ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ಬಾಹಿರ ವೈದ್ಯಕೀಯ ಪಿಜಿ ಸೀಟು ಹಂಚಿಕೆ: ಕೆಇಎಗೆ ₹1 ಲಕ್ಷ ದಂಡ

Published 24 ಫೆಬ್ರುವರಿ 2024, 11:45 IST
Last Updated 24 ಫೆಬ್ರುವರಿ 2024, 11:45 IST
ಅಕ್ಷರ ಗಾತ್ರ

ಬೆಂಗಳೂರು: ವೈದ್ಯಕೀಯ ಸ್ನಾತಕೋತ್ತರ ಪದವಿಯ ಒಂದು ಸೀಟನ್ನು ಸಂಪೂರ್ಣ ಕಾನೂನು ಬಾಹಿರವಾಗಿ ಹಂಚಿಕೆ ಮಾಡಿದ ಆರೋಪದಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ಹೈಕೋರ್ಟ್ ₹1 ಲಕ್ಷ ಮೊತ್ತದ ದಂಡ ವಿಧಿಸಿದೆ.

ಈ ಸಂಬಂಧ ಡಾ.ಡಿ.ರಾಜೇಶ್ ಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಟಿ.ಜೆ.ಶಿವಶಂಕರೇಗೌಡ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

ಅರ್ಜಿದಾರರ ಪರ ವಕೀಲೆ ಅಕ್ಕಮಹಾದೇವಿ ಹಿರೇಮಠ ಅವರು ವಾದ ಮನ್ನಿಸಿರುವ ನ್ಯಾಯಪೀಠ, ಉಸಿರಾಟ ಔಷಧಿ ವಿಭಾಗದಲ್ಲಿ ಜೆ.ಪ್ರದೀಪ್‌ ನಾಯಕ್‌ ಎಂಬುವರಿಗೆ ಕಾನೂನು ಬಾಹಿರವಾಗಿ ಹಂಚಿಕೆ ಮಾಡಲಾಗಿದ್ದ ಸೀಟನ್ನು ರದ್ದುಪಡಿಸಿ ಅರ್ಜಿದಾರ ಡಾ.ರಾಜೇಶ್‌ ಕುಮಾರ್ ಅವರಿಗೆ ಹಂಚಿಕೆ ಮಾಡುವಂತೆ ನಿರ್ದೇಶಿಸಿದೆ. ಈ ಸಂಬಂಧ ಮುಂದಿನ ಎರಡು ವಾರಗಳಲ್ಲಿ ಸೂಕ್ತ ಆದೇಶ ಹೊರಡಿಸುವಂತೆ ನಿರ್ದೇಶಿಸಿದೆ.

ದಂಡದ ಮೊತ್ತದಲ್ಲಿ ₹50 ಸಾವಿರವನ್ನು ಅರ್ಜಿದಾರರಿಗೆ ಹಾಗೂ ಉಳಿದ ಮೊತ್ತ ₹50 ಸಾವಿರವನ್ನು ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್‌ ಕಚೇರಿಯಲ್ಲಿ ಪಾವತಿಸುವಂತೆ ನ್ಯಾಯಪೀಠ ಆದೇಶಿಸಿದೆ.

ಪ್ರಕರಣವೇನು?: ಜಯದೇವ ಹೃದಯ ರಕ್ತನಾಳದ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಸಹಾಯಕ ಶಸ್ತ್ರಚಿಕಿತ್ಸಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸೇವಾನಿರತ ಡಾ.ರಾಜೇಶ್‌ ಕುಮಾರ್‌ 2021ರ ಸೆಪ್ಟಂಬರ್ 11ರಂದು ನಡೆದ ಪಿಜಿ-ಸಿಇಟಿಗೆ ಹಾಜರಾಗಿದ್ದರು. ಸ್ವಾಯತ್ತ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪರಿಶಿಷ್ಟ ಜಾತಿ ಕೋಟಾದ ಅಡಿಯಲ್ಲಿ ಸೀಟಿಗಾಗಿ ಅರ್ಜಿ ಸಲ್ಲಿಸಿದ್ದರು.

2022ರ ಫೆಬ್ರುವರಿಯಲ್ಲಿ ನಡೆದ ಮೊದಲ ಸುತ್ತಿನ ಕೌನ್ಸಿಲಿಂಗ್‌ನಲ್ಲಿ ಡಾ.ರಾಜೇಶ್‌ ಕುಮಾರ್‌ ಅವರಿಗೆ ರಾಜೀವ್ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಚೆಸ್ಟ್ ಡಿಸೀಸ್‌ನಲ್ಲಿ ಸ್ನಾತಕೋತ್ತರ ವೈದ್ಯಕೀಯ ಪದವಿಗೆ ಸೀಟು ಹಂಚಿಕೆಯಾಗಿತ್ತು.

2022ರ ಮಾರ್ಚ್ 2ರಂದು ವೈದ್ಯಕೀಯ ಶಿಕ್ಷಣ ಇಲಾಖೆಯು ಕೆಇಎಗೆ ವಾಟ್ಸ್‌ ಆ್ಯಪ್‌ ಮೂಲಕ ಪತ್ರ ರವಾನಿಸಿ ರಾಜೇಶ್‌ ಕುಮಾರ್‌ ಅವರಿಗೆ ಹಂಚಿಕೆಯಾಗಿದ್ದ ಸೀಟನ್ನು  ರದ್ದುಪಡಿಸಿರುವುದಾಗಿ ತಿಳಿಸಿತ್ತು. ಆದರೆ, ಈ ಸೀಟು ಎರಡನೇ ಸುತ್ತಿನ ಕೌನ್ಸಿಲಿಂಗ್‌ನಲ್ಲಿ ಖಾಲಿ ಇರುವ ಬಗ್ಗೆ ಕಾಣಿಸಿರಲಿಲ್ಲ. ಏತನ್ಮಧ್ಯೆ, ಇದೇ ಸೀಟನ್ನು ಪ್ರದೀಪ್ ನಾಯಕ್‌ ಅವರಿಗೆ ಹಂಚಿಕೆ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಡಾ.ರಾಜೇಶ್ ಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT