹೋಗಬೇಕಾಗುತ್ತದೆ‘ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು.

ಆ.6ರಂದು ನಡೆಯಲಿರುವ ಕಾಂಗ್ರೆಸ್‌ ಜನಾಂದೋಲನ ಸಮಾವೇಶದ ಸ್ಥಳ ಪರಿಶೀಲನೆಯನ್ನು ಸೋಮವಾರ ನಡೆಸಿದ ಸಂದರ್ಭ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಕ್ರಿಮಿನಲ್‌ ಅಪರಾಧ

135 ಸ್ಥಾನಗಳನ್ನು ಗೆದ್ದು, ಜನರಿಂದ ಆಯ್ಕೆಯಾಗಿ ಬಂದಿರುವ ‘ಕಾಂಗ್ರೆಸ್‌ ಸರ್ಕಾರವನ್ನು ತೆಗೀತೀವಿ‌’ ಎಂದು ಬಿಜೆಪಿ–ಜೆಡಿಎಸ್‌ ನಾಯಕರು ಹೇಳಿಕೆ ಕೊಡುತ್ತಿದ್ದಾರೆ. ಹೀಗ ಹೇಳುವುದೇ ಕ್ರಿಮಿನಲ್‌ ಅಪರಾಧ. ಈ ಆರೋಪದಡಿ ಇವರನ್ನು ಜೈಲಿಗೆ ಹಾಕಬಹುದು. ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಎಚ್‌.ಡಿ.ಕೆ. ಆಸ್ತಿಯ ಲೆಕ್ಕ ಕೊಡಲಿ

ಡಿ.ಕೆ.ಶಿವಕುಮಾರ್‌ ಅವರು ರಾಜಕಾರಣಕ್ಕೂ ಬರುವ ಮುಂಚೆಯೇ ಬ್ಯುಸಿನೆಸ್‌ ಮಾಡುತ್ತಿದ್ದರು. ಅವರು ಗಳಿಸಿರುವ ಆಸ್ತಿಗೆ ’ಲೀಗಲ್‌ ಡಾಕ್ಯುಮೆಂಟ್‌‘ ಇವೆ. ಆದರೆ, ಎಚ್‌.ಡಿ.ಕುಮಾರಸ್ವಾಮಿ ಯಾವುದೇ ಬ್ಯುಸಿನೆಸ್‌ ಇಲ್ಲದೇ ಏರ್‌ಪೋರ್ಟ್‌ ರಸ್ತೆ, ನೆಲಮಂಗಲ ರಸ್ತೆ, ಕೆಂಗೇರಿ ರಸ್ತೆಗಳಲ್ಲಿ ಅಪಾರ ಆಸ್ತಿ ಮಾಡಿದ್ದಾರೆ. ಸಿನಿಮಾ ರಂಗದಿಂದ ಇಷ್ಟೊಂದು ಆಸ್ತಿ ಮಾಡಲು ಸಾಧ್ಯವೇ? ಕುಮಾರಸ್ವಾಮಿ ಸಿನಿಮಾ ರಂಗದಲ್ಲಿ ದುಡ್ಡು ಮಾಡಿದ್ದರೆ ಲೆಕ್ಕ ತೋರಿಸಲಿ ಎಂದು ಸವಾಲು ಹಾಕಿದರು.

ಕುಮಾರಸ್ವಾಮಿ ಮಳೆ ಮತ್ತು ನೆರೆಯಿಂದ ಹಾನಿಯಾದ ಪ್ರದೇಶಗಳಿಗೆ ಭೇಟಿ ಕೊಡುವುದು ದೊಡ್ಡಸ್ತಿಕೆ ಅಲ್ಲ. ಕೇಂದ್ರ ಸರ್ಕಾರದಿಂದ ಎನ್‌ಡಿಆರ್‌ಎಫ್‌ ಅಡಿ ಪರಿಹಾರ ಕೊಡಿಸಬೇಕು. ರಾಜಕೀಯ ಕೆಸರೆರಚಾಟ ನಿಲ್ಲಿಸಿ, ಅಭಿವೃದ್ಧಿ ಬಗ್ಗೆ ಗಮನಹರಿಸಲಿ ಎಂದು ತಿರುಗೇಟು ನೀಡಿದರು.

ಸಚಿವರ ಬದಲಾವಣೆ ಇಲ್ಲ

ಸಚಿವರಿಗೆ ಕೋಕ್‌ ಕೊಡುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ’ಸಚಿವರು ಇನ್ನೂ ಉತ್ತಮವಾಗಿ ಕೆಲಸ ಮಾಡಬೇಕು ಎಂದು ವರಿಷ್ಠರು ಸೂಚಿಸಿದ್ದಾರೆ. ಯಾವುದೇ ಸಚಿವರನ್ನು ಬದಲಾವಣೆ ಮಾಡುವ ಬಗ್ಗೆ ಚರ್ಚೆಯಾಗಿಲ್ಲ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರು ನಿರ್ಧಾರ ಕೈಗೊಳ್ಳುತ್ತಾರೆ‘ ಎಂದರು.

ಭತ್ತದ ನಾಟಿ ಕಾರ್ಯಕ್ಕೆ ತೊಂದರೆಯಿಲ್ಲ

ಕೆಆರ್‌ಎಸ್‌ ಅಣೆಕಟ್ಟೆ ಭರ್ತಿಯಾಗಿರುವುದರಿಂದ ಜುಲೈ 10ರಿಂದ ನಾಲೆಗಳಿಗೆ ನಿರಂತರವಾಗಿ ನೀರು ಹರಿಸುತ್ತಿದ್ದೇವೆ. ಭತ್ತದ ನಾಟಿ ಕಾರ್ಯಕ್ಕೆ ತೊಂದರೆಯಾಗದಂತೆ ನೀರು ಬಿಡುತ್ತೇವೆ. ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು.

ಎರಡನೇ ಬೆಳೆಗೂ ನೀರು ಕೊಡಬೇಕು ಅನ್ನೋದು ನಮ್ಮ ನಿರ್ಧಾರ. ಹೀಗಾಗಿ ಕಟ್ಟು ಪದ್ಧತಿಯಲ್ಲಿ ನೀರು ಹರಿಸುವುದರಿಂದ ಕೃಷಿ ಚಟುವಟಿಕೆಗೆ ಯಾವುದೇ ರೀತಿ ತೊಂದರೆಯಾಗುವುದಿಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT