ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುರ್ತುಪರಿಸ್ಥಿತಿ ಹೇರಿಕೆ ಸಂವಿಧಾನದತ್ತ ಅವಕಾಶ: ಬಿ.ಕೆ.ಹರಿಪ್ರಸಾದ್‌

ಬಿಜೆಪಿ ನಾಯಕರಿಗೆ ಬುದ್ಧಿ ಭ್ರಮಣೆ: ಬಿ.ಕೆ.ಹರಿಪ್ರಸಾದ್‌
Published 3 ಜುಲೈ 2024, 15:44 IST
Last Updated 3 ಜುಲೈ 2024, 15:44 IST
ಅಕ್ಷರ ಗಾತ್ರ

ಬೆಂಗಳೂರು: ‘ಇಂದಿರಾ ಗಾಂಧಿಯವರು ತುರ್ತುಪರಿಸ್ಥಿತಿಯ ಹೇರಿಕೆಗೆ ಕಾರಣವಾದ ಸಂದರ್ಭ ಸಾರ್ವಜನಿಕ ವಲಯದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಲೇ ಇಲ್ಲ. ಹೀಗಾಗಿ ಈ ಬಗ್ಗೆ ತಪ್ಪು ಕಲ್ಪನೆಗಳು, ಬೇಕಾಬಿಟ್ಟಿಯಾದ ವಿಶ್ಲೇಷಣೆಗಳು ನಡೆಯುತ್ತಿವೆ’ ಎಂದು ಕಾಂಗ್ರೆಸ್‌ ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯ ಬಿ.ಕೆ. ಹರಿಪ್ರಸಾದ್ ಅಭಿಪ್ರಾಯಪಟ್ಟರು

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘‌ತುರ್ತು ಪರಿಸ್ಥಿತಿ ಎಂಬುದು ಸಂವಿಧಾನೇತರ ವಿಷಯವಾಗಿರಲಿಲ್ಲ. ತುರ್ತು ಪರಿಸ್ಥಿತಿ ಹೇರುವುದು ಸಂವಿಧಾನವೇ ಕೊಟ್ಟ ನಿಬಂಧನೆ ಅಥವಾ ಅವಕಾಶ’ ಎಂದು ಪ್ರತಿಪಾದಿಸಿದರು.

‘ತುರ್ತುಪರಿಸ್ಥಿತಿಗೆ 50 ವರ್ಷಗಳಾಗಿದ್ದು ಈ ಸಂದರ್ಭದಲ್ಲಿ ಅಸಾಂವಿಧಾನಿಕ ಪದಗಳನ್ನು ಬಳಸಲಾಗಿದೆ. ದೇಶದ ಮೇಲೆ ಬಾಹ್ಯ ದಾಳಿ ಹಾಗೂ ಆಂತರಿಕ ಗದ್ದಲ ಇದ್ದಾಗ ತುರ್ತುಪರಿಸ್ಥಿತಿ ಹೇರಬಹುದು ಎಂದು ಸಂವಿಧಾನದಲ್ಲಿ ಸ್ಪಷ್ಟವಾಗಿ ತಿಳಿಸಿದೆ. ದೇಶದಲ್ಲಿ ರಾಷ್ಟ್ರ ವಿರೋಧಿ ಶಕ್ತಿಗಳನ್ನು ಹತ್ತಿಕ್ಕಿ, ಪರಿಸ್ಥಿತಿ ನಿಭಾಯಿಸಲು ಇಂದಿರಾ ಗಾಂಧಿ ಸಂವಿಧಾನಬದ್ಧವಾಗಿ ತುರ್ತು ಪರಿಸ್ಥಿತಿ ಹೇರಿದ್ದರು’ ಎಂದರು.

‘ಇಂದಿರಾ ಗಾಂಧಿ ಎಂದಿಗೂ ತಮ್ಮ ಎದುರಾಳಿಗಳ ಮನೆ ಮುಂದೆ ಬುಲ್ಡೋಜರ್ ಕಳುಹಿಸಲಿಲ್ಲ. ಐಎಎಸ್ ಅಧಿಕಾರಿಗಳನ್ನು ಬಂಧಿಸಿರಲಿಲ್ಲ. ನಕಲಿ ಎನ್‌ಕೌಂಟರ್‌ ಮಾಡಲಿಲ್ಲ. ಕಾಂಗ್ರೆಸ್ ಪಕ್ಷ ಯಾವುದೇ ರೀತಿ ಅಸಾಂವಿಧಾನಿಕ ಕ್ರಮ ಕೈಗೊಂಡಿಲ್ಲ. ತುರ್ತುಪರಿಸ್ಥಿತಿ ನಂತರವೂ ಜನ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿ ಗೆಲ್ಲಿಸಿದ್ದರು’ ಎಂದರು.

ಬಿಜೆಪಿ ನಾಯಕರಿಗೆ ಬುದ್ಧಿಭ್ರಮಣೆ: ‘ಲೋಕಸಭೆ ಚುನಾವಣೆಯಲ್ಲಿ ರಾಮಮಂದಿರ ನಿರ್ಮಾಣದ ಹೊರತಾಗಿಯೂ ಉತ್ತರಪ್ರದೇಶದಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದ ನಂತರ ಬಿಜೆಪಿ ನಾಯಕರು ಬುದ್ಧಿಭ್ರಮಣೆಗೆ ಒಳಗಾಗಿದ್ದಾರೆ. ರಾಹುಲ್ ಗಾಂಧಿ ಸಾಂವಿಧಾನಿಕವಾಗಿ ವಿರೋಧ ಪಕ್ಷದ ನಾಯಕರಾಗಿ‌ದ್ದು, ಅವರ ಬಗ್ಗೆ ಪ್ರಧಾನಿ ಮೋದಿ ಮಾತನಾಡುತ್ತಿರುವುದು ಬುದ್ಧಿಭ್ರಮಣೆ ಆಗಿರುವುದಕ್ಕೆ ಪುರಾವೆ’ ಎಂದರು.

‘ಮೋದಿ ಅವರ ಬಗ್ಗೆ ರಾಹುಲ್ ಗಾಂಧಿ ತಪ್ಪಾಗಿ ಮಾತನಾಡಿದ್ದರೆ, ಅವರನ್ನೇ ನೇರವಾಗಿ ಪ್ರಶ್ನೆ ಮಾಡಬಹುದಾಗಿತ್ತು. ಆದರೆ, ಬಾಲಕ ಬುದ್ಧಿ, ಬಚ್ಚಾ ಎಂಬ ಪದ ಬಳಕೆ ಮಾಡಿದ್ದಾರೆ. ಆ ಮೂಲಕ, ದೇಶದ ಮಕ್ಕಳನ್ನು ಅವಹೇಳನ ಮಾಡಿದ್ದಾರೆ’ ಎಂದರು.

‘ಮೋದಿ ತಮ್ಮ ಭಾಷಣದಲ್ಲಿ ರಾಹುಲ್ ಗಾಂಧಿ ಅವರನ್ನು ಟೀಕೆ ಮಾಡುವುದರಲ್ಲೇ ನಿರತರಾದರು. ನನ್ನ ರಾಜಕೀಯ ಇತಿಹಾಸದಲ್ಲಿ ಇಷ್ಟು ಕೀಳುಮಟ್ಟದ ಭಾಷಣ ಮಾಡಿದ ಮತ್ತೊಬ್ಬ ಪ್ರಧಾನಿ ಇಲ್ಲ. ಬಿಜೆಪಿಯವರೇ ನಿಜವಾದ ಹಿಂದೂ ವಿರೋಧಿಗಳು’ ಎಂದೂ ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT